ADVERTISEMENT

ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು: ಸಚಿವ ರೈ

ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿಗೆ ಪೌರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 11:49 IST
Last Updated 31 ಡಿಸೆಂಬರ್ 2017, 11:49 IST

ಮಂಗಳೂರು: ಸನಾತನ ಹಿಂದೂ ಧರ್ಮವು ವಸುಧೈವ ಕುಟುಂಬಕಂ ಎಂಬ ಆಶಯ ಹೊಂದಿದೆ. ಅಂದರೆ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂಬುದು ನಮ್ಮ ಪೂರ್ವಜರು ಹೇಳಿ ಕೊಟ್ಟ ಪಾಠ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಉಡುಪಿಯ ಭಾವೀ ಪರ್ಯಾಯ ಪೀಠಾಧಿಪತಿ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಶನಿವಾರ ನಗರದ ಪುರಭವನದಲ್ಲಿ ಮಂಗಳೂರು ಮಹಾಜನತೆಯ ಪರವಾಗಿ ನಡೆದ ‘ಪೌರ ಸನ್ಮಾನ ಮತ್ತು ಅಭಿನಂದನಾ ಸಭೆ’ಯಲ್ಲಿ ಅವರು ವಿದ್ಯಾಧೀಶ ಸ್ವಾಮೀಜಿ ಅವರಿಗೆ ಫಲ ಪುಷ್ಪ ಕಾಣಿಕೆ ನೀಡಿ ಸನ್ಮಾನಿಸಿದ ಬಳಿಕ ಮಾತನಾಡಿದರು.

ಪರಧರ್ಮ ಸಹಿಷ್ಣುತೆಯನ್ನು ಬೋಧಿಸಿದ ಹಿಂದೂ ಧರ್ಮದ ಮೂಲ ಸಿದ್ಧಾಂತವೇ ಮನುಷ್ಯ ಪ್ರೀತಿ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಂತ್ರ ವೇದಿಕೆಗಳಿಗೆ ಮಾತ್ರ ಸೀಮಿತವಾಗದೇ ಎಲ್ಲರೂ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ADVERTISEMENT

ಮನುಷ್ಯರು ಜಾತಿ ಮತ್ತು ಧರ್ಮವನ್ನು ಪ್ರೀತಿಸುತ್ತಿದ್ದಾರೆ. ಮನು ಷ್ಯರನ್ನೇ ಪ್ರೀತಿಸುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಆದ್ದರಿಂದ ಮುಂದಿನ ಪರ್ಯಾಯ ಅವಧಿಯಲ್ಲಿ ಶಾಂತಿ ಸೌಹಾರ್ದತೆ ಮೂಡಲಿ ಎಂದರು.

ಅಭಿನಂದನಾ ಭಾಷಣ ಮಾಡಿದ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್‌. ಗಣೇಶ್‌ ರಾವ್‌ ಅವರು, ‘ಯತಿಯಾದವರು ಪೀಠದ ಮೋಹ ಹೊಂದಿರಬಾರದು ಎಂಬ ಸಂದೇಶವನ್ನು ಸಾರುವ ಪರ್ಯಾಯ ಪರಿಕಲ್ಪನೆ ಉತ್ತಮವಾದುದು’ ಎಂದು ಹೇಳಿದರು.

‘ಪೂರ್ವಾಶ್ರಮದಲ್ಲಿ ಯತಿಗಳು ಶಿಬರೂರಿನ ತಂತ್ರಿ ಮನೆತನಕ್ಕೆ ಸೇರಿದ ವರು. ನಿರಂತರ ಜಪ ಮತ್ತು ಸಾಧನೆ ಅವರ ಶಕ್ತಿ. ದ್ವಾರಕೆ, ಹರಿದ್ವಾರ, ಪ್ರಯಾಗ ಸೇರಿದಂತೆ ಹಲವೆಡೆಗಳಲ್ಲಿ ಛತ್ರಗಳನ್ನು ಪಲಿಮಾರು ಮಠದ ವತಿಯಿಂದ ತೆರೆಯಲಾಗಿದೆ’ ಎಂದು ಯತಿಗಳನ್ನು ಪರಿಚಯಿಸುತ್ತ ತುಳುನಾಡು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್‌ ಹೇಳಿದರು.

ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ತಮ್ಮ ಮುಂದಿನ ಯೋಜನೆಗಳು ಮತ್ತು ಕೃಷ್ಣ ಸೇವೆಯ ಕುರಿತು ಮಾತನಾಡಿದರು.

ಕರ್ಣಾಟಕ ಬ್ಯಾಂಕ್‌ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅಧ್ಯಕ್ಷತೆ ವಹಿಸಿದ್ದರು. ಎಜೆ ಗ್ರೂಪ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ರವಿಚಂದ್ರನ್‌, ಕೆ.ಎಸ್‌. ಕಲ್ಲೂರಾಯ, ಪದ್ಮನಾಭ ಪೈ, ಕೃಷ್ಣ ಮೂರ್ತಿ, ಸುಧಾಕರ ರಾವ್‌ ಪೇಜಾವರ ಇದ್ದರು. ಪ್ರದೀಪ್‌ ಕುಮಾರ್‌ ಕಲ್ಕೂರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.