ADVERTISEMENT

ಹೊಸ ಬಸ್‌ ನಿಲ್ದಾಣಕ್ಕೆ ಅಡ್ಡಿ ಸಲ್ಲ: ಸಚಿವ ರೈ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 8:45 IST
Last Updated 19 ಸೆಪ್ಟೆಂಬರ್ 2017, 8:45 IST

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಬಳಿ ನಿರ್ಮಾಣಗೊಳ್ಳುವ ಬಸ್ ನಿಲ್ದಾಣ ಬಗ್ಗೆ ಯಾರಿಗೂ ಗೊಂದಲ ಬೇಡ. ಇದನ್ನು ಕಾನೂನು ಚೌಕಟ್ಟಿನಲ್ಲೇ ನಿರ್ಮಿಸಲಾಗುತ್ತಿದ್ದು, ಇಂತಹ ಅಭಿವೃದ್ಧಿಗೆ ತಕರಾರು ಮಾಡಿದಷ್ಟು ಕಾಮಗಾರಿ ವಿಳಂಬವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅವರು ವಿರೋಧ ಪಕ್ಷ (ಬಿಜೆಪಿ) ಸದಸ್ಯರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ವಿಪಕ್ಷ ಸದಸ್ಯ ರಮೇಶ್ ಕುಡ್ಮೇರ್ ಮತ್ತು ಯಶವಂತ ಪೂಜಾರಿ ಪೊಳಲಿ ಮಾತನಾಡಿ, ಬಸ್ ತಂಗುದಾಣ ನಿರ್ಮಿಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಈ ಬಸ್ ತಂಗುದಾಣ ನಿರ್ಮಾಣದ ನೀಲನಕಾಶೆ ಬಗ್ಗೆ ನಮಗೆ ಕೂಡಾ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಇಲ್ಲಿನ ಹಳೆ ಕಟ್ಟಡ ತೆರವಿಗೆ ಈಗಾಗಲೇ ಜಿಲ್ಲಾ ಪಂಚಾಯಿತಿಯಿಂದ ಅನುಮತಿ ದೊರೆತಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. ಈ ನಡುವೆ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಹೇಳಿದರು. ಪ್ರಸಕ್ತ ಹಳೆ ಕಟ್ಟಡದಲ್ಲಿರುವವರಿಗೆ ಏನು ಮಾಡುತ್ತಿರಿ ಎಂದು ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ.ಬಂಗೇರ, ಮಂಗಳೂರು ಸಹಾಯಕ ಕಮಿಷನರ್ ಎ.ಸಿ.ರೇಣುಕಾಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿರಿಯ ಎಂಜಿನಿಯರ್ ನರೇಂದ್ರ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.