ADVERTISEMENT

ರಾಷ್ಟ್ರೀಯ ಸಾಧನೆಗೂ ಇಲಾಖೆ ಮೌನ: ಆರೋಪ

ಮೋಹನ್ ಕೆ.ಶ್ರೀಯಾನ್
Published 8 ನವೆಂಬರ್ 2017, 9:22 IST
Last Updated 8 ನವೆಂಬರ್ 2017, 9:22 IST
ಬಂಟ್ವಾಳ ತಾಲ್ಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ.
ಬಂಟ್ವಾಳ ತಾಲ್ಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ.   

ಬಂಟ್ವಾಳ: ವಗ್ಗ ಸಮೀಪದ ಆಲಂಪುರಿ ಎಂಬಲ್ಲಿ 10 ವರ್ಷಗಳ ಹಿಂದೆ ನಿರ್ಮಾಣಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವಿವಿಧ ಸೌಕರ್ಯಗಳ ಕೊರತೆ ಮತ್ತು ಇಲಾಖೆ ಅಧಿಕಾರಿಗಳ ತೀರಾ ನಿರ್ಲಕ್ಷ್ಯ ಆರೋಪಗಳ ನಡುವೆಯೂ ಇಲ್ಲಿನ ವಿದ್ಯಾರ್ಥಗಳ ಕಬಡ್ಡಿ ತಂಡವು ಸತತ ಎರಡನೇ ಬಾರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡು ಗಮನ ಸೆಳೆದಿದೆ.

‘2007ರಲ್ಲಿ ಸ್ಥಳೀಯ ಕಾವಳಪಡೂರು ಗ್ರಾಮ ಪಂಚಾಯಿತಿ ಬಳಿ ಹಳೆ ಕಟ್ಟಡವೊಂದರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗರಾಜ ಶೆಟ್ಟಿ ಆರಂಭಿಸಿದ್ದ ಮೊರಾರ್ಜಿದೇಸಾಯಿ ವಸತಿ ಶಾಲೆಗೆ 2014ರಲ್ಲಿ ಇಲ್ಲಿನ ಆಲಂಪುರಿ ಎಂಬಲ್ಲಿ ಒಟ್ಟು 10 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನಿನಲ್ಲಿ  ಸಚಿವ ಬಿ.ರಮಾನಾಥ ರೈ ನೂತನ ಕಟ್ಟಡ ನಿರ್ಮಿಸಿ ಕೊಟ್ಟಿದ್ದರು. ಇನ್ನೂ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ’ ಎಂಬ ಆರೋಪವೂ ಕೇಳಿ ಬಂದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಅ.29ರಿಂದ 30ರತನಕ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಶಾಲಾ 14ರ ವಯೋಮಾನದ ಬಾಲಕರ ಕಬ್ಬಡಿ ಟೂರ್ನಿಯಲ್ಲಿ ಮೈಸೂರು ವಿಭಾಗದಲ್ಲಿ ಪ್ರತಿನಿಧಿಸಿದ ಇಲ್ಲಿನ ತಂಡವು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಇನ್ನೊಂದೆಡೆ 17ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕೂಡಾ ಇಲ್ಲಿನ ಐವರು ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಗೆದ್ದುಕೊಂಡಿದ್ದಾರೆ.

ADVERTISEMENT

ಸೌಲಭ್ಯ, ಫಲಿತಾಂಶ: ‘1ರಿಂದ 10ನೇ ತರಗತಿ ವರೆಗಿನ  250  ವಿದ್ಯಾರ್ಥಿಗಳಿಗೆ ಶಾಲಾ ಸಂಕೀರ್ಣ ಸೇರಿದಂತೆ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ, ಪ್ರಾಂಶುಪಾಲರು, ಶಿಕ್ಷಕರು, ಗ್ರೂಪ್ ಡಿ. ನೌಕರರ ವಸತಿ ನಿಲಯ, ಸುಸಜ್ಜಿತ ಭೋಜನಾಲಯ ಮತ್ತು ಅಡುಗೆ ಕೋಣೆ  ಇದೆ.

ಪ್ರಾಂಶುಪಾಲರು ಸಹಿತ ವಿಷಯವಾರು ಶಿಕ್ಷಕರು, ಸ್ಟಾಫ್ ನರ್ಸ್‌, ಬಾಣಸಿಗರು, ಕಾವಲುಗಾರ ಇದ್ದಾರೆ. ವಾರ್ಡನ್-1, ಎಸ್‌ಡಿೆ-1, ಚಿತ್ರಕಲಾ ಶಿಕ್ಷಕ-1, ಕಂಪ್ಯೂಟರ್ ಶಿಕ್ಷಕ-1 ಹುದ್ದೆ ಖಾಲಿ ಇವೆ. ಈ ಶಾಲೆಯಲ್ಲಿ ಶಿಸ್ತು ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತೀ ವರ್ಷ ಶೇ 100 ಫಲಿತಾಂಶ ಗಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಪ್ರಭಾರ ವಾರ್ಡನ್ ಆಗಿರುವ ಇಲ್ಲಿನ ಸಂಗೀತ ಶಿಕ್ಷಕಿ ಪಿ.ಆರ್.ಶಿಲ್ಪಾದೇವಿ ಮತ್ತು ಪ್ರಾಂಶುಪಾಲ ಶ್ರೀನಿವಾಸ ಮಂಡ್ಯ.

ಸೊಳ್ಳೆಕಾಟ: ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಉಪಯೋಗಿಸಲು ಕೇವಲ ಒಂದು ಕೊಳವೆ ಬಾವಿ ಮಾತ್ರ ಇದೆ. ಇನ್ನೊಂದು ಕೊಳವೆ ಬಾವಿ ಕೆಟ್ಟಿದೆ. ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾದ ಶೌಚಗುಂಡಿಯಿಂದ ಎರಡನೇ ಕೊಳವೆ ಬಾವಿಗೆ ಕೊಳಚೆ ನೀರು ಇಂಗುತ್ತಿದೆ.  ತೆರೆದ ಶೌಚಗುಂಡಿಯಿಂದ ದುರ್ವಾಸನೆ, ಸೊಳ್ಳೆಕಾಟವೂ ಶುರುವಾಗಿದೆ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಮಾಂಗಾಜೆ ದೂರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.