ADVERTISEMENT

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ದೇಶಪ್ರೇಮದ ಪ್ರಶ್ನೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 8:22 IST
Last Updated 13 ನವೆಂಬರ್ 2017, 8:22 IST

ಮಂಗಳೂರು: ‘ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತ ಶ್ರಮಿಸಿದ ಕಾಂಗ್ರೆಸ್‌ ಪಕ್ಷದ ಮುಂದೆ ಈಗ ಕೆಲವರು ದೇಶಪ್ರೇಮದ ಪ್ರಶ್ನೆಯನ್ನು ಇಡುತ್ತಿದ್ದಾರೆ’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಸುರತ್ಕಲ್‌ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಸಮಿತಿ ಮತ್ತು ಮಂಗಳೂರು ಉತ್ತರ ವಲಯದ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದ ಕಾವೂರಿನ ಕೇಂದ್ರ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸೌಹಾರ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ದೇಶದ ಬಹುಸಂಸ್ಕೃತಿ ಮತ್ತು ಜಾತ್ಯತೀತ ಗುಣವನ್ನು ರಕ್ಷಿಸುವುದಕ್ಕಾಗಿ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಪೂರ್ಣ ಜನಬೆಂಬಲದೊಂದಿಗೆ ಮತ್ತೆ ಅಧಿಕಾರ ನೀಡುವ ಮೂಲಕ ಜನತೆ ಇದನ್ನು ಸಾಬೀತು ಮಾಡುತ್ತಾರೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಜನತೆ ಬಿಜೆಪಿಯ ಮಾತುಗಳನ್ನು ನಂಬುವುದಿಲ್ಲ. ಕಾಂಗ್ರೆಸ್‌ ಭಗವಾನ್‌ ಬುದ್ಧ, ಬಸವಣ್ಣ, ಏಸುಕ್ರಿಸ್ತ ಮುಂತಾದ ಮಹಾನ್‌ ವ್ಯಕ್ತಿಗಳ ತತ್ವವನ್ನು ಪಾಲಿಸುವ ಪಕ್ಷ. ಈ ಪಕ್ಷವನ್ನು ಜನತೆ ಬೆಂಬಲಿಸುವುದು ಖಚಿತ ಎಂದು ಹೇಳಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯವನ್ನು ಸಶಕ್ತವಾಗಿ ಮುನ್ನಡೆಸುವ ಶಕ್ತಿ ಇದೆ. 2018ರಲ್ಲ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪುನರಾಯ್ಕೆ ಆದರೆ 2019ರಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ದೇಶದ ಪ್ರಧಾನಿ ಹುದ್ದೆಗೇರುವುದು ಖಂಡಿತ’ ಎಂದರು.

ಸೀರೆ, ಕುಂಕುಮ ವಿತರಣೆ: ಕಾರ್ಯಕ್ರಮದ ಅಂಗವಾಗಿ 500 ಮಹಿಳೆಯರಿಗೆ ಸೀರೆ, ಅರಿಶಿನ ಮತ್ತು ಕುಂಕುಮ ಹಾಗೂ ಅಕ್ಕಿಯನ್ನು ವಿತರಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಮಮತಾ ಡಿ.ಗಟ್ಟಿ ಈ ಕಾರ್ಯಕ್ರಮ ನಿರ್ವಹಿಸಿದರು. ನೂರಾರು ಮಹಿಳೆಯರು ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರು. ವಿದ್ಯಾರ್ಥಿ ವೇತನ ವಿತರಣೆ, ಹಿರಿಯ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಸಮಾವೇಶಕ್ಕೂ ಮುನ್ನ ಕೂಳೂರು ಜಂಕ್ಷನ್‌ನಿಂದ ಕಾವೂರು ಕೇಂದ್ರ ಮೈದಾನದವರೆಗೆ ವಾಹನ ಜಾಥಾ ನಡೆಯಿತು. ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಅಮೃತ್‌ ಗೌಡ ಜಾಥಾ ಉದ್ಘಾಟಿಸಿದರು. ಮಂಗಳೂರು ಉತ್ತರ ಶಾಸಕ ಬಿ.ಎ.ಮೊಯಿದ್ದೀನ್‌ ಬಾವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌, ಕಾಂಗ್ರೆಸ್‌ ಹಿರಿಯ ಮುಖಂಡ ಕೆ.ವಿಜಯಕುಮಾರ್‌ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಅಜೀಝ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಸುರತ್ಕಲ್‌ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಶಕುಂತಳಾ ಕಾಮತ್‌, ಉತ್ತರ ವಲಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಉತ್ತಮ್‌ ಆಳ್ವ, ಪಕ್ಷದ ಮುಖಂಡರಾದ ಕೆ.ಹರಿನಾಥ್‌, ನಾಗವೇಣಿ, ಸದಾಶಿವ ಸುವರ್ಣ, ಮಲ್ಲಿಕಾರ್ಜುನ ಕೋಡಿಕಲ್, ಹುಸೈನ್‌ ಕಾಟಿಪಳ್ಳ, ಗಿರೀಶ್‌ ಆಳ್ವ, ಜೇಸನ್‌ ಡಿಸೋಜ, ಸುಮಂತ್‌ ರಾವ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.