ADVERTISEMENT

ಸರ್ಕಾರಿ ಬಸ್ಸಿಗೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 8:31 IST
Last Updated 14 ನವೆಂಬರ್ 2017, 8:31 IST

ಉಳ್ಳಾಲ : ‘ಸರ್ಕಾರಿ ಬಸ್ಸು ಬಾರದೇ ಇದ್ದಲ್ಲಿ ಮುಂದೆ ವಾಹನಗಳನ್ನು ತಡೆದು, ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ತೀವ್ರ ಸ್ವರೂಪದಹೋರಾಟ ನಡೆಸಲಾಗುವುದು’ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್  ಎಚ್ಚರಿಸಿದರು.

ಮಂಗಳೂರಿನಿಂದ ಮೊಂಟೆಪದವು ಮೂಲಕ ಮುಡಿಪುವರೆಗೆ ಸಂಚರಿಸುವ ಸರ್ಕಾರಿ ಬಸ್‌ ನೀಡಲು ಒತ್ತಾಯಿಸಿ ಡಿವೈಎಫ್ ಐ ಮತ್ತು ನಾಗರಿಕರ ವತಿಯಿಂದ ತೌಡುಗೋಳಿ ಕ್ರಾಸ್‌ನಲ್ಲಿ ಸೋಮವಾರ ನಡೆದ ಬೃಹತ್ ಹಕ್ಕೊತ್ತಾಯ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಂಜನಾಡಿ ಭಾಗದಲ್ಲಿ ಸರ್ಕಾರಿ ಬಸ್‌ ನೀಡಲು ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರೂ, ಈ ಭಾಗದಲ್ಲಿ ಓಡುತ್ತಿರುವ ಖಾಸಗಿ ಬಸ್ಸು ಮಾಲೀಕರ ಲಾಭಿಯಿಂದ ಸರ್ಕಾರಿ ಬಸ್ಸು ರಸ್ತೆಗೆ ಇಳಿಯುತ್ತಿಲ್ಲ. ಈ ಕೂಡಲೇ ಬಸ್ಸುಗಳನ್ನು ಹಾಕದೇ ಇದ್ದಲ್ಲಿ ತೀವ್ರ ಸ್ವರೂಪ‌ದ ಪ್ರತಿಭಟನೆ ನಡೆಸಲಾಗುವುದು’ ಎಂದರು.

ADVERTISEMENT

ಮಂಗಳೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳು ತ್ವರಿತ ಅಭಿವೃದ್ಧಿಯನ್ನು ಕಾಣುತ್ತಿವೆ. ಈ ಭಾಗದಲ್ಲಿ ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ ಹಾಗೂ ವಿವಿಧ ಉದ್ದಿಮೆಗಳು ಇವೆ. ಜನದಟ್ಟಣೆಯೂ ಹೆಚ್ಚಿದ್ದು, ಜನರು ಕೆಲಸಕ್ಕೆ ಮತ್ತು ಶಿಕ್ಷಣಕ್ಕೆ ಮಂಗಳೂರಿಗೆ ಹೋಗುವವರಿದ್ದಾರೆ. ಇಲ್ಲಿ ಖಾಸಗಿ ಬಸ್ಸುಗಳದ್ದೇ ಅಧಿಪತ್ಯ ಸದ್ಯ ಇದ್ದು,  ಟ್ರಿಪ್ ಗಳನ್ನು ಕಡಿತ,  ಬಸ್‌ನ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಒಯ್ಯುವುದು ಮಾಡಲಾಗುತ್ತಿದೆ. 

ವಿದ್ಯಾರ್ಥಿಗಳು ಬಸ್ಸಿಗಾಗಿ ಕಾದರೂ ಬಸ್ಸು ನಿಲ್ಲದೇ ಹೋಗುವುದು ಇತ್ಯಾದಿ ಸಮಸ್ಯೆ ಇದೆ.  ಜನರು ಸರ್ಕಾರಿ ಬಸ್‌ ಸಂಚಾರ ಆಗ್ರಹಿಸಿಹೋರಾಟ ನಡೆಸುತ್ತಿದ್ದರೂ ಸ್ಪಂದನೆ ದೊರೆತಿಲ್ಲ. ಖಾಸಗಿ ಬಸ್ಸು ಮಾಲೀಕರ ಲಾಭಿಯಿಂದ ಸರಕಾರಿ ಬಸ್ಸು ಬಾರದಂತೆ ತಡೆಯಲಾಗುತ್ತಿದೆ’ ಎಂದು ಪ್ರತಿಬಟನಾಕಾರರು ಆರೋಪಿಸಿದರು.

ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಾಮಾಜಿಕ ಕಾರ್ಯಕರ್ತ ಆಲಿಕುಂಞಿ ಮೋಂಟುಗೋಳಿ, ಮುನೀರ್, ಹನೀಫ್, ವಿಶ್ವನಾಥ ಪೊಟ್ಟೊಳಿಕೆ, ನೌಸೀಫ್, ಆನಂದ, ಇರ್ಷಾದ್ ಪಡಿಕ್ಕಲ್, ಇಸ್ಮಾಯಿಲ್, ಕರ್ನಾಟಕ ರಕ್ಷಣಾ ವೇದಿಕೆಯ ಜಲೀಲ್ ಮುಡಿಪು, ಇಕ್ಬಾಲ್ ಮೊಂಟೆಪದವು  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.