ADVERTISEMENT

ಬೀಡಿ ಕಾರ್ಮಕಳ ಅತ್ಯಾಚಾರ, ಕೊಲೆ ಸಯನೈಡ್‌ ಮೋಹನ್‌ ಅಪರಾಧಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 19:30 IST
Last Updated 13 ಸೆಪ್ಟೆಂಬರ್ 2017, 19:30 IST

ಮಂಗಳೂರು: ಪುತ್ತೂರು ತಾಲ್ಲೂಕಿನ ಪಟ್ಟೆಮಜಲು ಗ್ರಾಮದ 22 ವರ್ಷ ವಯಸ್ಸಿನ ಬೀಡಿ ಕಾರ್ಮಿಕಳೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಸಯನೈಡ್‌ ತಿನ್ನಿಸಿ ಕೊಲೆಗೈದ ಪ್ರಕರಣದಲ್ಲಿ ಕೆ.ಮೋಹನ್‌ ಕುಮಾರ್‌ ಅಲಿಯಾಸ್‌ ಸಯನೈಡ್‌ ಮೋಹನ್‌ ಅಪರಾಧಿ ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ಹೇಳಿದೆ.

2009ರ ಸೆಪ್ಟೆಂಬರ್ 19ರಂದು ಯುವತಿಯ ಶವ ಮಡಿಕೇರಿಯ ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಪತ್ತೆಯಾಗಿತ್ತು. 2004ರಿಂದ 2009ರ ಅವಧಿಯಲ್ಲಿ ಸಯನೈಡ್‌ ಮೋಹನ್‌ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಸಯನೈಡ್‌ ತಿನ್ನಿಸಿ ಕೊಲೆಗೈದಿದ್ದಾನೆ ಎಂಬ ಆರೋಪವಿದೆ. ಅವುಗಳಲ್ಲಿ ಪಟ್ಟೆಮಜಲು ಯುವತಿಯ ಪ್ರಕರಣವೂ ಒಂದು.

‘2009ರ ಸೆ.17ರಂದು ಉದ್ಯೋಗವೊಂದರ ಸಂದರ್ಶನದ ನೆಪದಲ್ಲಿ ಮೋಹನ್‌ ಮೃತ ಯುವತಿಯನ್ನು ಮಡಿಕೇರಿಗೆ ಕರೆದೊಯ್ದಿದ್ದ. ಅಲ್ಲಿನ ಲಾಡ್ಜ್‌ ಒಂದರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಗರ್ಭ ಧರಿಸದಂತೆ ತಡೆಯುವ ಔಷಧಿ ಎಂಬುದಾಗಿ ನಂಬಿಸಿ ಆಕೆಗೆ ಸಯನೈಡ್‌ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಮೃತಪಟ್ಟಿದ್ದರು’ ಎಂದು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜೂಡಿತ್‌ ಓ.ಎಂ. ಕ್ರಾಸ್ತಾ, ಆರೋಪಿಯ ಸ್ವಯಂ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಬಂಟ್ವಾಳದ ಒಬ್ಬ ಮ್ಯಾಜಿಸ್ಟ್ರೇಟ್‌ ಸೇರಿದಂತೆ 44 ಸಾಕ್ಷಿಗಳ ಪಾಟಿಸವಾಲು ನಡೆಸಿದ್ದರು. ಅಪರಾಧಿಯ ಕೊಲೆ ಸಂಚಿನಿಂದ ಪಾರಾಗಿ ಬಂದಿದ್ದ ಯುವತಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ, ಮೋಹನ್‌ಕುಮಾರ್‌ನ ಅಪರಾಧ ಕೃತ್ಯಗಳ ಸ್ವರೂಪದ ಬಗ್ಗೆ ಸಾಕ್ಷ್ಯ ಹೇಳಿದ್ದರು. ಈತನ ವಿರುದ್ಧದ ಎಲ್ಲ ಪ್ರಕರಣಗಳಲ್ಲೂ ಈಕೆ ಪ್ರಮುಖ ಸಾಕ್ಷಿಯಾಗಿದ್ದಾರೆ. ಮೃತಳ ಸಂಬಂಧಿಗಳು ಆಕೆಯ ದೇಹದ ಮೇಲಿಂದ ಮೋಹನ್‌ಕುಮಾರ್‌ ಹೊತ್ತೊಯ್ದಿದ್ದ ಆಭರಣಗಳನ್ನು ವಿಚಾರಣೆ ವೇಳೆ ಗುರುತಿಸಿದ್ದರು.

ಬುಧವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ, ‘ಮೋಹನ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಾಖಲಿಸಿದ್ದ ಕೊಲೆ, ಅತ್ಯಾಚಾರ, ದರೋಡೆ ಮತ್ತು ವಿಷಪ್ರಾಶನ ಆರೋಪಗಳು ಸಾಬೀತಾಗಿವೆ’ ಎಂದು ಸಾರಿದರು. ಪ್ರಾಸಿಕ್ಯೂಷನ್‌ ಮತ್ತು ಮೋಹನ್‌ ಕುಮಾರ್‌ (ಸ್ವಯಂ ವಾದಿಸುತ್ತಿದ್ದಾನೆ) ವಾದ ಆಲಿಸಿದ ನ್ಯಾಯಾಧೀಶರು, ಶಿಕ್ಷೆ ಪ್ರಮಾಣ ಪ್ರಕಟಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.