ADVERTISEMENT

‘ಯೋಧರ ತ್ಯಾಗದಿಂದಲೇ ದೇಶದೊಳಗೆ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 6:03 IST
Last Updated 17 ಡಿಸೆಂಬರ್ 2017, 6:03 IST

ಮಂಗಳೂರು: 1971ರಲ್ಲಿ ಪಾಕಿಸ್ತಾನವು ಭಾರತಕ್ಕೆ ಶರಣಾಗಿ, ಯುದ್ಧ ಮುಕ್ತಾಯವಾದರೂ ಭಾರತದ 54 ಮಂದಿ ಯೋಧರ ಕುಟುಂಬಗಳಿಗೆ ಕಾಯುವಿಕೆ ಇನ್ನೂ ಮುಕ್ತಾಯವಾಗಿಲ್ಲ ಎಂದು ನಿವೃತ್ತ ಬ್ರಿಗೇಡಿಯರ್‌ ಐ.ಎನ್‌. ರೈ ಹೇಳಿದರು.

ವಿಜಯ್‌ ದಿವಸ ಆಚರಣೆಯ ಸಂದರ್ಭ ಶನಿವಾರ ನಗರದ ಕದ್ರಿ ಹಿಲ್ಸ್‌ನ ‘ಯುದ್ಧ ಸ್ಮಾರಕ’ದಲ್ಲಿ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು,‘ 1971ರ ಡಿ. 16ರಂದು ಆಗಿನ ಪೂರ್ವ ಪಾಕಿಸ್ತಾನದ ಢಾಕಾದ ರಾಮ್ನಾ ಕ್ರೀಡಾಂಗಣದಲ್ಲಿ 93,000 ಪಾಕಿಸ್ತಾನಿ ಸೈನಿಕರು ಶರಣಾಗಿದ್ದರು. ಅತೀ ಕಡಿಮೆ ದಿನಗಳಲ್ಲಿ ಅತೀ ಹೆಚ್ಚು ಯುದ್ಧ ಕೈದಿಗಳು ಒಮ್ಮೆಲೇ ಶರಣಾಗಿರುವುದು ಎರಡನೇ ಮಹಾಯುದ್ಧದ ಬಳಿಕ ಜಗತ್ತಿನಲ್ಲಿಯೇ ಅದು ಮೊದಲ ಬಾರಿ ಎನಿಸಿಕೊಂಡಿತ್ತು. ಬಾಂಗ್ಲಾ ದೇಶ ಸ್ವತಂತ್ರ ದೇಶವಾಗಿ ರೂಪುಗೊಳ್ಳಲು ನೆರವಾಗುವ ದೃಷ್ಟಿಯಿಂದ ಭಾರತ ಈ ಯುದ್ಧದಲ್ಲಿ ಭಾಗಿಯಾಗಿತ್ತು. ಯುದ್ಧದಲ್ಲಿ ಐತಿಹಾಸಿಕ ವಿಜಯ ಸಂದರೂ, ಭಾರತದ 54 ಯೋಧರನ್ನು ಪಾಕ್‌ ಸೆರೆಯಿಂದ ಬಿಡುಗಡೆ ಮಾಡಲಿಲ್ಲ. ಅವರ ಮಾಹಿತಿ ಇಂದಿಗೂ ಲಭ್ಯವಿಲ್ಲ' ಎಂದು ಅವರು ವಿವರಿಸಿದರು.

ಅವರ ಕುಟುಂಬಗಳು ನಿರಂತರ ಕಾಯುವಿಕೆಯಲ್ಲಿಯೇ ಇವೆ. ಅಪ್ಪನ ಮುಖವನ್ನು ಕಾಣದ ಮಕ್ಕಳು, ತಮ್ಮ ಪತಿಯ ಇರುವಿಕೆಯ ಮಾಹಿತಿಯೂ ಇಲ್ಲದೇ ಸಂದಿಗ್ಧದಲ್ಲಿ ಇರುವ ಪತ್ನಿಯರು ಕಣ್ಣೀರಿನ ದಿನಗಳನ್ನು ತಳ್ಳುತ್ತಿದ್ದಾರೆ. ಅವರನ್ನು ‘ಮರೆತ 54 ಮಂದಿ ಯೋಧರು’ ಎಂದೇ ಭಾರತ ಗುರುತಿಸುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

ADVERTISEMENT

ಯೋಧರು 20 ಸಾವಿರ ಅಡಿ ಎತ್ತರದ ಅತೀ ಚಳಿಯ ಪ್ರದೇಶದಲ್ಲಿ ಈ ದೇಶವನ್ನು ಪ್ರತಿಕ್ಷಣವೂ ಕಾಯುತ್ತಿದ್ದಾರೆ. ಸಂಸಾರ, ಸಂಭ್ರಮ, ಒಡನಾಟವನ್ನು ಅವರು ತ್ಯಾಗ ಮಾಡಿ ದೇಶಕ್ಕೆ ಭದ್ರತೆ ಒದಗಿಸುತ್ತಿರುವುದರಿಂದಲೇ ನಾವಿಲ್ಲಿ ನೆಮ್ಮದಿಯ ದಿನಗಳನ್ನು ಕಳೆಯುವುದು ಸಾಧ್ಯವಾಗಿದೆ. ಆದ್ದರಿಂದ ನಮ್ಮ ನಡೆನಡಿಯಲ್ಲಿ ಕೃತಜ್ಞತೆಯ ಭಾವವೊಂದು ಸದಾ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಮಾತನಾಡಿ, ‘ಇಂದು ದ್ವೇಷದ ಭಾವನೆ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ದ್ವೇಷದ ವಿರುದ್ಧ ನಾವು ಹೋರಾಡಬೇಕಾಗಿದೆ. ಸೌಹಾರ್ದದಿಂದ ಬಾಳ್ವೆ ಮಾಡುವ ಮೂಲಕ ನಾವು ನಮ್ಮನ್ನು ಕಾಯುತ್ತಿರುವ ಸೈನಿಕರಿಗೆ ಕೃತಜ್ಞತೆ ಸೂಚಿಸಬೇಕಾಗಿದೆ. ದೇಶದ ಮೌಲ್ಯವನ್ನು ಎತ್ತಿ ಹಿಡಿಯಬೇಕಾಗಿದೆ’ ಎಂದು ಹೇಳಿದರು.

ಎಸ್ಪಿ ಸುಧೀರ್‌ ಕುಮಾರ್‌ ರೆಡ್ಡಿ, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಲಯನ್ಸ್‌ ಕ್ಲಬ್‌ನ ದೇವದಾಸ್‌ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ನಿಟ್ಟೆಗುತ್ತು ಶರತ್‌ ಭಂಡಾರಿ, ಕೃಷ್ಣ ಶೆಟ್ಟಿ, ಕರ್ನಲ್‌ ರಾಜನ್‌, ಕರ್ನಲ್‌ ಬಾಲಕೃಷ್ಣ ಎನ್‌., ರೋಟರಿಯ ವಿಕ್ರಮ್‌ ದತ್ತ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ. ಆರ್‌. ರವಿ ಇದ್ದರು.

ಕ್ಯಾ. ಪ್ರಸಾದ್‌ ನಾಯಕ್‌
‘ಸೇನೆಗೆ ಸೇರಲು ಕರಾವಳಿಯ ಯುವಜನರೂ ಮನಸ್ಸು ಮಾಡಬೇಕು. ಸೇನೆಯು ಜೀವನದ ಯೋಚನಾಗತಿಯನ್ನೇ ಬದಲಿಸುತ್ತದೆ. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಕೊಡುಗೆ ಮತ್ತೇನನ್ನೂ ಕೊಡಲಾರೆವು. ಆ ತೃಪ್ತಿಯೂ ಮನಸ್ಸನ್ನು ಖುಷಿಯಾಗಿಡುತ್ತದೆ’ ಎಂದು ಅಸ್ಸಾಂ ರೆಜಿಮೆಂಟ್‌ನ ಈಸ್ಟ್‌ ಕಮಾಂಡೆಂಟ್‌ (ಆರ್ಟರಿ) ಕ್ಯಾಪ್ಟನ್‌ ಪ್ರಸಾದ್‌ ನಾಯಕ್‌ ಹೇಳಿದರು. ಅವರು ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್‌ ಓದಿ 2015ರಲ್ಲಿ ಸೇನೆ ಸೇರಿದ್ದು, ಶನಿವಾರ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.