ADVERTISEMENT

ಸಾಸ್ತಾನ ಗುಂಡ್ಮಿ ಟೋಲ್ ಕೇಂದ್ರದಲ್ಲಿ ಪ್ರತಿಭಟನೆ

ಜಿಲ್ಲೆಯ ವಾಹನಗಳಿಗೆ ಟೋಲ್ ವಸೂಲಿ ಖಂಡಿಸಿ: ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:30 IST
Last Updated 22 ಏಪ್ರಿಲ್ 2017, 5:30 IST
ಗುಂಡ್ಮಿ(ಬ್ರಹ್ಮಾವರ) : ರಾಷ್ಟ್ರೀಯ ಹೆದ್ದಾರಿ 66 ರ ಸಾಸ್ತಾನ ಗುಂಡ್ಮಿಯಲ್ಲಿ ನಿರ್ಮಿಸಲಾದ ಟೋಲ್‌ಗೇಟ್‌ನಲ್ಲಿ ಏಕಾ ಏಕಿ ಸ್ಥಳೀಯ ವಾಹನಗಳಿಗೂ ಟೋಲ್‌ ಪಡೆಯುವ ಬಗ್ಗೆ ಹುನ್ನಾರಗಳು ನಡೆಯುತ್ತಿರುವುದನ್ನು ಮನಗಂಡು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಟೋಲ್ ಗೇಟ್‌ಗಳನ್ನು ತೆರವುಗೊಳಿಸುವ ಮೂಲಕ ಗುರುವಾರ ಪ್ರತಿಭಟನೆ ನಡೆಸಿದರು. 
 
ಜಿಲ್ಲಾಡಳಿತ ಟೋಲ್ ಪಡೆಯದಂತೆ ತಿಳಿಸಿದ್ದರೂ ಕೂಡ ಕರಪತ್ರ ಅಂಟಿಸಿ ಸ್ವಯಂ ನಿಯಮ ರೂಪಿಸಿ ಟೋಲ್ ಪಡೆಯುವ ಕ್ರಮ ನಿಲ್ಲಿಸುವವರೆಗೂ ನಾವು ಪ್ರತಿಭಟನೆ ಬಿಡುವುದಿಲ್ಲ ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.
 
ಕಳೆದ ಬಾರಿ ಟೋಲ್ ವಿಚಾರವಾಗಿ ಜಿಲ್ಲಾಡಳಿತದ ಸಭೆ ಮತ್ತು ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಚಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್ ಇವರ ಸಮ್ಮುಖದಲ್ಲಿ ನಡೆದ ಸಭೆಯ ನಿರ್ಣಯದಂತೆ ರಸ್ತೆ ಕಾಮಗಾರಿ ಪೂರ್ಣವಾಗುವವರೆಗೂ ಕೆ.ಎ 20 ವಾಹನಗಳಿಗೆ ಟೋಲ್ ವಸೂಲಿ ಮಾಡಬಾರದು ಎಂದು ತಿಳಿಸಲಾಗಿತ್ತು.
 
ಆದರೆ ಕಳೆದ ಗುರುವಾರದಿಂದ 5 ಕಿ.ಲೋ ಮೀಟರ್‌ನಿಂದ 20 ಕಿ.ಲೋ ಮೀಟರ್‌ವರೆಗಿನ ಖಾಸಗಿ ವಾಹನಗಳಿಗೆ ಒಂದು ತಿಂಗಳಿಗೆ ₹ 235 ನೀಡಿ ಪಾಸ್ ಪಡೆಯಬೇಕು ಮತ್ತು ವ್ಯವಹಾರಿಕ ವಾಹನಗಳಿಗೆ ಟೋಲ್ ವಿಧಿಸುವ ಕುರಿತು ಭಿತ್ತಿ ಪತ್ರ ಅಂಟಿಸಿ ಟೋಲ್ ಪಡೆಯುತ್ತಿದ್ದರು.
 
ಅಲ್ಲದೆ ಪ್ರತಿ ವಾಹನ ಸವಾರರ ಬಳಿ ಗುರುತಿನ ಚೀಟಿ ಪಡೆದು ಬಳಿಕ ಬಿಡುತ್ತಿದ್ದರು. ಇದೇ ವಿಚಾರವಾಗಿ ಚರ್ಚೆ ನಡೆಸಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಗುರುವಾರ ಸಂಜೆ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.
 
ಟೋಲ್ ಕೇಂದ್ರದಲ್ಲಿ ಹಾಕಲಾಗಿದ್ದ ಗೇಟ್‌ಗಳನ್ನು ಸರಿಸಿದ ಪ್ರತಿಭಟನಾ ನಿರತರು ಟೋಲ್ ಪಡೆಯದಂತೆ ನಿರ್ಬಂದಿಸಿ ಟೋಲ್ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಟೋಲ್ ಮುಖ್ಯಸ್ಥರು ಸ್ಥಳಕ್ಕೆ ಬರದ ಹೊರತು ಟೋಲ್ ಕೇಂದ್ರ ಬಿಟ್ಟು ತೆರಳುವುದಿಲ್ಲ ಎಂದು ತಿಳಿಸಿದರು.
 
ಬಳಿಕ ಕೋಟ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ರಾಜಗೋಪಾಲ ಮತ್ತು ಸಿಬ್ಬಂದಿ ಬಂದ  ಮಾತುಕತೆ ನಡೆಸಿದರಾದರೂ ಸಮಸ್ಯೆ ಪರಿಹಾರವಾಗದೆ ನಾವು ತೆರಳುವುದಿಲ್ಲ ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು.

ಬಳಿಕ ಟೋಲ್ ಅಧಿಕಾರಿ ರಾಘವೇಂದ್ರ ಅವರು ಸ್ಥಳಕ್ಕೆ ಬಂದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
 
ಮೊದಲು ನಡೆಸಿದ ತೀರ್ಮಾನದಂತೆ ಟೋಲ್ ಪಡೆಯಬಾರದು ಎನ್ನುವ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಎತ್ತಿ ಹಿಡಿದು ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನೆಗೆ ಮಣಿದ ಟೋಲ್ ಅಧಿಕಾರಿ ಮೊದಲಿನಂತೆ ಟೋಲ್ ಕಾರ್ಯ ನಿರ್ವಹಿಸಲಿದೆ.
 
ಯಾವುದೇ ಹೊಸ ಟೋಲ್ ಸೂಚನೆ ನೀಡುವುದಿಲ್ಲ ಎಂದು ತಿಳಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಮತ್ತು ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು.
 
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಚ್ಚುತ ಪೂಜಾರಿ ಕಾರ್ಕಡ, ವಕೀಲ ಶ್ಯಾಮ ಸುಂದರ ನಾಯರಿ, ಅಲ್ವಿನ್ ಅಂದಾದ್ರೆ, ಸಂದೀಪ್ ಕೋಡಿ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.