ADVERTISEMENT

ಮುಂದಿನ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತುಳು ಸೇರ್ಪಡೆ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಧಿಕೃತಗೊಳ್ಳಲಿದೆ ತುಳು ಭಾಷಾ ಕಲಿಕೆ

ಕೋಡಿಬೆಟ್ಟು ರಾಜಲಕ್ಷ್ಮಿ
Published 15 ಆಗಸ್ಟ್ 2013, 8:18 IST
Last Updated 15 ಆಗಸ್ಟ್ 2013, 8:18 IST

ಮಂಗಳೂರು: ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷಾ ವೇಳಾಪಟ್ಟಿಯಲ್ಲಿ ತುಳು ಭಾಷೆಯನ್ನು ಸೇರಿಸಿಕೊಳ್ಳಲಿದ್ದು ಇದಕ್ಕೆ ಪೂರಕವಾದ ಪ್ರಕ್ರಿಯೆಗಳು ಆರಂಭವಾಗಿವೆ.

ಪ್ರೌಢಶಾಲೆಯಲ್ಲಿ ತುಳುವನ್ನೇ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಪ್ರವೇಶಿಸಲಿದ್ದು ಅವರಿಗೆ ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗುವಂತೆ ತುಳುವಿಗೆ ಅಧಿಕೃತ ಭಾಷಾ ಸೂಚ್ಯಂಕ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಪಠ್ಯಪುಸ್ತಕಗಳು ಈಗಾಗಲೇ ಸಿದ್ಧಗೊಂಡಿದ್ದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕರಡು ಸಿದ್ಧಗೊಳ್ಳುತ್ತಿದೆ. ಈ ಮೂಲಕ `ತುಳು' ಭಾಷೆಗೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಧಿಕೃತ ಸ್ಥಾನ ದೊರೆಯಲಿದೆ.

ಪ್ರಸ್ತುತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ತುಳು ಅಥವಾ ಹಿಂದಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಈ ವರ್ಷ ಒಂಬತ್ತನೇ ತರಗತಿಗೆ 213 ಪಠ್ಯಪುಸ್ತಕಗಳಿಗೆ ಬೇಡಿಕೆ ಬಂದಿದೆ. ಮುಂದಿನ ವರ್ಷ ಈ ವಿದ್ಯಾರ್ಥಿಗಳು ಹತ್ತನೇ ತರಗತಿ ಪ್ರವೇಶಿಸಲಿದ್ದಾರೆ.

`ಈ ಹಿಂದಿನ ವರ್ಷಗಳಲ್ಲಿ ಐದಾರು ಸಾವಿರ ಸಂಖ್ಯೆಯಲ್ಲಿ ಪುಸ್ತಕಗಳಿಗೆ ಆದೇಶ ಕೊಡುತ್ತಿದ್ದೆವು. ಆದರೆ ಈ ಬಾರಿ ನೈಜವಾಗಿ ತುಳು ಅಧ್ಯಯನ ಮಾಡಲು ಆಸಕ್ತಿ ಇದ್ದು ನೋಂದಾಯಿಸಿಕೊಂಡ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಲಾಗಿದೆ. ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಈ ವಿದ್ಯಾರ್ಥಿಗಳು ತೃತೀಯ ಭಾಷೆಯನ್ನಾಗಿ ತುಳು ಆಯ್ಕೆ ಮಾಡಿಕೊಂಡಿದ್ದು ಹಿಂದಿಯನ್ನು ಕೈಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ' ಎಂದು ತುಳು ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಹೇಳಿದರು.

ಪಠ್ಯಪುಸ್ತಕ ಗೊಂದಲ: ಈ ವರ್ಷ 6ನೇ ತರಗತಿಗೆ 170, 7ನೇ ತರಗತಿಗೆ 265, 8ನೇ ತರಗತಿಗೆ 505 ಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದ್ದು 8ನೇ ತರಗತಿಯ ಪಠ್ಯಪುಸ್ತಕ ಬಂದಿಲ್ಲ. ಈ ಬಗ್ಗೆ ಪುತ್ತೂರು ವಲಯದ ಶಾಲೆಗಳ ಆಕ್ಷೇಪ ವ್ಯಕ್ತವಾಗಿರುವುದಾಗಿ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ ಹಾಗೂ ಉಪ್ಪಿನಂಗಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮಖ್ಯೋಪಾಧ್ಯಾಯ ಐತಪ್ಪ ನಾಯಕ್ ಹೇಳುತ್ತಾರೆ. ಪ್ರಸ್ತುತ ಹಿಂದಿನ ವರ್ಷದ ಪುಸ್ತಕಗಳನ್ನೇ ಬಳಸಿಕೊಂಡು ಪಾಠ ನಡೆಯುತ್ತಿದೆ.

ಆದರೆ ಶಿಕ್ಷಣ ಸಂಯೋಜಕ ನವೀನ್ ಹೇಳುವ ಪ್ರಕಾರ, 8ನೇ ತರಗತಿ ಪುಸ್ತಕಗಳು ಬಾರದೇ ಇರುವುದರಿಂದ ವಿದ್ಯಾರ್ಥಿಗಳು ಹಿಂದಿಯನ್ನೇ ಆಯ್ಕೆ ಮಾಡಿಕೊಂಡಿದ್ದೂ ಉಂಟು. ಅಲ್ಲದೆ ವಿದ್ಯಾರ್ಥಿಗಳು ಒಮ್ಮೆ ತುಳು ಭಾಷೆಯನ್ನು ಆಯ್ಕೆ ಮಾಡಿಕೊಂಡ ನಂತರ ಅವರಿಗೆ ಹಿಂದಿ ಹೇಳಿಕೊಡುವ ಅವಕಾಶ ಇಲ್ಲ. ಪರಿಚಯಾತ್ಮಕವಾಗಿ ಹಿಂದಿ ಹೇಳಿಕೊಡಲು ಪಠ್ಯ ನೀಡುವುದು ನಿಯಮಗಳ ಪ್ರಕಾರ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

`ತುಳು ಆಸಕ್ತರ ಸಂಖ್ಯೆ ಹೆಚ್ಚಳ'
ತುಳು ಭಾಷಾ ಕಲಿಕೆಗೆ ನಿಜವಾಗಿಯೂ ಆಸಕ್ತಿ ಇರುವವರ ಸಂಖ್ಯೆ ಈ ವರ್ಷದಲ್ಲಿ ಸ್ಪಷ್ಟವಾಗಿದೆ. ಉಡುಪಿ ಜಿಲ್ಲೆಯಿಂದ ತುಳು ಪಠ್ಯ ಪುಸ್ತಕಕ್ಕೆ ಅಲ್ಲಿನ ಡಿಡಿಪಿಐ ಬೇಡಿಕೆಯನ್ನು ಇಟ್ಟಿಲ್ಲ. ಸಂಖ್ಯೆ ಕಡಿಮೆ ಆಗಿದ್ದರೂ ಪರವಾಗಿಲ್ಲ ಆಸಕ್ತಿ ಮತ್ತು ಗುಣಮಟ್ಟ ಮುಖ್ಯ ಎನ್ನುವ ನಿಟ್ಟಿನಲ್ಲಿ ಅಕಾಡೆಮಿ ಕೆಲಸ ಮಾಡುತ್ತಿದೆ. ಮುಂದಿನ ವರ್ಷ ಹತ್ತನೇ ತರಗತಿ ಪರೀಕ್ಷಾ ಪಟ್ಟಿಯಲ್ಲಿ ತುಳು ವಿಷಯ ಸೇರ್ಪಡೆ ಆಗಲಿದೆ. ಅದರೊಂದಿಗೆ ತುಳುವಿನ ಸ್ಥಾನಮಾನ ಅಧಿಕೃತಗೊಳ್ಳಲಿದೆ. ನಂತರ ತುಳುವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಬಹುದು.
ಚಂದ್ರಹಾಸ ರೈ. ಬಿ. ತುಳು ಅಕಾಡೆಮಿ ರಿಜಿಸ್ಟ್ರಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.