ADVERTISEMENT

ಸರ್ಕಾರದ ಯೋಜನೆಗಳು ಜನರ ಅಭಿವೃದ್ಧಿಗೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:37 IST
Last Updated 24 ಜೂನ್ 2017, 9:37 IST

ವಿಟ್ಲ: ಶಿವಮೊಗ್ಗ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಶಿಶು ಅಭಿವೃದ್ಧಿ ಯೋಜನ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲ್ಲೂಕು ಪಂಚಾಯಿತಿ, ವಿಟ್ಲ ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಸ್ವಚ್ಛ ಭಾರತ್ ಅಭಿಯಾನ, ಹೆಣ್ಣು ಮಗು ರಕ್ಷಿಸಿ-ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ, ಯೋಗದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಸಂಸದ ನಳಿನ್‌ ಕುಮಾರ್ ಕಟೀಲು ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳು ಜನರಿಗಾಗಿ ಇವೆ. ಆದರೆ, ಅವು ಜನರ ಮನೆ ಮನೆಗೆ ತಲುಪುತ್ತಿಲ್ಲ. ಸರ್ಕಾರದ ಯೋಜನೆ ಫಲಾನುಭವಿಗಳಿಗೆ ಶೇ100ರಷ್ಟು ತಲುಪಬೇಕು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳನ್ನು ತರುವ ಮೂಲಕ ಬಡವರು ಮತ್ತು ಗ್ರಾಮಗಳ ಸಬಲೀಕರಣ, ಆದರ್ಶ ಗ್ರಾಮ ಯೋಜನೆ, ಹಳ್ಳಿಗಳಿಗೆ ವಿದ್ಯುತ್, ಸಣ್ಣ ಉದ್ದಿಮೆದಾರರಿಗೆ ಖಾತರಿ ರಹಿತ ಸಾಲ, ಜನ್‌ದನ್‌ ಖಾತೆಗಳು, ಜನ್ ಸುರಕ್ಷಾ ಯೋಜನೆ, ಜೀವನ ಜ್ಯೋತಿ ವಿಮೆ ಯೋಜನೆ, ಅಟಲ್ ಪಿಂಚಣಿ ಯೋಜನೆಗಳು ಈ ದೇಶದ ಪ್ರಜೆಗಳಿಗೆ ಅನುಕೂಲಕ ಆಗಿವೆ’ ಎಂದು ಅವರು ಹೇಳಿದರು.

ADVERTISEMENT

ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸ್ವಚ್ಛತೆಗೆ ಪ್ರತಿಯೊಬ್ಬರೂ ಪ್ರಾಧಾನ್ಯತೆ ಕೊಡಬೇಕು. ವಿದ್ಯಾಭ್ಯಾಸ ಪಡೆಯಬೇಕು. ಮಹಿಳೆ ಜವಾಬ್ದಾರಿ ನಿಭಾಯಿಸಿದಾಗ ಮನೆ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್‍ಆಲಿ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶಾರದಾ, ಬಂಟ್ವಾಳ ಸಿಡಿಪಿಒ ಮಲ್ಲಿಕಾ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಉಪನಿರ್ದೇಶಕ ಕೆ.ಪಿ.ರಾಜೀವನ್, ಕ್ಷೇತ್ರ ಪ್ರಚಾರ ಸಹಾಯಕ ರೋಹಿತ್, ದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.