ADVERTISEMENT

ರಾಷ್ಟ್ರಮಟ್ಟದ ಗೇರು ಸಮಾವೇಶ 14ರಿಂದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 10:59 IST
Last Updated 5 ಮಾರ್ಚ್ 2015, 10:59 IST
ಕರ್ನಾಟಕ ಗೇರು ಬೀಜ ತಯಾರಕರ ಸಂಘದ ವಜ್ರ ರಮಹೋತ್ಸವದ ಕರಪತ್ರಗಳನ್ನು ಎನ್‌ಎಂಪಿಟಿ ಅಧ್ಯಕ್ಷ ಪಿ.ಸಿ.ಪರೀದಾ ಅವರು ಮಂಗಳೂರಿನಲ್ಲಿ ಬುಧವಾರ ಬಿಡುಗಡೆ ಮಾಡಿದರು. 	–ಪ್ರಜಾವಾಣಿ ಚಿತ್ರ
ಕರ್ನಾಟಕ ಗೇರು ಬೀಜ ತಯಾರಕರ ಸಂಘದ ವಜ್ರ ರಮಹೋತ್ಸವದ ಕರಪತ್ರಗಳನ್ನು ಎನ್‌ಎಂಪಿಟಿ ಅಧ್ಯಕ್ಷ ಪಿ.ಸಿ.ಪರೀದಾ ಅವರು ಮಂಗಳೂರಿನಲ್ಲಿ ಬುಧವಾರ ಬಿಡುಗಡೆ ಮಾಡಿದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ವಜ್ರ ಮಹೋತ್ಸವದ ಸಂಭ್ರಮ­ದಲ್ಲಿರುವ ಕರ್ನಾಟಕ ಗೇರು ಬೀಜ ತಯಾರಕರ ಸಂಘ ರಾಷ್ಟ್ರ ಮಟ್ಟದ ‘ಗೇರು ಸಮಾವೇಶ’ ಹಮ್ಮಿ­ಕೊಂಡಿದೆ. ಈ ವರ್ಷದಾದ್ಯಂತ ವಿವಿಧ ಕಾರ್ಯ­ಕ್ರಮಗಳ ಮೂಲಕ ಸಂಭ್ರಮವನ್ನು ಆಚರಿಸಲಾಗು­ವುದು. ಇದೇ 14, 15ರಂದು ಈ ಕಾರ್ಯ­ಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ವಾಲ್ಟರ್‌ ಡಿಸೋಜ ಇಲ್ಲಿ ತಿಳಿಸಿದರು.

ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ­ಯಲ್ಲಿ ಮಾತನಾಡಿದ ಅವರು, ಇದೇ 14ರಂದು ಬೆಳಿಗ್ಗೆ 9.30ಕ್ಕೆ ನಗರದ ಟಿ.ಎಂ.ಎ.ಪೈ ಸಭಾಂಗಣ­ದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಮುಂದಿನ 15 ವರ್ಷಗಳಲ್ಲಿ ಸಂಘ ಕೈಗೊಳ್ಳುವ ಕಾರ್ಯ­ಕ್ರಮಗಳ ಬಗ್ಗೆ ಈ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಕಚ್ಚಾ ಗೇರು ಬೀಜ ಬೆಳಗಾರರ ಸಬಲೀಕರಣ, ವ್ಯರ್ಥವಾಗುತ್ತಿರುವ ಗೇರು ಹಣ್ಣಿನ ಮೌಲ್ಯವರ್ಧನೆ ಬಗ್ಗೆಯೂ ಈ ಕಾರ್ಯಕ್ರಮ ಚಿಂತನೆ ನಡೆಸಲಿದೆ ಎಂದರು.

ಇದೇ 15ರಂದು ಬೆಳಿಗ್ಗೆ 11ಕ್ಕೆ ನಡೆಯುವ ವಜ್ರಮಹೋತ್ಸವದ ಆಚರಣೆಯಲ್ಲಿ ಸಂಘದ ಯೋಜನೆ ಮತ್ತು ಯೋಚನೆಗಳಿಗೆ ಚಾಲನೆ ನೀಡಲಾಗುವುದು. ಸಂಜೆ 4ರಿಂದ ಸಾರ್ವಜನಿಕರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗುವುದು. ಇದೇ ಸಂದರ್ಭದಲ್ಲಿ ಗೇರು ಉತ್ಸವವೂ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ 9 ಜಿಲ್ಲೆಗಳಲ್ಲಿ 400 ಗೇರು ಬೀಜ ಸಂಸ್ಕರಣಾ ಕೇಂದ್ರಗಳಿದ್ದು, ಸಂಘದಲ್ಲಿ 250 ಸದಸ್ಯರು ಇದ್ದಾರೆ. ಈ ಉದ್ಯಮದಿಂದಾಗಿ ಸುಮಾರು 50 ಸಾವಿರ ಉದ್ಯೋಗಿಗಳಾಗಿದ್ದು, ಶೇ 95ರಷ್ಟು ಮಹಿಳೆಯರೇ ಇದ್ದಾರೆ. ಪರೋಕ್ಷವಾಗಿ ಸುಮಾರು 1.25 ಲಕ್ಷ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.

ಸಂಘವು 3 ದಶಕಗಳಿಂದ ವಾರ್ಷಿಕ ₹2 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ರಫ್ತು ಕ್ಷೇತ್ರದಿಂದ ವಾರ್ಷಿಕ ₹ 30 ಕೋಟಿ ಆದಾಯದಿಂದ ₹800 ಕೋಟಿ ಆದಾಯ ಬರುತ್ತಿದೆ ಎಂದರು. ಸಂಘದ ಮಾಜಿ ಅಧ್ಯಕ್ಷ ಗಿರಿಧರ ಪ್ರಭು ಮಾತನಾಡಿ, ದೇಶದ ಗೇರು ಉತ್ಪಾದನೆಯಲ್ಲಿ ಮಂಗಳೂರಿನ ಪಾಲು ಶೇ 3 ಇದ್ದು, ಅದನ್ನು 2030ರ ವೇಳೆಗೆ ಶೇ 25ಕ್ಕೆ ಏರಿಸಬೇಕು ಎಂದು ಸಂಘ ನಿರ್ಧರಿಸಿದೆ ಎಂದರು.

ಕಾರ್ಯಕ್ರಮದ ವಿವರಗಳ ಕರ ಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ನವ ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಪಿ.ಸಿ.ಪರೀದಾ, ಗೇರು ಉತ್ಪನ್ನಗಳ ರಫ್ತಿಗೆ ಬಂದರು ಮಂಡಳಿ ಸಹಕಾರ ನೀಡಲಿದೆ ಎಂದರು. ಸಂಘದ ಪದಾಧಿಕಾರಿಗಳಾದ ರಾಹುಲ್‌ ಕಾಮತ್‌, ತುಕಾರಾಮ ಪ್ರಭು, ಕೆ.ಪ್ರಮೋದ್‌ ಕಾಮತ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.