ADVERTISEMENT

ಮಂತ್ರಾಲಯದ ಮೂಲ ಮೃತಿಕೆ ಶ್ರೇಷ್ಠ:

ಶ್ರೀಕ್ಷೇತ್ರ ರಾಘವೇಂದ್ರ ಸ್ವಾಮಿ ಮಂತ್ರಾಲಯದ ಸುಬುಧೇಂದ್ರ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 12:16 IST
Last Updated 25 ಏಪ್ರಿಲ್ 2018, 12:16 IST

ಸುಳ್ಯ: ‘ಮಂತ್ರಾಲಯದ ಮೂಲ ಮೃತ್ತಿಕೆ ಬಹಳ ಶ್ರೇಷ್ಠವಾಗಿದ್ದು, ಇದರಲ್ಲಿ ವಿಜ್ಞಾನಿಗಳಿಂದಲೂ ಕಂಡುಹಿಡಿಯಲಾಗದ ಶಕ್ತಿ ಅದರಲ್ಲಿದೆ. ಮೃತಿಕೆ ಅತೀಂದ್ರಿಯ ಶಕ್ತಿಯನ್ನು ಹೊಂದಿದೆ ’ಎಂದು ಶ್ರೀಕ್ಷೇತ್ರ ರಾಘವೇಂದ್ರ ಸ್ವಾಮಿ ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ಹೇಳಿದರು.

ಸುಳ್ಯದಲ್ಲಿ ಬೃಂದಾವನ ಸೇವಾ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀಗುರು ರಾಘವೇಂದ್ರ ಮತಿಗಳ ಬೃಂದಾವನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ರಾಘವೇಂದ್ರ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಮಾತನಾಡಿ, ‘ಅವಿಭಜಿತ ದ.ಕ ಜಿಲ್ಲೆ ದೇವಾಲಯಗಳ ಜಿಲ್ಲೆಯಾಗಿದ್ದು, ಸುಳ್ಯ ತಾಲ್ಲೂಕು ಅತೀ ಹೆಚ್ಚು ದೇಗುಲಗಳು ಇರುವ ದೇವಾಲಯಗಳ ತವರೂರು ಆಗಿದೆ. ರಾಘವೇಂದ್ರ ಮಠ ನಿರ್ಮಾಣಗೊಂಡಿರುವುದು ಸುಳ್ಯದ ಜನತೆಯ ಪುಣ್ಯದ ಫಲ’ ಎಂದರು.

ADVERTISEMENT

ಮಂಗಳೂರು ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಜಯರಾಮ ಉಡುಪ ಅತಿಥಿಗಳಾಗಿದ್ದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್‌ಕುಮಾರ್ ಮೇನಾಲ, ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಎಂ.ಎನ್, ರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳೀಕೃಷ್ಣ ಡಿ.ಆರ್ ವೇದಿಕೆಯಲ್ಲಿದ್ದರು. ಶ್ರೀರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಸ್ವಾಗತಿಸಿ, ಉಪನ್ಯಾಸಕಿ ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಭಜನೆ: ಶಿವಳ್ಳಿ ಸಂಪನ್ನದವರಿಂದ ಮತ್ತು ಮುಳ್ಯ ಶ್ರೀ ಮಹಾಗಣಪತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಬಳಿಕ ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿ ಸಂಗೀತ, ಸುಳ್ಯದ ಶ್ರೀ ಗುರುರಾಯರ ಬಳಗದ ಪುಟಾಣಿಗಳಿಂದ ಪ್ರಕಾಶ್ ಮೂಡಿತ್ತಾಯರ ಪರಿಕಲ್ಪನೆ ಮತ್ತು ನಿರ್ದೇಶನ, ಯಕ್ಷ ನಾಟ್ಯ ಸಂಯೋಜನೆ ವಾಸುದೇವ ರೈ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಭರತನಾಟ್ಯ ಸಂಯೋಜನೆ, ಕೃಷ್ಣಪ್ಪ ಬಂಬಿಲ ಅವರು ನಾಟಕ ಸಂಯೋಜನೆಗೊಳಿಸಿದ ದಶಾವತಾರ ಯಕ್ಷ- ಭರತ-ನಾಟಕ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.