ADVERTISEMENT

ಮೊಬೈಲ್‌ಗೆ ಅಂಟಿದ ಯುವಜನತೆ

ಸಾರಾ ಅಬೂಬಕ್ಕರ್‌ ಬೇಸರ

​ಪ್ರಜಾವಾಣಿ ವಾರ್ತೆ
Published 21 ಜನವರಿ 2015, 8:32 IST
Last Updated 21 ಜನವರಿ 2015, 8:32 IST
ಕೆನರಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಲಲಿತಾ ರೈ ಮತ್ತು ಪದ್ಮಾ ಶೆಣೈ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಶೈಲಾ ಯು. ಮಾತನಾಡಿದರು.
ಕೆನರಾ ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ಲಲಿತಾ ರೈ ಮತ್ತು ಪದ್ಮಾ ಶೆಣೈ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಶೈಲಾ ಯು. ಮಾತನಾಡಿದರು.   

ಮಂಗಳೂರು: ಬುರ್ಖಾ ಹಾಕಿದರೆ ಅತ್ಯಾಚಾರ ನಡೆಯು­ವುದಿಲ್ಲ ಎಂದು, ಮೈತುಂಬಾ ಬಟ್ಟೆ ಹೊದ್ದುಕೊಂಡರೆ ದೌರ್ಜನ್ಯಗಳು ನಡೆಯುವುದಿಲ್ಲ ಎಂದು ಧಾರ್ಮಿಕ ಕ್ಷೇತ್ರದ ಸಂಘಟನೆಗಳು ಹೇಳುತ್ತವೆ. ಆದರೆ ಎರಡ್ಮೂರು ವರ್ಷದ ಮಗುವಿನ ಮೇಲೆ ನಡೆಯುವ ದೌರ್ಜನ್ಯಕ್ಕೆ ಏನು ಉತ್ತರ ಹೇಳಬಹುದು ಎಂದು ಬೇಸರದಿಂದ ಪ್ರಶ್ನಿಸಿದವರು ಹಿರಿಯ ಕಾದಂಬರಿಕಾರ್ತಿ ಸಾರಾ ಅಬೂಬಕ್ಕರ್‌.

ಮಂಗಳವಾರ ನಗರದ ಕೆನರಾ ಪದವಿ ಕಾಲೇಜಿನಲ್ಲಿ ಲಲಿತಾ ರೈ ಮತ್ತು ಪದ್ಮಾ ಶೆಣೈ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು, ಶಿಕ್ಷಣ ಸಿಕ್ಕಿದೆ ಎಂದ ಮಾತ್ರಕ್ಕೆ ಮಹಿಳೆಯ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ. ಉತ್ತರ ಭಾರತದಲ್ಲಿ ಮದುವೆಯಾದ ಹೆಣ್ಣಿಗೆ ಗಂಡನ ಮನೆಯಲ್ಲಿ ಏನೇ ಸಂಕಷ್ಟ ಬಂದರೂ ತವರು ಮನೆಯವರು ಜವಾಬ್ದಾರರಲ್ಲ ಎಂಬ ಧೋರಣೆ ಇರುವ ಬಗ್ಗೆ ಚಾನೆಲ್‌ಗಳು ವರದಿ ಮಾಡುತ್ತಿವೆ. ಅಂತಹ ಪರಿಸ್ಥಿತಿಯನ್ನು ನೋಡಿ ತುಂಬಾ ಬೇಸರವಾಗುತ್ತದೆ. ಹೆತ್ತ ಮಗಳನ್ನು ನಿಕೃಷ್ಟವಾಗಿ ಕಾಣುವುದು ಸರಿಯಲ್ಲ ಎಂದರು.

ಇತ್ತೀಚೆಗಿನ ಮಕ್ಕಳು ಪತ್ರಿಕೆಯನ್ನಾಗಲೀ, ಸಾಹಿತ್ಯ ಕೃತಿಗಳನ್ನಾಗಲೀ ಓದುತ್ತಿಲ್ಲ. ಮೊಬೈಲ್‌ಗೆ ಮಾತ್ರ ಅಂಟಿಕೊಂಡ ಯುವಜನತೆ ಸಂವೇದನೆಗಳಿಗೆ ಕಿವುಡಾ­ಗುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ, ಹೆಣ್ಣೆಂಬ ಕಾರಣಕ್ಕೇ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ­ವನ್ನು ಗುರುತಿಸಬೇಕಾಗಿದೆ ಎಂದು ಹೇಳಿದರು.

‘ಮಹಿಳೆ ಸಂಕೋಲೆಯಿಂದೀಚೆಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಪ್ರಾಧ್ಯಾಪಕಿ ಡಾ. ಶೈಲಾ ಯು. ಅವರು, ಹೆಣ್ಮಕ್ಕಳು ಆಧುನಿಕವಾದ ದಿರಿಸುಗಳನ್ನು ಧರಿಸಿದ ಕೂಡಲೇ ಸಮಾನತೆ ಸಾಧಿಸಿದಂತಾಗುವುದಿಲ್ಲ. ಅಂತರಂಗದಲ್ಲಿ ಈ ಕುರಿತ ಬದಲಾವಣೆ ಆಗಬೇಕು. ಹೆಣ್ಣು ಮಕ್ಕಳಿಗೆ ಮಾತ್ರ ಸಂಸ್ಕೃತಿಯ ಪಾಠ ಮಾಡುವ ಬದಲು ಗಂಡುಮಕ್ಕಳಿಗೂ ಸಾಮಾಜಿಕ ನಡತೆ, ಘನತೆಯ ಕುರಿತು ತಿಳಿಹೇಳಬೇಕು ಎಂದರು.

ವಿವಾಹದ ಮಾರುಕಟ್ಟೆಯಲ್ಲಿ ಗೆಲ್ಲಬೇಕು ಎನ್ನುವ ಸ್ವಾರ್ಥದಿಂದ ಮಾತ್ರ ಹೆಣ್ಮಕ್ಕಳಿಗೆ ಶಿಕ್ಷಣ ನೀಡಲಾ­ಗುತ್ತಿದೆ. ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಓದಿದ ಹೆಂಡತಿಯನ್ನು ಪಡೆದಿದ್ದೇನೆ ಎಂಬುದೇ ಗಂಡಿನ ಪ್ರತಿಷ್ಠೆಯ ವಿಷಯವಾಗುತ್ತಿದೆ. ಇದು ಲಿಂಗ ಸಮಾನತೆಯನ್ನು ಸಾಧಿಸುವುದಿಲ್ಲ. ತನ್ನ ಸಮು­ದಾಯದ ದೌರ್ಜನ್ಯದ ವಿರುದ್ಧ ಧೈರ್ಯವಾಗಿ ಬರೆದ ಸಾರಾ ಅಬೂಬಕ್ಕರ್‌ ಅಂತಹವರು ನಮಗೆ ಮಾದರಿಯಾಗಬೇಕೇ ವಿನಃ ಆದರ್ಶ ಎನ್ನುವುದು ಐಶ್ವರ್ಯ ರೈ ಅವರನ್ನು ಅನುಸರಿಸುವುದಕ್ಕೆ ಸೀಮಿತ­ವಾಗಬಾರದು ಎಂದು ಅವರು ವಿವರಿಸಿದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ದತ್ತಿನಿಧಿಗಳ ಕುರಿತು ಮಂಜುಳಾ ಸುಕುಮಾರ್‌ ಮಾತನಾಡಿದರು. ಪ್ರಾಂಶುಪಾಲ ಡಾ. ಬಾಲಕೃಷ್ಣ ಕಾಂಬಳೆ, ಕೆನರಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಉಪಸ್ಥಿತರಿದ್ದರು. ಅತೀಕ್‌ ನಿರೂಪಿಸಿದರು.

ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಹೇಶ್‌, ಶ್ರೇಯಸ್‌, ಪ್ರಜ್ಞಾ, ಅತೀಕ್‌, ತೇಜಸ್ವಿನಿ, ಸುಷ್ಮಿತಾ, ಜಯಲಕ್ಷ್ಮಿ ಅವರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.