ADVERTISEMENT

ಪಿಸ್ತೂಲ್‌ ತೋರಿಸಿ ಬೆದರಿಕೆ: ಮಹಿಳೆ ದೂರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 9:24 IST
Last Updated 25 ಜುಲೈ 2017, 9:24 IST

ಮಂಗಳೂರು: ಮೋಟಾರ್‌ ಬೈಕ್‌ಗೆ ಸಂಬಂಧಿಸಿದ ವಿವಾದದಲ್ಲಿ ಸಂಬಂಧಿ ಯುವಕನನ್ನು ಹುಡುಕಿಕೊಂಡು ಭಾನು ವಾರ ರಾತ್ರಿ ಮನೆಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪಂಜಿಮೊಗರು ನಿವಾಸಿ ಅಮಿತಾ ಡಿಸೋಜ ಎಂಬುವವರು ಕಾವೂರು ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ. ಈ ಸಂಬಂಧ ಇಬ್ಬ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ನನ್ನ ಗಂಡ ರೋನಿ ಡಿಸೋಜ ಅವರ ಸಹೋದರನ ಮಗ ವಿಶ್ವಾಸ್‌ ಮತ್ತು ಸಮೀಪದಲ್ಲೇ ವಾಸಿಸುವ ರವಿ ಎಂಬ ಯುವಕನ ಮಧ್ಯೆ ಶನಿವಾರ ರಾತ್ರಿ ಬೈಕ್‌ ಒಂದರ ವಿಚಾರದಲ್ಲಿ ಘರ್ಷಣೆ ಆಗಿತ್ತು. ಆಗ ನಾವು ಗಲಾಟೆಯನ್ನು ಬಿಡಿಸಿ ರವಿಯನ್ನು ಮನೆಗೆ ಕಳುಹಿಸಿದ್ದೆವು. ಭಾನುವಾರ ರಾತ್ರಿ 10.30ರ ಸುಮಾರಿಗೆ ನಿಸಾರ್‌ ಎಂಬಾತನ ಜೊತೆ ನಮ್ಮ ಮನೆ ಆವರಣಕ್ಕೆ ಬಂದ ರವಿ ಪುನಃ ವಿಶ್ವಾಸ್‌ ಎಲ್ಲಿದ್ದಾನೆ ಎಂದು ಹುಡುಕಾಟ ಆರಂಭಿಸಿದ. ಆತ ಎದುರಾದಾಗ ಇಬ್ಬರೂ ಸೇರಿ ಆತನ ಮೇಲೆ ಹಲ್ಲೆಗೆ ಯತ್ನಿಸಿದರು’ ಎಂದು ಅಮಿತಾ ದೂರಿನಲ್ಲಿ ತಿಳಿಸಿದ್ದಾರೆ.

‘ವಾಗ್ವಾದ ನಡೆಯುತ್ತಿದ್ದಾಗ ಪ್ಯಾಂಟ್‌ ಜೇಬಿನಿಂದ ಪಿಸ್ತೂಲ್‌ ತೆಗೆದ ನಿಸಾರ್‌, ಅದನ್ನು ವಿಶ್ವಾಸ್‌ ಹಣೆಗೆ ಗುರಿಯಾಗಿಟ್ಟು ರವಿಯ ತಂಟೆಗೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ. ನಮ್ಮ ಮಕ್ಕಳಾದ ರೆನಿಟಾ ಮತ್ತು ರೀಮಾ ತಡೆಯಲು ಹೋದರು. ಅವರ ಮೇಲೆ ರವಿ ಮತ್ತು ನಿಸಾರ್‌ ಹಲ್ಲೆ ನಡೆಸಿದರು. ಆಗ ಸಹಾಯಕ್ಕಾಗಿ ಕೂಗಿಕೊಂಡೆವು. ಸಾರ್ವಜನಿಕರು ಬರುತ್ತಿರುವುದನ್ನು ಕಂಡ ಇಬ್ಬರೂ ಪರಾರಿಯಾದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

‘ಅಮಿತಾ ಡಿಸೋಜ ಅವರ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದೇವೆ. ರವಿ ಮತ್ತು ನಿಸಾರ್‌ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಕಾವೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.