ADVERTISEMENT

‘ಮೌಲ್ಯಾಧಾರಿತ ಶಿಕ್ಷಣದಿಂದ ಸುಸಂಸ್ಕೃತ ಸಮಾಜ’

ಅಂಚೆ- ಕುಂಚ ಸ್ಪರ್ಧೆ: ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 6:16 IST
Last Updated 31 ಡಿಸೆಂಬರ್ 2016, 6:16 IST

ಉಜಿರೆ: ‘ಮೌಲ್ಯಾಧಾರಿತ ಶಿಕ್ಷಣದಿಂದ ಸಭ್ಯ, ಸುಸಂಸ್ಕೃತ ಸಮಾಜ ನಿರ್ಮಾಣ ವಾಗುತ್ತದೆ’ ಎಂದು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಡಾ. ಕೆ. ಭೈರಪ್ಪ ಹೇಳಿದರು.

ಶುಕ್ರವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋ ಜಿಸಲಾದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ಹಾಗೂ ಜಿಲ್ಲಾ ಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಶಿಕ್ಷಣದ ಜತೆಗೆ ನೈತಿಕತೆ, ಜೀವನ ಕೌಶಲ ಹಾಗೂ ಮಾನವೀಯ ಮೌಲ್ಯಗಳ ನ್ನು ಬೋಧಿಸಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗುವುದರಿಂದ ಮೌಲ್ಯಾಧಾರಿತ ಶಿಕ್ಷಣ ಹಾಗೂ ನೈತಿಕ ಶಿಕ್ಷಣದಿಂದ ಸುಂದರ ಸಮಾಜವನ್ನು ರೂಪಿಸಬಹುದು.

ಯೋಗ ಮತ್ತು   ಪ್ರಕೃತಿ ಚಿಕಿತ್ಸೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಭಾಗ್ಯ ಹೊಂದ ಬಹುದು. ಈ ದಿಸೆಯಲ್ಲಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಕೊಡುಗೆ ಅಮೂಲ್ಯ’ ಎಂದು ಶ್ಲಾಘಿಸಿದರು. ಪತ್ರಕರ್ತ ಕೆ. ಶಿವಕುಮಾರ್ ಶುಭಾಶಂಸನೆ ಮಾಡಿದರು.

ಗುರುವಾಯನಕೆರೆ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲರ ಕುಂಚದ ಕಲೆ ಹಾಗೂ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿನಿಯರ ಗಾಯನ ಕಣ್ಮನ ಸೆಳೆಯಿತು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ‘ನಾವಿರುವ ಪ್ರಪಂಚವನ್ನು ಚೆನ್ನಾಗಿ ರಕ್ಷಣೆ ಮಾಡಿ ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಬಿಟ್ಟು ಕೊಡುವುದು ನಮ್ಮೆಲ್ಲರ ಹೊಣೆಗಾರಿಕೆ. ಪ್ರಕೃತಿ- ಪರಿಸರ ಸಂರಕ್ಷಣೆ ಮಾಡಬೇಕು. ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡಬಾರದು’ ಎಂದು ಹೆಗ್ಗಡೆ ಸಲಹೆ ನೀಡಿದರು. ಶಶಿಕಾಂತ ಜೈನ್ ಸ್ವಾಗತಿಸಿದರು. ಅಶೋಕ ಪೂಜಾರಿ ವಂದಿಸಿದರು. ಮಂಜುನಾಥ್ ಎಂ. ಎನ್. ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.