ADVERTISEMENT

‘ಶೋಭಾಗೆ ಶೋಭೆ ತರುವಂಥದ್ದಲ್ಲ’

ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ರವಾನೆ: ಸಚಿವ ಖಾದರ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:07 IST
Last Updated 21 ಜುಲೈ 2017, 7:07 IST

ಮಂಗಳೂರು: ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡುವ ಮೂಲಕ ಶೋಭಾ ಕರಂದ್ಲಾಜೆ ಅವರ ನಿಜ ಬಣ್ಣ ಬಯಲಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರಿಗೆ ಇದು ಶೋಭೆ ತರುವಂತದ್ದಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರು ಕಳುಹಿಸಿರುವ ಮಾಹಿತಿ ಆಧಾರ ರಹಿತವಾಗಿದ್ದು, ಜ್ಞಾನವೇ ಇಲ್ಲದ್ದನ್ನು ತೋರಿಸುತ್ತದೆ ಎಂದರು.  ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಸಂಸದೆ ಕೋರಿದ್ದಾರೆ. ಅವರು ಕಾನೂನು ತಿಳಿದುಕೊಂಡು ಮಾತನಾಡಬೇಕು.

ತಿಳಿಯದೇ ಇದ್ದರೆ, ಬೇರೆಯವರನ್ನಾದರೂ ಕೇಳಬೇಕು. ಎಲ್ಲದಕ್ಕೂ ಎನ್‌ಐಎ, ಸಿಬಿಐ ತನಿಖೆಗೆ ಒತ್ತಾಯಿಸುವುದಲ್ಲ. ಎನ್‌ಐಎ, ಸಿಬಿಐಗಳು ಸಾಂವಿಧಾನಿಕ ಸಂಸ್ಥೆಗಳು. ಅವುಗಳಿಗೂ ಜವಾಬ್ದಾರಿ ಇದೆ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರವೇ ಎನ್‌ಐಎಗೆ ವಹಿಸಿತ್ತು. ಆಗ ಬಿಜೆಪಿ ನಾಯಕರಾರೂ ಎನ್‌ಐಎ ತನಿಖೆಗೆ ಒತ್ತಾಯಿಸಿರಲಿಲ್ಲ.

ರಾಜ್ಯದ ಪೊಲೀಸರು ಸೂಕ್ತವಾಗಿ ತನಿಖೆ ನಡೆಸುತ್ತಾರೆ. ಒಂದು ವೇಳೆ ಎನ್‌ಐಎ ತನಿಖೆ ಅಗತ್ಯ ಎನಿಸಿದರೆ, ರಾಜ್ಯ ಸರ್ಕಾರವೇ ವಹಿಸುತ್ತದೆ ಎಂದ ಅವರು, ಎನ್‌ಐಎ, ಸಿಬಿಐ ಸೇರಿದಂತೆ ಯಾವುದೇ ತನಿಖೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಾನೂನಿನ ಪರಿ ಜ್ಞಾನವನ್ನು ಇಟ್ಟುಕೊಂಡು ಮಾತನಾಡು ವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಅನುರಾಗ್‌ ತಿವಾರಿ ಸಾವಿನ ಪ್ರಕರಣದಲ್ಲೂ ಶೋಭಾ ಕರಂದ್ಲಾಜೆ ಇಲ್ಲಸಲ್ಲದ ಆರೋಪ ಮಾಡಿದರು. ಆದರೆ, ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಯಾವೊಬ್ಬ ಶಾಸಕರೂ ಈ ವಿಷಯವನ್ನು ಪ್ರಸ್ತಾಪಿಸಲೇ ಇಲ್ಲ. ಹಾಗಾಗಿ ಶೋಭಾ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು.

ಕೇವಲ ಶರತ್‌ ಕೊಲೆ ಪ್ರಕರಣ ಮಾತ್ರ ಎನ್‌ಐಎಗೆ ವಹಿಸುವಂತೆ ಆಗ್ರಹಿ ಸುತ್ತಿದ್ದಾರೆ. ಹಾಗಾದರೆ ಅಶ್ರಫ್‌ ಕುಳಾಯಿ ಮನುಷ್ಯರಲ್ಲವೇ? ಪ್ರವೀಣ ಪೂಜಾರಿ, ವಿನಾಯಕ ಬಾಳಿಗ ಪ್ರಕರ ಣಗಳ ಬಗ್ಗೆ ಬಿಜೆಪಿಯವರು ಏಕೆ ಮಾತ ನಾಡುವುದಿಲ್ಲ ಎಂದು ಪ್ರಶ್ನಿಸಿದರು.

ವಿರೋಧಿಸುವುದೇ ಕೆಲಸ: ಯಾವುದೇ ಅಭಿವೃದ್ಧಿ ಕೆಲಸ ಆರಂಭಿ ಸುವಾಗ ಅದನ್ನು ವಿರೋಧಿಸುವುದೇ ಬಿಜೆಪಿಯವರ ಕೆಲಸವಾಗಿದೆ. ಇದೀಗ ಇಂದಿರಾ ಕ್ಯಾಂಟೀನ್‌ ಕುರಿತು ಬಿಜೆಪಿ ಮುಖಂಡರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ಹೇಗಾದರೂ ಮಾಡಿ ತಡೆಯೊಡ್ಡಬೇಕು ಎಂಬುದಷ್ಟೇ ಅವರ ವಿಚಾರ ಎಂದು ಆರೋಪಿಸಿದರು.

ಆಧಾರ್‌ ಕಾರ್ಡ್‌, ಜಿಎಸ್‌ಟಿ, ವಿದೇಶಿ ಬಂಡವಾಳ ಹೂಡಿಕೆಗೆ ಕಾಂ ಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಪ್ರಸ್ತಾಪ ಮಾಡಿದಾಗಲೂ ಬಿಜೆಪಿ ಯವರು ವಿರೋಧ ವ್ಯಕ್ತಪಡಿಸಿದ್ದರು. ಈಗ ಅದೇ ಆಧಾರ್‌ ಅನ್ನು ಎಲ್ಲದಕ್ಕೂ ಕಡ್ಡಾಯ ಮಾಡಿದ್ದಾರೆ.

ಜಿಎಸ್‌ಟಿಯನ್ನು ರಾತೋರಾತ್ರಿ ಜಾರಿಗೊಳಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿಯೂ ವಿದೇಶಿ ಬಂಡವಾಳಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.

**

ದಾಸ್ತಾನು ಇರುವವರೆಗೆ ಸಕ್ಕರೆ ವಿತರಣೆ
ಸಕ್ಕರೆ, ಪಾಮ್‌ ಆಯಿಲ್‌ಗಳ ದಾಸ್ತಾನು ಅಪಾರ ಪ್ರಮಾಣದಲ್ಲಿದ್ದು, ಅದನ್ನು ಈ ತಿಂಗಳು ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವ ಖಾದರ್ ತಿಳಿಸಿದರು.

ಕೇಂದ್ರ ಸರ್ಕಾರ ಸಕ್ಕರೆಗೆ ನೀಡುತ್ತಿದ್ದ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಸಕ್ಕರೆ ವಿತರಣೆಯನ್ನು ಕೈಬಿಡಲಾಗಿತ್ತು. ಅಲ್ಲದೇ ಪಾಮ್‌ ಆಯಿಲ್‌ ಬಗ್ಗೆಯೂ ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದರಿಂದ, ಖರೀದಿಯಾಗದೇ ಉಳಿದಿತ್ತು.

ಇದೀಗ ಪಾಮ್‌ ಆಯಿಲ್‌ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ತರಿಸಲಾಗಿದೆ. ಅದು ಸೇವಿಸಲು ಯೋಗ್ಯವಾಗಿದೆ. ಹೀಗಾಗಿ ದಾಸ್ತಾನು ಇರುವ ಸಕ್ಕರೆ ಹಾಗೂ ಪಾಮ್‌ ಆಯಿಲ್‌ ಅನ್ನು ಬಿಪಿಎಲ್‌ ಪಡಿತರ ಚೀಟಿದಾರರಿಗೆ ಜುಲೈ ತಿಂಗಳಲ್ಲಿ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಈಗಿರುವ ದಾಸ್ತಾನು ಮುಗಿದ ನಂತರ ಸಕ್ಕರೆ ವಿತರಣೆ ಸ್ಥಗಿತವಾಗಲಿದೆ. ಸಕ್ಕರೆಗೆ ಸಬ್ಸಿಡಿ ನೀಡುವಂತೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದ್ದು, ಒಪ್ಪಿಗೆ ಸಿಕ್ಕಲ್ಲಿ, ಸಕ್ಕರೆ ವಿತರಣೆ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

**

ಶೋಭಾ ಕರಂದ್ಲಾಜೆ ಅವರು ತಪ್ಪು ಮಾಹಿತಿ ನೀಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ಜನರಿಗೆ ಮೋಸ ಮಾಡುತ್ತಿದ್ದಾರೆ. 

ಯು.ಟಿ. ಖಾದರ್
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.