ADVERTISEMENT

ಹಂದಿ ಮಾಂಸ ತಾರದ ಅಣ್ಣನ ಕಾಲು ಮುರಿದ ತಮ್ಮ!

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:50 IST
Last Updated 23 ಮೇ 2017, 5:50 IST

ಪುತ್ತೂರು: ತಾಲ್ಲೂಕಿನ ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿಯಲ್ಲಿ ಹಂದಿ ಮಾಂಸ ತರಲಿಲ್ಲ ಎಂದು ಕೋಪಗೊಂಡ ತಮ್ಮ ತನ್ನ ಅಣ್ಣನಿಗೆ ದೊಣ್ಣೆಯಿಂದ ಹೊಡೆದು ಕಾಲು ಮುರಿದಿದ್ದಾನೆ.ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ನಿವಾಸಿ ಚೋಮ ನಲಿಕೆ ಅವರ ಪುತ್ರ ಗೋಪಾಲ ಹಲ್ಲೆಗೊಳಗಾದವರು.

‘ನಾನು ಪಡುವನ್ನೂರು ಸಮೀಪದ ಮುಂಡಾಜೆಯಲ್ಲಿ ನೇಮಕ್ಕೆ ತೆರಳಿದ್ದೆ. ಅಲ್ಲಿಂದ ಹಂದಿ ಮಾಂಸ ತರುವಂತೆ ನನ್ನ ಕಿರಿಯ ಸಹೋದರ ಶೀನ ನನಗೆ ತಿಳಿಸಿದ್ದ. ನಾನು ತಂದಿರಲಿಲ್ಲ. ಬದಲಾಗಿ ನನ್ನ ಇನ್ನೊಬ್ಬ ಸಹೋದರ ಅಣ್ಣು ಎಂಬಾತ ಹಂದಿ ಮಾಂಸ ತಂದಿದ್ದ.

ಇದೇ ಕಾರಣವನ್ನು ಮುಂದಿಟ್ಟುಕೊಂಡು ಶನಿವಾರ ತನ್ನೊಂದಿಗೆ ಜಗಳಕ್ಕಿಳಿದ ಶೀನ ತನ್ನ ಕಾಲಿನ ಭಾಗಕ್ಕೆ ಮರದ ದಿಣ್ಣೆಯಿಂದ ಹಲ್ಲೆ ನಡೆಸಿದ್ದಾನೆ’ ಎಂದು ಗೋಪಾಲ ಅವರು ಆರೋಪಿಸಿದ್ದಾರೆ.

ADVERTISEMENT

ತನ್ನ ಸಹೋದರ ಶೀನ ನನಗೆ ಹಲ್ಲೆ ನಡೆಸಿರುವುದು ಇದು ಪ್ರಥಮವಲ್ಲ.  ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಕೊಂಡು ಈ ಹಿಂದೆಯೂ ಆತ ತನ್ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಅವರು ದೂರಿದ್ದಾರೆ.

ತಮ್ಮ ನಡೆಸಿದ ಹಲ್ಲೆಯಿಂದಾಗಿ ಕಾಲು ಮುರಿತಕ್ಕೊಳಗಾಗಿರುವ ಗೋಪಾಲ ಅವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಾಳು ಗೋಪಾಲ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆ ನಾಪತ್ತೆ
ಮಂಗಳೂರು: ತಾಲ್ಲೂಕಿನ ಭ್ರಾಮರಿ ನಿಲಯ ಪಕ್ಷಿಕೆರೆ ಮೀನು ಮಾರ್ಕೇಟ್ ಹತ್ತಿರ ಕೆಮ್ರಾಲ್ ಗ್ರಾಮದ ಮಹಿಳೆ ಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಮ್ರಾಲ್ ಗ್ರಾಮದ ಮಮತಾ (24) ಅವರು ಬೈಕಂಪಾಡಿ ಕೈಗಾರಿಕಾ ಪ್ರದೇಶ ದಲ್ಲಿರುವ ಅಭಿ ಲಿಕ್ಸಾ ಎಂಬ ಕುಡಿಯುವ ನೀರಿನ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಇದೇ 14 ರಂದು ಸಂಜೆ 4.30 ಕ್ಕೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು.

ಬಳಿಕ ಪುತ್ತೂರಿನಲ್ಲಿರುವ ಧನಿಯವರ ಮನೆ ಭೂತ ಕೋಲ ವನ್ನು ನೋಡಲು ಹೋಗಲಿದ್ದು, ಮಂಗಳವಾರ ವಾಪಸು ಬರುವುದಾಗಿ ತಿಳಿಸಿದ್ದಾರೆ.  5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಹಳದಿ ಮತ್ತು ಬಿಳಿ ಬಣ್ಣದ ಹೂಗಳಿರುವ ಚೂಡಿದಾರ,  ಕನ್ನಡ,ತುಳು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತಲ್ಲಿ ಮೂಲ್ಕಿ ಪೊಲೀಸ್ ಠಾಣೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.