ADVERTISEMENT

17 ಮಸಾಜ್‌ ಪಾರ್ಲರ್‌ ಲೈಸನ್ಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 7:39 IST
Last Updated 26 ಜುಲೈ 2017, 7:39 IST

ಮಂಗಳೂರು: ನಗರದಲ್ಲಿ ಕಾರ್ಯಾಚ ರಣೆ ಮಾಡುತ್ತಿರುವ ಸ್ಕಿಲ್‌ ಗೇಮ್‌ ಸೆಂಟರ್‌ ಹಾಗೂ ಮಸಾಜ್‌ ಪಾರ್ಲರ್‌ ಗಳ ವಿರುದ್ಧ ಮಹಾನಗರ ಪಾಲಿಕೆ ಬಿಗಿ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರಿಂ ದಲೂ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಮಸಾಜ್‌ ಪಾರ್ಲರ್‌ಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ, ಆಯುರ್ವೇದ ಥೆರಪಿ ಹೆಸರಿನಲ್ಲಿ ಲೈಸನ್ಸ್‌ ಪಡೆದು, ಮಸಾಜ್‌ ಪಾರ್ಲರ್‌ ನಡೆಸು ತ್ತಿದ್ದ 17 ಕೇಂದ್ರಗಳ ಲೈಸನ್ಸ್‌ ಅನ್ನು ಈಗಾಗಲೇ ರದ್ದುಪಡಿಸಲಾಗಿದೆ. ಅಲ್ಲದೇ ಸ್ಕಿಲ್‌ ಗೇಮ್‌ಗಳಿಗೆ ಯಾವುದೇ ಪರವಾನಗಿ ನೀಡಿಲ್ಲ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

ಅನಧಿಕೃತವೇ ಹೆಚ್ಚು: ನಗರದಲ್ಲಿ ಸ್ಕಿಲ್‌ ಗೇಮ್‌ ಸೆಂಟರ್‌ಗಳಿಗೆ ಪಾಲಿಕೆ ಯಿಂದ ಅಧಿಕೃತವಾಗಿ ಯಾವುದೇ ಪರ ವಾನಗಿ ನೀಡಿಲ್ಲ. ಆದರೂ, ನಗರದಾ ದ್ಯಂತ ಸುಮಾರು 20 ಕ್ಕೂ ಹೆಚ್ಚು ಸ್ಕಿಲ್ ಗೇಮ್‌ ಸೆಂಟರ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪಾಲಿಕೆಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಈ ಕುರಿತು ಸ್ಪಷ್ಟ ಮಾಹಿತಿ ಕಲೆ ಹಾಕಲು ಮುಂದಾಗಿರುವ ಪಾಲಿಕೆ, ನಗರದಲ್ಲಿ ನಡೆಯುತ್ತಿರುವ ಸ್ಕಿಲ್‌ ಗೇಮ್‌ ಸೆಂಟರ್‌ಗಳು ಹಾಗೂ ಮಸಾಜ್‌ ಪಾರ್ಲರ್‌ಗಳ ಬಗ್ಗೆ ವಾರದಲ್ಲಿ ಮಾಹಿತಿ ನೀಡುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದೆ.

ADVERTISEMENT

ಇದರ ಜತೆಗೆ ಈಗಾಗಲೇ ಲೈಸನ್ಸ್‌ ಪಡೆದಿರುವ ಮಸಾಜ್‌ ಪಾರ್ಲರ್‌ಗಳಿಗೆ ಹಾಗೂ ಸ್ಕಿಲ್‌ ಗೇಮ್‌ ಸೆಂಟರ್‌ಗಳಿಗೆ ನೋಟಿಸ್‌ ನೀಡಲಾಗಿದ್ದು, ಪರವಾನಗಿ ನವೀಕರಣ ಮಾಡಿಕೊಳ್ಳುವಂತೆ ಸೂಚಿಸ ಲಾಗಿದೆ. ಅರ್ಜಿ ಸಲ್ಲಿಸಿದಲ್ಲಿ, ಷರತ್ತುಗ ಳನ್ನು ವಿಧಿಸಿ, ಪರವಾನಗಿ ನವೀಕರಣ ಮಾಡಲಾಗುವುದು ಎಂದು ಅಧಿಕಾ ರಿಗಳು ಹೇಳುತ್ತಾರೆ.

ಯಾವುದಕ್ಕೆ ಪರವಾನಗಿ: ಸ್ಕಿಲ್‌ ಗೇಮ್‌ ಸೆಂಟರ್‌ಗಳಲ್ಲಿ ಕೆಲ ಆಟಗಳಿಗೆ ಮಾತ್ರ ಅವಕಾಶವಿದೆ. ರಮ್ಮಿ, ಪೋಕರ್‌, ಚೆಸ್‌ಗಳನ್ನು ಮಾತ್ರ ಇಲ್ಲಿ ಆಡಬಹುದು. ಜತೆಗೆ ಇಲ್ಲಿ ಯಾವುದೇ ಹಣವನ್ನು ಪಡೆ ಯುವಂತಿಲ್ಲ. ಒಂದು ವೇಳೆ ಹಣ ಪಡೆದು, ಸೆಂಟರ್‌ಗಳನ್ನು ನಡೆಸುತ್ತಿದ್ದರೆ, ಟ್ರೇಡ್‌ ಲೈಸನ್ಸ್‌ ಪಡೆಯುವುದು ಕಡ್ಡಾಯ. ಹೀಗಾಗಿ ಪರವಾನಗಿ ಪಡೆ ಯಲು ಅರ್ಜಿ ಸಲ್ಲಿಸುವವರಿಂದ ಮುಚ್ಚ ಳಿಕೆ ಬರೆಸಿಕೊಂಡು, ಪರವಾನಗಿ ನೀಡ ಲಾಗುವುದು ಎಂದು ಮಂಜಯ್ಯ ಶೆಟ್ಟಿ ತಿಳಿಸಿದ್ದಾರೆ.

ರಿಕ್ರಿಯೇಶನ್‌ ಕ್ಲಬ್‌ಗಳನ್ನು ನಡೆಸುವುದಕ್ಕೆ ಪಾಲಿಕೆಯಿಂದ ಅನುಮತಿ ಪಡೆಯಬೇಕಿಲ್ಲ. ಆದರೆ, ಈ ಕ್ಲಬ್‌ಗಳಲ್ಲಿ ಹಣ ಪಡೆಯುವಂತಿಲ್ಲ. ಸದಸ್ಯತ್ವ ಪಡೆದವರು ಮಾತ್ರ ಇಲ್ಲಿಗೆ ಬಂದು ಆಟ ಆಡುತ್ತಾರೆ. ಆದರೆ, ಬಹುತೇಕ ಸ್ಕಿಲ್‌ ಗೇಮ್‌ ಸೆಂಟರ್‌ಗಳಲ್ಲಿ ಇದರ ದುರುಪಯೋಗ ಆಗುತ್ತಿದ್ದು, ಇದನ್ನು ನಿವಾರಿಸಲು ಪಾಲಿಕೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮೇಯರ್‌ ಕವಿತಾ ಸನಿಲ್‌ ತಿಳಿಸಿದ್ದಾರೆ.

ಯುವಕರೇ ಬಲಿ: ಸ್ಕಿಲ್‌ ಗೇಮ್‌ ಸೆಂಟರ್‌ಗಳಲ್ಲಿ ಯುವ ಜನಾಂಗವೇ ಹೆಚ್ಚು ಬಲಿಯಾಗುತ್ತಿದ್ದು, ಬಹಳಷ್ಟು ಪಾಲಕರು ತೊಂದರೆ ಅನುಭವಿಸು ವಂತಾಗಿದೆ. ಈ ಕುರಿತು ಬಹಳಷ್ಟು ಜನರು ಕರೆ ಮಾಡಿ, ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಮೇಯರ್‌ ತಿಳಿಸಿದರು.

ಈ ಹಿಂದೆ ಸುರತ್ಕಲ್‌ನಲ್ಲಿ ದಾಳಿ ನಡೆ ಸಿದ ಸಂದರ್ಭದಲ್ಲಿ ಒಂದೇ ಕಾಲೇಜಿನ ಹತ್ತಾರು ವಿದ್ಯಾರ್ಥಿಗಳು ಅಲ್ಲಿಂದ ಪರಾ ರಿಯಾಗಿದ್ದರು. ಇತ್ತೀಚೆಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರ ಡುತ್ತಿದ್ದ ವಿದ್ಯಾರ್ಥಿಯೊಬ್ಬ, ವರ್ಷವಿಡೀ ಕಾಲೇಜಿಗೆ ಹೋಗದೇ ಸ್ಕಿಲ್‌ ಗೇಮ್‌ ಸೆಂಟರ್‌ನಲ್ಲಿಯೇ ಕಾಲ ಕಳೆದಿದ್ದಾನೆ. ಹೀಗಾಗಿ ಆತನ ತಾಯಿ ಕರೆ ಮಾಡಿ, ತಮ್ಮ ನೋವನ್ನು ತೋಡಿ ಕೊಂಡಿದ್ದರು ಎಂದು ಕವಿತಾ ಸನಿಲ್‌ ತಿಳಿಸಿದರು.

ಪಾಲಿಕೆಯಿಂದ ಮಸಾಜ್‌ ಪಾರ್ಲರ್‌ ಗಳಿಗೆ ಪರವಾನಗಿ ನೀಡುತ್ತಿಲ್ಲ. ಅಲ್ಲದೇ ಸ್ಕಿಲ್‌ ಗೇಮ್‌ ಸೆಂಟರ್‌ಗಳಿಗೂ ಕೆಲ ವೊಂದು ಷರತ್ತು ವಿಧಿಸಿ, ಪರವಾನಗಿ ನೀಡಲಾಗುವುದು. ನಿಯಮ ಉಲ್ಲಂ ಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೇಯರ್ ವಿರುದ್ಧವೇ ಪ್ರಕರಣ
ಕೆಲ ದಿನಗಳ ಹಿಂದೆ ನಗರದ ಫಳ್ನೀರ್‌ನಲ್ಲಿರುವ ಸ್ಕಿಲ್‌ ಗೇಮ್‌ ಕೇಂದ್ರಕ್ಕೆ ದಾಳಿ ಮಾಡಿದ್ದ ಮೇಯರ್‌ ಕವಿತಾ ಸನಿಲ್‌ ವಿರುದ್ಧವೇ ಇದೀಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿಯೇ ಪಾಲಿಕೆ ಆರೋಗ್ಯಾಧಿಕಾರಿ, ಇನ್‌ಸ್ಪೆಕ್ಟರ್‌ ಬೆಳ್ಳಿಯಪ್ಪ ವಿರುದ್ಧವೂ ದೂರು ದಾಖಲಿಸಲಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಮೇಯರ್‌ ಕವಿತಾ ಸನಿಲ್‌, ‘ಪಾಲಿಕೆಯ ಕಾನೂನು ಸಲಹೆಗಾರರಿಗೆ ನೀಡಲಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಇನ್ನೊಂದೆಡೆ ಬೀಗ ಒಡೆದು, ಮತ್ತೆ ಸ್ಕಿಲ್‌ ಗೇಮ್‌ ಸೆಂಟರ್ ಆರಂಭಿಸಿದವರ ವಿರುದ್ಧ ಪಾಲಿಕೆಯಿಂದಲೂ ಪ್ರತಿ ದೂರು ದಾಖಲಿಸಲಾಗಿದೆ.

*  *

ಸ್ಕಿಲ್‌ ಗೇಮ್‌ ಸೆಂಟರ್‌ಗಳಿಂದಾಗಿ ಮಕ್ಕಳು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಲವು ದೂರುಗಳು ಬರುತ್ತಿವೆ. ಇದನ್ನು ನಿವಾರಿಸಲು ಸಾರ್ವಜನಿಕರು ಮುಂದೆ ಬರಬೇಕು.
ಕವಿತಾ ಸನಿಲ್‌
ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.