ADVERTISEMENT

ಹೆಬ್ರಿ ಬಂದ್‌ಗೆ ಭಾರಿ ಜನಬೆಂಬಲ

ಕಸ್ತೂರಿರಂಗನ್ ವರದಿ ವಿರುದ್ಧ ಬೀದಿಗಿಳಿದ ಜನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 9:00 IST
Last Updated 18 ಡಿಸೆಂಬರ್ 2014, 9:00 IST

ಹೆಬ್ರಿ: ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ಹೆಬ್ರಿ ವಲಯ ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿಯು ಬುಧವಾರ ಕರೆ ನೀಡಿದ್ದ ಹೆಬ್ರಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್‌ ಬಹುತೇಕ ಯಶಸ್ವಿಯಾಯಿತು.

ಪ್ರತಿಭಟನೆಯಲ್ಲಿ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾವಿರಾರು ಜನತೆ ಭಾಗವಹಿಸಿ, ಜಿಲ್ಲಾಡಳಿತ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ವರದಿ ಅನುಷ್ಠಾನಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ­ಗಳು, ಅರಣ್ಯ ಸಚಿವರು ಭರವಸೆ ನೀಡುವ ತನಕ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಳ್ಳಲಾಯಿತು.

ಪ್ರತಿಭಟನೆಯ ಕಾರಣ ಬುಧವಾರ ಮುಂಜಾನೆಯಿಂದಲೇ ಹೆಬ್ರಿ ಸಂಪೂರ್ಣ ಬಂದ್ ಆಗಿತ್ತು. ಕಾರ್ಕಳ–ಉಡುಪಿ–ಕುಂದಾಪುರ ಕಡೆಗೆ ಕೆಲವೊಂದು ಬಸ್ಸುಗಳು ಬೆಳಿಗ್ಗೆ ಸಂಚರಿಸಿರುವುದು ಬಿಟ್ಟರೆ ಬಳಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಆಗಿತ್ತು. ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭದ್ರತೆಯ ನಡುವೆ ಪರೀಕ್ಷೆ ನಡೆಯಿತು. ಔಷಧಿ ವ್ಯಾಪಾರಸ್ಥರು ಹೆಬ್ರಿಯಲ್ಲಿ ಪ್ರಥಮ ಬಾರಿಗೆ ಬಂದ್ ನಡೆಸಿದರು.

ಹೆಬ್ರಿ, ಚಾರ, ಕುಚ್ಚೂರು, ನಾಡ್ಪಾಲು, ಬೇಳಂಜೆ, ಕಬ್ಬಿನಾಲೆ ಮತ್ತಿತರ ಪ್ರದೇಶಗಳ ಕಾರ್ಮಿಕರು, ಮಹಿಳೆಯರು, ಮಕ್ಕಳು, ಸ್ವಯಂಸೇವಾ ಸಂಘಟನೆಗಳು ಮತ್ತು 34 ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಹೆಬ್ರಿ–ಬ್ರಹ್ಮಾವರ ರಸ್ತೆಯಲ್ಲಿ ಮೊದಲು ಜಮಾವಣೆ­ಗೊಂಡು ಮೆರವಣಿಗೆ ಮೂಲಕ ಹೆಬ್ರಿ ಬಸ್ ನಿಲ್ದಾಣಕ್ಕೆ ಬಂದು ಬಳಿಕ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

‘ರಾಜ್ಯ ಸರ್ಕಾರ ಕಸ್ತೂರಿರಂಗನ್ ವರದಿಯ ಗಂಭೀರತೆ ಅರಿತು ಜಿಲ್ಲಾ ಮಟ್ಟದ ಸಮಿತಿ ರಚಿಸಿ ಜನತೆಗೆ ಸಮಗ್ರ ಮಾಹಿತಿ ನೀಡಿ, ಗ್ರಾಮಸಭೆ ನಡೆಸಿ, ಸಂಘ ಸಂಸ್ಥೆಗಳು, ಸ್ಥಳಿೀಯ ಪ್ರಮುಖರ, ಗಣ್ಯರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸರ್ಕಾರ ಆದೇಶವನ್ನೇ ಹೊರಡಿಸಿದೆ. ಆದರೆ ಜಿಲ್ಲಾಡಳಿತ ಇದಕ್ಕೆ ಕ್ಯಾರೆ ಅನ್ನದೆ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಕುಂದಾಪುರದ ವಕೀಲ ಟಿ.ಬಿ.ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

‘ಕಸ್ತೂರಿರಂಗನ್‌ ವರದಿಗೆ ಸಂಬಂಧಿಸಿದಂತೆ ಜಿಲ್ಲಾಧಿ­ಕಾರಿಗಳು ಪ್ರತಿ ಗ್ರಾಮಸ್ಥರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮುಟ್ಟಿಸಬೇಕು. ಈ ಕೆಲಸವಾಗದಿದ್ದರೆ ನಮಗೆ ಉಳಿವಿಲ್ಲ’ ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿಯ ಕಾರ್ಕಳ ತಾಲ್ಲೂಕು ಅಧ್ಯಕ್ಷ ಮುಟ್ಲುಪಾಡಿ ಸತೀಶ ಶೆಟ್ಟಿ ಮಾತನಾಡಿ, ‘ಕಸ್ತೂರಿ ಎಂದರೆ ಪರಿಮಳ ಅಲ್ಲ ಬದುಕನ್ನೇ ತೆಗೆಯುವ ವರದಿ, ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ರಾಜಕೀಯ ಬದಿಗಿಟ್ಟು ಎಲ್ಲರೂ ಹೋರಾಟ ಮಾಡಿದರೆ ಮನೆ, ಬದುಕು ಉಳಿಯಲು ಸಾಧ್ಯ’ ಎಂದು ಹೇಳಿದರು.

ಹೋರಾಟದ ನೇತೃತ್ವ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ನವೀನ ಕೆ ಅಡ್ಯಂತಾಯ ಮಾತನಾಡಿ, ಜನತೆಗೆ ನ್ಯಾಯ ದೊರಕುವ ತನಕ ಹೋರಾಟ ನಡೆಯಲಿದೆ ಎಂದು ಹೇಳಿದರು.

ತಹಶೀಲ್ದಾರ್ ವಿರುದ್ಧ ಆಕ್ರೋಶ: ಪ್ರತಿಭಟನೆಯ ಸ್ಥಳಕ್ಕೆ ಮನವಿ ಸ್ವೀಕರಿಸಲು ಕಾರ್ಕಳ ತಹಶೀಲ್ದಾರ್‌ ಅವರು ಬರಲು ವಿಳಂಬವಾಗಿದ್ದಕ್ಕೆ ಹೋರಾಟಗಾರರು ಧಿಕ್ಕಾರ ಕೂಗಿದರು. ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಸಮಯದಲ್ಲೂ ಜನ ಧಿಕ್ಕಾರ ಕೂಗಿದರು.

ಪ್ರತಿಭಟನಾ ಸಭೆಯಲ್ಲಿ ಕುಂದಾಪುರ ಬೆಳ್ವೆಯ ಸತೀಶ್ ಕಿಣಿ, ಹೆಬ್ರಿ ವಲಯ ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹೆಬ್ರಿ ಭಾಸ್ಕರ ಜೋಯಿಸ್, ಪ್ರಮುಖರಾದ ಚೋರಾಡಿ ಅಶೋಕ್ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಎಚ್.ಕೆ.ಸುಧಾಕರ, ಸುಧಾಕರ ಹೆಗ್ಡೆ, ದಿನೇಶ್ ಶೆಟ್ಟಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಹೆಬ್ರಿ ನಾಡ್ಪಾಲು ಕುಚ್ಚೂರು ಗ್ರಾಮ ಪಂಚಾಯಿತಿ, ಹೆಬ್ರಿಯ ಬಿಜೆಪಿ, ಬಜರಂಗದಳ, ವಿಹಿಂಪ, ಜಯಕರ್ನಾಟಕ, ಕರವೇ, ಪ್ರಗತಿಪರ ಹೋರಾಟ ಸಮಿತಿ, ಮಲೆಕುಡಿಯ ಸಂಘ, ಚೈತನ್ಯ ಯುವ ವೃಂದ, ವಿಶ್ವಕರ್ಮ, ಬಂಟರು, ಬಿಲ್ಲವ, ಸವಿತಾ ಸಮಾಜ, ಮರಾಟಿ ಸಂಘ, ರಿಕ್ಷಾ, ಕಾರು, ಟ್ಯಾಕ್ಯಿ, ವಾಹನ ಚಾಲಕರ ಸಂಘ, ಭಜನೆ, ಕ್ರಿಕೆಟ್ ಕ್ಲಬ್, ಧಾರ್ಮಿಕ ಸಂಸ್ಥೆಗಳು, ಕಿಸಾನ್ ಸಂಘ, ಜೆಸಿಐ, ಲಯನ್ಸ್ ಕ್ಲಬ್, ಶಾರದೋತ್ಸವ, ಗಣೇಶೋತ್ಸವ, ಟೈಲರ್ ಸಂಘ ಸೇರಿದಂತೆ 34 ವಿವಿಧ ಸಂಘ ಸಂಸ್ಥೆಗಳು ಕಸ್ತೂರಿರಂಗನ್ ವರದಿ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಕಾರ್ಕಳ ತಹಶೀಲ್ದಾರ್ ರಾಘವೇಂದ್ರ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಸ್ಥಿತಿಯ ಅವಲೋಕನ ನಡೆಸಿತು. ಹೆಬ್ರಿ ಠಾಣಾಧಿಕಾರಿ ಸೀತಾರಾಮ್ ನೇತೃತ್ವದಲ್ಲಿ ಅಜೆಕಾರು, ಕಾರ್ಕಳ ಠಾಣಾಧಿಕಾರಿಗಳು ಮತ್ತು ಪೊಲೀಸ್ ವಿವಿಧ ತಂಡಗಳು ಬಿಗಿ ಭದ್ರತೆ ಒದಗಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.