ADVERTISEMENT

ರಾಷ್ಟ್ರೀಯ ವ್ಯಾಜ್ಯ ನೀತಿ ಕರಡು ಸಿದ್ಧ

ಮಂಗಳೂರಿನಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 5:19 IST
Last Updated 5 ಸೆಪ್ಟೆಂಬರ್ 2015, 5:19 IST

ಮಂಗಳೂರು: ನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧದ ದಾವೆಗಳ ಸಂಖ್ಯೆ­ಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಷ್ಟ್ರೀಯ ವ್ಯಾಜ್ಯ ನೀತಿಯನ್ನು ಸದ್ಯ­ದಲ್ಲೇ ಕ್ಯಾಬಿನೆಟ್‌ ಮುಂದೆ ಪ್ರಸ್ತುತ­ಪಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು. ಶುಕ್ರವಾರ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿ ವಕೀಲ ಪರಿಷತ್ತನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಜ್ಯ ನೀತಿಯ ಕರಡನ್ನು ಸಿದ್ಧ­ಪಡಿಸಿ ಪ್ರಧಾನಿ ಅವರಿಗೆ ಸಲ್ಲಿಸಲಾಗಿದೆ. ಅವರು ಇನ್ನೊಂದು ತಿಂಗಳ ಅವಧಿಯಲ್ಲಿ ಕ್ಯಾಬಿನೆಟ್‌ನಲ್ಲಿ ಮಂಡಿಸುವ ನಿರೀಕ್ಷೆ ಇದೆ. ನ್ಯಾಯಾಲಯದ ಮೆಟ್ಟಿಲೇರದೆಯೇ ಸರ್ಕಾರದ ವಿವಿಧ ಇಲಾಖೆಗಳ ನಡುವೆಯೇ ಇರುವ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಲಾಗಿದೆ. ಸುಮಾರು ಶೇ 55ರಷ್ಟು ಕೇಸುಗಳಲ್ಲಿ ಸರ್ಕಾರವೇ ಪ್ರತಿವಾದಿ ಆಗಿರುವ ದಾಖಲೆಗಳೂ ಇವೆ. ಪರಿಸರ ಇಲಾಖೆ  ಮೇಲೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ದಾಖಲಿಸುವ ಕೇಸುಗಳು, ರೈಲ್ವೆ ಇಲಾಖೆಯ ವಿರುದ್ಧದ ಕೇಸುಗಳು ನ್ಯಾಯಾಲಯದಲ್ಲಿ ಬಹುಕಾಲ ವಿಚಾ­ರಣೆಗೆ ಬಾಕಿ ಉಳಿಯುತ್ತವೆ. ಈಗಾಗಲೇ ನ್ಯಾಯಾಲಯದಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಕೇಸುಗಳನ್ನೂ ನ್ಯಾಯಾ­ಲಯದ ಹೊರಗೆ ಇತ್ಯರ್ಥ ಮಾಡಿ­ಕೊಳ್ಳಲು  ಮಾನದಂಡ­ವೊಂ­ದನ್ನು ವ್ಯಾಜ್ಯ ನೀತಿಯಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ದೇಶದ ಐಐಟಿಗಳಿಗೆ ಸಮನಾಗಿದ್ದು, ಆ ಸಂಸ್ಥೆ­ಯನ್ನು ಐಐಟಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಅವರ ಬಳಿ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು.

ವೈದ್ಯಕೀಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಉಚಿತ ತಪಾಸಣೆ ಶಿಬಿರಗಳನ್ನು ನಡೆಸಿದ ಮಾದರಿಯಲ್ಲಿ ಕಾನೂನು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಕಾನೂನು ಮಾಹಿತಿ ನೀಡುವ ಶಿಬಿರಗಳನ್ನು ನಡೆಸಬೇಕು ಎಂದು ಅವರು ಕರೆ ನೀಡಿದರು. ಎಸ್‌ಡಿಎಂ ಕಾಲೇಜು ಸ್ಥಾಪಕ ಪ್ರಾಂಶುಪಾಲ ಪ್ರೊ. ಎನ್‌. ಜೆ. ಕದಂಬ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ವಕೀಲ ಪರಿಷತ್‌ನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಎನ್‌ಐಟಿಕೆ ನಿರ್ದೇಶಕ ಡಾ. ಸ್ವಪನ್‌ ಭಟ್ಟಾಚಾರ್ಯ, ಉಪ ಪ್ರಾಂಶುಪಾಲ  ಉದಯ್‌­ಕುಮಾರ್‌, ಪ್ರಾಧ್ಯಾಪಕ ನರೇಶ್‌ ಮಲ್ಲಿಗೆ ಮಾಡು, ಉಜ್ವಲ, ರೇಶ್ಮಾ, ಅನುಷಾ, ಮರಿಯಾ ಸಾಜನ್‌, ಕೀರ್ತನಾ ನಾಯಕ್‌ ಮತ್ತಿತರರು ಇದ್ದರು. ಪ್ರಾಂಶುಪಾಲ ಡಾ. ತಾರಾನಾಥ್‌ ಸ್ವಾಗತಿಸಿದರು.

ಹಳೆಯದು ಹೋಗಿ ಹೊಸದು ಬರಲಿದೆ
ದೇಶದ ಕಾನೂನು ಪುಸ್ತಕದಲ್ಲಿರುವ 1800 ಹಳೆಯ ಕಾನೂನುಗಳ ಅಗತ್ಯದ ಬಗ್ಗೆ ಪರಿಶೀಲನೆ ನಡೆದಿದೆ. ತೀರಾ ಹಳೆಯದಾದ 1,300 ಕಾನೂನುಗಳನ್ನು ಪುಸ್ತಕದಿಂದ ತೆಗೆಯುವ ಪ್ರಕ್ರಿಯೆ ಶುರುವಾಗಿದೆ. ಹೊಸ ಆರ್ಥಿಕ ವಹಿವಾಟು, ತಂತ್ರಜ್ಞಾನದ ಬೆಳವಣಿಗೆಯನ್ನು ಪರಿಶೀಲಿಸಿಕೊಂಡು ಹೊಸ ಕಾನೂನು ರಚನೆಯ ಪ್ರಕ್ರಿಯೆಯೂ ನಡೆದಿದೆ ಎಂದು ಸದಾನಂದ ಗೌಡ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.