ADVERTISEMENT

ಬಾರ್‌ಗೆ ಮೀಸಲಿದ್ದ ಕಟ್ಟಡಕ್ಕೆ ಕಲ್ಲು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 4:52 IST
Last Updated 29 ನವೆಂಬರ್ 2017, 4:52 IST

ಉಳ್ಳಾಲ: ತಲಪಾಡಿ ನಾರ್ಲಪಡೀಲಿನಲ್ಲಿ ಬಾರ್ ವಿರೋಧಿಸಿ ನಡೆದ ಪ್ರತಿಭಟನೆ ಬೆನ್ನಲ್ಲೇ, ಬಾರಿಗಾಗಿ ನಿಗದಿಪಡಿಸಿದ ಕಟ್ಟಡದ ಕಿಟಕಿ ಗಾಜು ಹಾಗೂ ಇತರೆ ಸ್ವತ್ತುಗಳನ್ನು ತಂಡವೊಂದು ಪುಡಿ ಮಾಡಿದೆ.

ತಲಪಾಡಿ ನಾರ್ಲಪಡೀಲಿನಲ್ಲಿ ತೆರಳುವ ರಸ್ತೆ ಬದಿಯಲ್ಲಿ ಬಾರ್ ಕಟ್ಟಡವಿದ್ದು, ಸಂಜೆ ವೇಳೆ ಕೆಲಸ ದಿಂದ ತೆರಳುವ ಮಹಿಳೆಯರಿಗೆ ತೊಂದ ರೆಯಾಗಲಿದೆ. ಕಾರ್ಮಿಕರು ದುಡಿದು ತರುವ ಹಣವನ್ನು ಬಾರಿನಲ್ಲೇ ಸುರಿದು ಖಾಲಿ ಮಾಡುವ ವಾತಾವರಣ ನಿರ್ಮಾ ಣವಾಗುತ್ತದೆ. ಬಾರ್ ತೆರೆದಲ್ಲಿ ಗ್ರಾಮದ ನೆಮ್ಮದಿ ಹಾಳಾಗುವುದು ನಿಶ್ಚಿತ ಎಂದು ಆರೋಪಿಸಿ ಸೋಮವಾರ ಬಾರ್ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯಲ್ಲಿ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನ್ನು ಶೆಟ್ಟಿ, ವೈಭವ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುರೇಖಾ ಚಂದ್ರಹಾಸ್, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಮನವಿ ಸ್ವೀಕರಿಸಿದ ಸಚಿವ ಖಾದರ್, ಅಬಕಾರಿ ಸಚಿವರಿಗೆ ಹಾಗೂ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸುವ ಭರವಸೆ ನೀಡಿದ್ದರು.

ADVERTISEMENT

ಪ್ರತಿಭಟನೆ ನಡೆದ ದಿನ ರಾತ್ರಿಯೇ ತಂಡವೊಂದು ಬಾರ್‌ಗೆ ಉದ್ದೇಶಿತ ಕಟ್ಟಡದ ಗಾಜು, ಪೈಪ್ ವ್ಯವಸ್ಥೆ ಸಂಪೂರ್ಣವಾಗಿ ಪುಡಿ ಮಾಡಿದೆ. ಘಟನೆಯಿಂದ ಕಟ್ಟಡ ಮಾಲೀಕರಿಗೆ ಅಪಾರ ನಷ್ಟ ಉಂಟಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಕ್ರಮ ಮದ್ಯದದಂಗಡಿ: ಇದೇ ದಾರಿಯಲ್ಲಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಲಾ ಗುತ್ತಿದೆ. ಇದೇ ಅಂಗಡಿ ಮಾಲೀಕನ ಮುತುವರ್ಜಿಯಲ್ಲಿ ಪ್ರತಿಭಟನೆಯೂ ನಡೆದಿದ್ದು, ಬಾರ್ ತೆರೆದಲ್ಲಿ ಅಂಗಡಿಯ ವ್ಯಾಪಾರದಲ್ಲಿ ನಷ್ಟ ಉಂಟಾಗುವ ಉದ್ದೇಶದಿಂದ ಕಾನೂನಿನಡಿ ಬರುವ ಬಾರ್‌ಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೆಲವರು ದೂರುತ್ತಿದ್ದಾರೆ.

ಬಾರ್‌ನಿಂದ ತೊಂದರೆ ಆಗುವು ದಾಗಿ ದೂರುತ್ತಿರುವ ಗ್ರಾಮಸ್ಥರಿಗೆ ಅಕ್ರಮ ಮದ್ಯ ಮಾರಾಟದ ಅಂಗಡಿ ಯಿಂದ ತೊಂದರೆ ಆಗುತ್ತಿಲ್ಲ. ಕಲ್ಲು ಎಸೆದವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವ ಜತೆಗೆ ಸಾಧ್ಯವಾದಲ್ಲಿ ಅಕ್ರಮ ಅಂಗಡಿಯನ್ನು ಬಂದ್‌ ಮಾಡಲಿ ಎಂದು ಬಾರ್ ಪರವಾಗಿರುವ ಮಂದಿ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.