ADVERTISEMENT

ಸರ್ಕಾರಿ ಬಸ್ಸಲ್ಲಿ ಓಡಾಡಿಯೂ ಟಾಪರ್‌!

ಎಲ್ಲ ವಿದ್ಯಾರ್ಥಿಗಳ ಸ್ಫೂರ್ತಿ ಪೂರ್ಣಾನಂದಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:42 IST
Last Updated 25 ಮೇ 2017, 5:42 IST
ಕಡಬದ ಸೇಂಟ್ ಜೋಕಿಮ್ಸ್ ಹೈಸ್ಕೂಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿ ಪೂರ್ಣಾನಂದ ಅವರನ್ನು ಕೆಎಸ್ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್‌ ಸನ್ಮಾನಿಸಿದರು. - (ಪುತ್ತೂರು ಚಿತ್ರ)
ಕಡಬದ ಸೇಂಟ್ ಜೋಕಿಮ್ಸ್ ಹೈಸ್ಕೂಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿ ಪೂರ್ಣಾನಂದ ಅವರನ್ನು ಕೆಎಸ್ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್‌ ಸನ್ಮಾನಿಸಿದರು. - (ಪುತ್ತೂರು ಚಿತ್ರ)   

ಪುತ್ತೂರು: ಮನೆಯಿಂದ ಕಾಲ್ನಡಿ ಗೆಯಲ್ಲಿ ಬಂದು ಬಳಿಕ ಸರ್ಕಾರಿ ಬಸ್ಸಲ್ಲಿ ರಿಯಾಯಿತಿ ದರದ ಪಾಸ್‌ನಲ್ಲಿ ಪ್ರಯಾಣಿಸಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಕ್ಕೆ 625 ಅಂಕ ಪಡೆದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಪೂರ್ಣಾನಂದ ಅವರ ಸಾಧನೆ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾ ಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಹೇಳಿದರು.

ಅವರು ಬುಧವಾರ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಪ್ರತಿಯೊಬ್ಬ ಬಸ್‌ ಚಾಲಕ, ನಿರ್ವಾಹಕರಿಗೂ ತಾವು ಎಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಸ್ಸಲ್ಲಿ ಕರೆದುಕೊಂಡು ಹೋಗುತ್ತಿದ್ದೇವೆ ಎಂಬುದು ಗೊತ್ತಾಗಬೇಕು. ಬಸ್‌ ಪಾಸ್‌ ಪಡೆದು ಓಡಾಡಿದ ಗ್ರಾಮಾಂತರ ವಿದ್ಯಾರ್ಥಿಯೊಬ್ಬ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದಿರುವುದು ಎಲ್ಲರಿಗೂ ಖುಷಿ ಕೊಡುವ ವಿಷಯ’ ಎಂದು ಹೇಳಿದರು.

ಬಸ್‌ನಿಂದ ಅನುಕೂಲ–ಪೂರ್ಣಾನಂದ: ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂರ್ಣಾನಂದ, ‘ನಾನು ಮನೆಯಿಂದ ಒಂದೂವರೆ ಕಿ.ಮೀ. ನಡೆದುಕೊಂಡು ಬಂದು ಬಸ್ಸಿಗಾಗಿ ಕಾಯುತ್ತಿದ್ದೆ. ಬೆಳಿಗ್ಗೆ ಕೆಲವೊಮ್ಮೆ ಬಸ್‌ ತಡವಾಗಿ ಬಂದರೂ ಸಂಜೆ ಸರಿಯಾದ ಸಮಯಕ್ಕೆ ಬರುತ್ತಿತ್ತು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಬಸ್ಸಿನ ವ್ಯವಸ್ಥೆ ಇದೆ. ತಂದೆ ತಾಯಿ, ಶಿಕ್ಷಕರು ಹಾಗೂ ಎಲ್ಲರ ಪ್ರೋತ್ಸಾಹದಿಂದ ಮತ್ತು ದೇವರ ದಯೆಯಿಂದ ನನಗೆ ಇದೆಲ್ಲಾ ಸಾಧ್ಯವಾಯಿತು’ ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 99 ಅಂಕ ಪಡೆದ ಶಶಾಂಕ್ ಎಸ್.ಎಲ್. ಅವರನ್ನೂ ಗೌರವಿಸಲಾಯಿತು. ಬೊಳು ವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ, ರಂಗನಟ ಚಿದಾನಂದ ಕಾಮತ್ ಕಾಸರಗೋಡು, ಕೆಎಸ್‍ಆರ್‌ಟಿಸಿ ತಾಂತ್ರಿಕ ಎಂಜಿನಿಯರ್‌ ವೇಣು ಗೋಪಾಲ್, ಸಿಬ್ಬಂದಿ ಶಾಂತಾ ರಾಮ ಶೆಟ್ಟಿ, ಪೂರ್ಣಾನಂದರ ತಂದೆ ವಿಷ್ಣು ಮೂರ್ತಿ ಉಪಾಧ್ಯಾಯ, ತಾಯಿ ಸವಿತಾ ಇದ್ದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ಅಂಕಿ ಅಂಶ ಅಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ತುಕಾರಾಮ್ ವಂದಿ ಸಿದರು. ರಮೇಶ್ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT