ADVERTISEMENT

‘ಭಾಷೆಗಾಗಿ ತುಳುವರು ಒಂದಾಗಬೇಕು’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 4:52 IST
Last Updated 24 ಡಿಸೆಂಬರ್ 2017, 4:52 IST

ಮಂಗಳೂರು: ‘2,200 ವರ್ಷಗಳ ಇತಿಹಾಸವಿರುವ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವುದಕ್ಕಾಗಿ ಸಮಸ್ತ ತುಳು ಭಾಷಿಕರು ಒಗ್ಗೂಡಿ ಹೋರಾಟ ನಡೆಸಬೇಕು’ ಎಂದು ಉದ್ಯಮಿ ಎಂ.ಇ.ಮೂಳೂರು ಹೇಳಿದರು.

ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ವತಿಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ಶನಿವಾರ ಆಯೋಜಿಸಿದ್ದ ‘ತುಳು ನಾಡೋಚ್ಚಯ– 2017’ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ತುಳು ಭಾಷಿಕರು ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರೊಂದಿಗೆ ಸೌಹಾರ್ದದಿಂದ ಬದುಕುವವರು. ಸಹಿಷ್ಣುತೆ ಮತ್ತು ಮಾನವೀಯತೆ ತುಳುನಾಡಿನ ಬೇರುಗಳು. ಈಗ ತುಳು ಭಾಷೆಗೆ ಸಂವಿಧಾನಬದ್ಧ ಗೌರವಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು’ ಎಂದರು.

ಮುಖ್ಯ ಅತಿಥಿಯಾಗಿದ್ದ ಪಿಲಿಕುಳ ಸಂಸ್ಕೃತಿ ಗ್ರಾಮದ ಅಧ್ಯಕ್ಷ ಡಾ.ಚಿನ್ನಪ್ಪಗೌಡ ಮಾತನಾಡಿ, ‘ಕೃಷಿಯಲ್ಲಿ ಪಲ್ಲಟಗಳಾಗುವುದರೊಂದಿಗೆ ತುಳುನಾಡಿನ ಸಂಸ್ಕೃತಿಯಲ್ಲೂ ಬದಲಾವಣೆಗಳಾಗಿವೆ. ಈಗ ಗದ್ದೆಗಳ ಸಂಖ್ಯೆ ಕಡಿಮೆಯಾಗಿ, ಹೆಚ್ಚಿನ ಸಂಖ್ಯೆಯ ತೋಟಗಳು ಬಂದಿವೆ. ಗದ್ದೆಗಳೊಂದಿಗೆ ಸಂಸ್ಕೃತಿಯ ಸೊಗಡೂ ನಶಿಸಿಹೋಗಿದೆ. ಅಡಿಕೆ ಮಾತ್ರ ನಮಗೆ ಸಿಕ್ಕಿದೆ’ ಎಂದು ಹೇಳಿದರು.

ADVERTISEMENT

ತುಳು ಭಾಷೆಯಲ್ಲಿ ನೋಡುವ ಆಸಕ್ತಿ ಇದೆ. ಆದರೆ, ತುಳು ಸಾಹಿತ್ಯ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ತುಳು ಭಾಷೆ ಉಳಿದರೆ ಮಾತ್ರವೇ ತುಳುನಾಡಿನ ಸಂಸ್ಕೃತಿಯ ಬೇರುಗಳೂ ಉಳಿಯುತ್ತವೆ. ತುಳು ಭಾಷೆ ಮತ್ತು ಸಂಸ್ಕೃತಿ ಎರಡನ್ನೂ ರಕ್ಷಿಸುವ ದಿಸೆಯಲ್ಲಿ ಏನನ್ನಾದರೂ ಮಾಡಬೇಕೆಂಬ ಹಂಬಲ ಎಲ್ಲ ತುಳು ಭಾಷಿಕರಲ್ಲಿ ಮೂಡಬೇಕು ಎಂದರು.

ತುಳು ನಾಡೋಚ್ಚಯದ ಅಧ್ಯಕ್ಷ ಡೇವಿಡ್‌ ಫ್ರಾಂಕ್‌ ಮಾತನಾಡಿ, ‘ತುಳು ಭಾಷೆಯ ರಥವನ್ನು ಎಳೆಯಲು ಹೆಚ್ಚು ಮಂದಿ ಕೈಜೋಡಿಸಬೇಕು. ಆಗ ಮಾತ್ರವೇ ನಮ್ಮ ಭಾಷೆಗೆ ಸಾಂವಿಧಾನಿಕ ಮಾನ್ಯತೆಯನ್ನು ದೊರಕಿಸಿಕೊಡಲು ಸಾಧ್ಯವಾಗುತ್ತದೆ. ನಮ್ಮ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಪಡೆದೇ ತೀರುತ್ತೇವೆ ಎಂಬ ಹಟವನ್ನು ಬೆಳೆಸಿಕೊಂಡರೆ ಮಾತ್ರವೇ ತುಳು ಭಾಷಿಕರ ಹೋರಾಟಕ್ಕೆ ಜಯ ದೊರಕಲು ಸಾಧ್ಯ’ ಎಂದು ಹೇಳಿದರು.

ಸ್ಥಳೀಯ ಕ್ರೈಸ್ತ ಧರ್ಮಗುರು ಸಿಪ್ರಿಯನ್‌ ಪಿಂಟೋ ತುಳು ನಾಡೋಚ್ಚಯಕ್ಕೆ ಶುಭ ಕೋರಿದರು. ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್‌ ಮಾತನಾಡಿದರು. ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ.ಪ್ರಸನ್ನ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಕೆ.ವಿ.ರಾವ್‌, ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಡಾ.ಜಯಪ್ರಕಾಶ್ ಭಂಡಾರಿ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಜೆಪ್ಪು ಯೋಗೇಶ್ ಶೆಟ್ಟಿ, ತುಳು ನಾಡೋಚ್ಚಯ ಸಮಿತಿಯ ಪ್ರಧಾನ ರಾಜೇಶ್ ಆಳ್ವ, ಮಹಾನಗರ ಪಾಲಿಕೆ ಸದಸ್ಯೆ ಹೇಮಲತಾ, ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವೇದಿಕೆಯಲ್ಲಿದ್ದರು.

ಆಕರ್ಷಕ ಮೆರವಣಿಗೆ

ತುಳು ನಾಡೋಚ್ಚಯದ ಪ್ರಯುಕ್ತ ಶನಿವಾರ ಬೆಳಿಗ್ಗೆ ವಾಮಂಜೂರಿನ ಮಂಗಳಾ ವೃತ್ತದಿಂದ ಪಿಲಿಕುಳ ನಿಸರ್ಗ ಧಾಮದವರೆಗೆ ‘ತುಳುನಾಡ ಜನಪದ ದಿಬ್ಬಣ’ ಹೆಸರಿನಲ್ಲಿ ಆಕರ್ಷಕ ಮೆರವಣಿಗೆ ನಡೆಯಿತು. ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಕವಿತಾ ಸನಿಲ್‌ ಮೆರವಣಿಗೆಗೆ ಚಾಲನೆ ನೀಡಿದರು. ನೂರಾರು ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಚೆಂಡೆವಾದನ, ಡೋಲು ಕುಣಿತ, ಕೀಲು ಕುದುರೆ, ಗೊಂಬೆಗಳ ಕುಣಿತ, ಯಕ್ಷಗಾನದ ಗೊಂಬೆಗಳ ಕುಣಿತ, ಕೊರಗರ ಗಜಮೇಳ ಸೇರಿದಂತೆ ಹಲವು ಜನಪದ ಕಲೆಗಳನ್ನು ಪ್ರದರ್ಶಿಸುವ ತಂಡಗಳು ಮೆರವಣಿಗೆಯಲ್ಲಿದ್ದವು. ಸಮ್ಮೇಳನದ ಆವರಣದಲ್ಲಿ ತುಳು ಗ್ರಾಮೀಣ ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಪ್ರದರ್ಶನ ಮತ್ತು ತುಳು ಆಹಾರೋತ್ಸವವನ್ನೂ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.