ADVERTISEMENT

ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅನುಮತಿ

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:55 IST
Last Updated 21 ಜುಲೈ 2017, 6:55 IST

ಬೆಳ್ತಂಗಡಿ: ಪಟ್ಟಣದಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕುವ ಬಗ್ಗೆ ಇದ್ದ ನಿರ್ಬಂಧವನ್ನು ಸಡಿಲಿಸುವ ಮತ್ತು ಸಂತೆಕಟ್ಟೆಯಲ್ಲಿ ನೂತನ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಮಂಗಳವಾರ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಿರುವ ಬಗ್ಗೆ ಇರುವ ಕಾನೂನು ಎಲ್ಲೆಡೆ ಒಂದೇ ಆಗಿದ್ದರೂ, ಕೆಲವು ತಾಲ್ಲೂಕುಗಳಲ್ಲಿ ಕಾನೂನು ಪಾಲನೆ ಆಗುತ್ತಿಲ್ಲ. ಹೀಗಾಗಿ ಬೆಳ್ತಂಗಡಿಯಲ್ಲಿ ಮಾತ್ರ ಏಕೆ ಎಂಬ ದೃಷ್ಟಿಯಿಂದ ಇಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಲು ಅನುಮತಿ ನೀಡಲು ತೀರ್ಮಾನಿಸಲಾಗಿದೆ.

ಇದರಿಂದ ಪಂಚಾಯಿತಿಗೆ  ಬರಬೇಕಾದ ಸುಮಾರು ₹40 ಸಾವಿರ ಆದಾಯದ ಖೋತಾ ತಡೆಯಬಹುದಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ADVERTISEMENT

ಈ ಮಧ್ಯೆ ಸಂತೆಕಟ್ಟೆಯ ಹಳೆಕಟ್ಟಡವನ್ನು ಕೆಡವಲು ಪಂಚಾಯಿತಿಯಲ್ಲಿ ಚರ್ಚೆ ನಡೆದು, ಅನುಮತಿ ಏಕೆ ಪಡೆಯಲಾಗಿಲ್ಲ ಎಂಬ ವಿಚಾರವಾಗಿ ಸದಸ್ಯ ಜೇಮ್ಸ್ ಡಿಸೋಜ ಅವರು ಪ್ರಶ್ನಿಸಿದಾಗ, ಅಧ್ಯಕ್ಷ ಹಾಗೂ ಸದಸ್ಯರ ನಡುವೆ ಕೆಲ ವೇಳೆ ವಾಗ್ವಾದ ನಡೆಯಿತು. ‘ಮಳೆಗಾಲದ ಮೊದಲು ಅದನ್ನು ಕೆಡವುದು ಅಗತ್ಯವಿತ್ತು. ಕೆಲವು ವ್ಯವಸ್ಥೆಗಳಿಗಾಗಿ ಕೂಡಲೇ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡ, ಗುಂಡಿಗಳನು ನಿರ್ಮಾಣವಾಗಿದ್ದು, ಅದನ್ನು ಮುಚ್ಚಬೇಕು.  ಕೋರ್ಟ್ ಬಳಿ ಇರುವ ಕೆರೆಗೆ ಚರಂಡಿ ನೀರು ಸೇರದಂತೆ ತಡೆಯುವ ನಿಟ್ಟಿನಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಲು ಎಂಜಿನಿಯರ್ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಉಪಾಧ್ಯಕ್ಷ ಜಗದೀಶ್ ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷಿಸಬೇಕು ಎಂದು ಆಸ್ಪತ್ರೆಯ ವೈದ್ಯರಿಗೆ ಸೂಚಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಕಸ ಸಂಗ್ರಹವಾಗಿರುವುದನ್ನು ಪೌರ ಕಾರ್ಮಿಕರಿಗೆ ಹೇಳಿ ತೆಗೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪಟ್ಟಣ ಪಂಚಾಯುತಿ ವ್ಯಾಪ್ತಿಯಲ್ಲಿನ ಜನನ-ಮರಣ ಪ್ರಮಾಣಪತ್ರದ ತಿದ್ದುಪಡಿಯನ್ನು ಇನ್ನು ಮುಂದೆ ಪಂಚಾಯಿತಿ ಕಚೇರಿಯಲ್ಲಿ ಸೂಕ್ತ ಶುಲ್ಕ ತೆಗೆದುಕೊಂಡು ಮಾಡಿ ಎಂದು ನ್ಯಾಯಾಧೀಶರಿಂದ ಪತ್ರ ಬಂದಿದೆ.

ಇದರಿಂದ ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವುದು ತಪ್ಪಲಿದೆ ಎಂದರು. ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಎಂಜಿನಿಯರ್ ಮಹಾವೀರ ಅರಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.