ADVERTISEMENT

ಸಹಕಾರಿ ಸಂಘಗಳಲ್ಲಿ ರೈತರ ಕಡಗಣನೆ

ಬಿಜೆಪಿ ‘ಯುವ ಸಂಭ್ರಮ’: ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಕಳವಳ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:20 IST
Last Updated 19 ಏಪ್ರಿಲ್ 2017, 5:20 IST
ಹೆಬ್ರಿ: ‘ಕೃಷಿಕರ ಏಳಿಗೆಗೆ ಸರ್ಕಾರದ ಸಹಕಾರದಲ್ಲಿ ಸ್ಥಾಪನೆಯಾಗಿರುವ ಸಹಕಾರಿ ಸಂಘಗಳು ಈಗ ಕೃಷಿಕರಿಗೆ ಸಾಲ ಸವಲತ್ತುಗಳನ್ನು ನೀಡದೆ ತಮ್ಮ ಧ್ಯೇಯ ಉದ್ದೇಶಗಳನ್ನು ಮೀರಿ ಉದ್ಯಮ, ವ್ಯಾಪಾರಗಳಿಗೆ ಸಾಲ ನೀಡಿ ಕೃಷಿಕರನ್ನು ಕಡೆಗಣಿಸುತ್ತಿರುವುದು ಸರಿ ಯಲ್ಲ. ಇದರ ಬಗ್ಗೆ ಎಲ್ಲರೂ ಗಂಭೀರ ವಾಗಿ ಯೋಚಿಸಬೇಕಾಗಿದೆ’ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
 
ಅವರು ಹೆಬ್ರಿಯ ಚಾರ ಗಾಂಧಿ ನಗರದಲ್ಲಿ ಕಾರ್ಕಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಸೋಮವಾರ ನಡೆದ ಹೆಬ್ರಿ ಶಕ್ತಿ ಕೇಂದ್ರ ವ್ಯಾಪ್ತಿಯ ‘ಯುವ ಸಂಭ್ರಮ’ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
 
‘ಒಬ್ಬರು ಸಹಕಾರ ಸಂಘದಲ್ಲಿ ಪಡೆಯುವ ಸಾಲಕ್ಕೆ ಇನ್ನೊಬ್ಬರನ್ನು ಹೊಣೆ ಮಾಡುವುದು ಸರಿಯಲ್ಲ, ಇದರಿಂದ ಅರ್ಹರಿಗೆ ಸವಲತ್ತು ಕೈ ತಪ್ಪುತ್ತದೆ, ಶಾಸಕರ ಸಹಿತ ಜನಪ್ರತಿನಿಧಿಗಳು ಗಮನ ನೀಡಬೇಕು’ ಎಂದರು.
 
ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ‘ಬಿಜೆಪಿಯನ್ನು ದೇಶವೇ ಒಪ್ಪಿಕೊಂಡಿದೆ. ವಿರೋಧಿಗಳು ಕೂಡ ಬಿಜೆಪಿಯನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯನ್ನು ನರೇಂದ್ರ ಮೋದಿ ನಿರ್ಮಿಸುತ್ತಿದ್ದಾರೆ.
 
ಹಾಗಾಗಿ ಮುಂದಿನ ದಿನಗಳಲ್ಲಿ 18 ರಿಂದ 30 ರೊಳಗಿನ ಯುವಕರು ಯಾರೂ ಕಾಂಗ್ರೆಸ್‌ ನೊಂದಿಗೆ ಇರಬಾರದು ಎಂಬ ಮಹಾ ಸಂಕಲ್ಪದಿಂದ ಕ್ಷೇತ್ರದ 5 ಕಡೆ ಯಶಸ್ವಿ ಯಾಗಿ ಯುವ ಸಂಭ್ರಮ ಸಮಾವೇಶ ವನ್ನು ನಡೆಸಲಾಗಿದೆ’ ಎಂದರು.
 
ನಿವೃತ್ತ ಯೋಧರಾದ ಮೂಲ್ಕಿ ಯಶವಂತ ಕಾಮತ್ ಮತ್ತು ನಾಗಪ್ಪ ಗಾಣಿಗ, ಪ್ರಗತಿಪರ ಕೃಷಿಕರಾದ ಕಾಳು ನಾಯ್ಕ್, ರಾಜೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮಾವೇಶದ ಯಶಸ್ಸಿಗೆ ಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು. ಗೋಪೂಜೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
 
ಸಮಾವೇಶದಲ್ಲಿ ಬಿಜೆಪಿ ಮುಖಂಡ ಚಾರ ರತ್ನಾಕರ ಶೆಟ್ಟಿ, ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷ ಕರುಣಾಕರ ಕೋಟ್ಯಾನ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾ ಯಿತಿ ಸದಸ್ಯರು, ಬಿಜೆಪಿ ವಿವಿಧ ಘಟಕಗಳ ಪ್ರಮುಖರು, ಯುವ ಮೋರ್ಚಾ ಮುಖಂಡರಾದ ಡಿ.ಜಿ.ರಾಘ ವೇಂದ್ರ ದೇವಾಡಿಗ, ವಿಖ್ಯಾತ್ ಶೆಟ್ಟಿ, ಕಡ್ತಲ ಸುಕೇಶ್ ಹೆಗ್ಡೆ, ಎಳ್ಳಾರೆ ಸತೀಶ್ ಪೂಜಾರಿ, ಮಿಥುನ್ ಶೆಟ್ಟಿ, ಕಿರಣ್, ಸತೀಶ್, ದಿನೇಶ್ ಕುಲಾಲ್, ಸೂರಜ್, ಸುರೇಂದ್ರ ವರಂಗ, ನಾಗೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.