ADVERTISEMENT

ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಶತಮಾನೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 5:44 IST
Last Updated 20 ಜನವರಿ 2018, 5:44 IST

ಮಂಗಳೂರಿನ ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಈಗ ಶತಮಾನೋತ್ಸವದ ಸಂಭ್ರಮ. ಉಳ್ಳಾಲ ಪರಿಸರದ ವಿವಿಧ ಧರ್ಮ ಜಾತಿ ಮತಗಳ ಜನರು ಒಟ್ಟಾಗಿ ಸೇರಿ ಸೌಹಾರ್ದ ಮೆರೆಯುವ ಪವಿತ್ರ ಸ್ಥಳ ಸಂತ ಸೆಬೆಸ್ಟಿಯನ್ ಕ್ಷೇತ್ರ. ಶಾಂತಿಯ ಪರಮೋಚ್ಛ ಸಂದೇಶವನ್ನು ವಿಶ್ವವ್ಯಾಪಿ ಸಾರಿದ ಏಸುಕ್ರಿಸ್ತರ ತತ್ವವನ್ನು ತ್ರಿಕರಣಪೂರ್ವಕವಾಗಿ ಅನುಷ್ಠಾನಗೊಳಿಸಿದ ದಿವ್ಯ ಕ್ಷೇತ್ರ ಇದು. ಪೆರ್ಮನ್ನೂರು ಇಗರ್ಜಿ ಎಂದು ಖ್ಯಾತವಾದ ಈ ಚರ್ಚ್‌ಗೆ ಹಿಂದೂಗಳು, ಮುಸಲ್ಮಾನರು ಭೇಟಿ ನೀಡುತ್ತಾರೆ.

ಇದು ಕ್ರೈಸ್ತ, ಮುಸ್ಲಿಂ, ಹಿಂದೂಗಳ ಸಾಮರಸ್ಯದ ಕ್ಷೇತ್ರ. ಸೋಮನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಹಿಂದೂ ಭಕ್ತರು ಹಾಗೂ ಉಳ್ಳಾಲ ದರ್ಗಾಕ್ಕೆ ಆಗಮಿಸುವ ಮುಸ್ಲಿಂಮರು ಸಂತ ಸೆಬೆಸ್ಟಿಯನ್ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಇದು ತ್ರಿವೇಣಿ ಸಂಗಮ ಎಂಬ ಭಾವನೆ ಮೂಡಿಸುತ್ತದೆ. 1918ರಲ್ಲಿ ಆರಂಭವಾದ ಈ ಧರ್ಮಕ್ಷೇತ್ರ ಬಿಷಪ್‌ರಿಂದ ಮಾನ್ಯತೆ ಪಡೆಯಿತು.

ಚರ್ಚ್‌ನ ದಶಮಾನೋತ್ಸವ ಸಂದರ್ಭದಲ್ಲಿ ಶಿಕ್ಷಣ ಸೌಲಭ್ಯ ದೂರವಿದ್ದ ಕಾಲದಲ್ಲಿ ಇದರ ಆಡಳಿತದ ವತಿಯಿಂದ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸಲಾಯಿತು. ಈ ಕನ್ನಡ ಶಾಲೆಯಲ್ಲಿ ಈಗ 500 ಮಂದಿ ಮಕ್ಕಳು ಓದುತ್ತಿದ್ದಾರೆ.

ADVERTISEMENT

ಸಂತ ಸೆಬೆಸ್ಟಿಯನ್ ಚರ್ಚ್‌ಗೆ ಸಂಬಂಧಪಟ್ಟ 1,081 ಕುಟುಂಬಗಳಿದ್ದು 4,500ಕ್ಕೂ ಮಿಕ್ಕಿ ವಿಶ್ವಾಸಿಗಳು ನೂರು ವರ್ಷಗಳ ಚರಿತ್ರೆಯುಳ್ಳ ದೇವರಿಗೆ ಆರಾಧನೆ ಸಲ್ಲಿಸುತ್ತಾರೆ. ಚರ್ಚ್‌ನ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಫಾ. ಲಿಜೆಲ್ ಡಿಸೋಜ, ಫಾ. ಜೆ.ಬಿ.ಸಲ್ದಾನಾ, ಫಾ.ಸ್ಟಾನಿ ಪಿಂಟೋ ಈ ಚರ್ಚ್‌ನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶತಮಾನೋತ್ಸವದ ಸಂಭ್ರಮ: ಇದೆ 20 ಮತ್ತು 21ರಂದು ಸಂತ ಸೆಬೆಸ್ಟಿಯನ್ ದೇವಾಲಯದ ಶತಮಾನೋತ್ಸವ ಸಮಾರಂಭ ನಡೆಯಲಿದೆ. 20ರಂದು ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಸೆರಂಪೊರ್ ವಿವಿಯ ಉಪಕುಲಪತಿ ಜಾನ್ ಎಸ್. ಸದಾನಂದ ಹಾಗೂ ಬಶೀರ್ ಮದನಿ ಕೂಳೂರು ಸೌಹಾರ್ದ ಸಂದೇಶ ನೀಡಲಿದ್ದಾರೆ. ಮಂಗಳೂರು ಕೆಥೋಲಿಕ್‌ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ.

21ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಪೂಜಾ ವಿಧಿಗಳನ್ನು ನೆರವೇರಿಸಲಿದ್ದಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಭಾನುವಾರ ಮಧ್ಯಾಹ್ನ ಪ್ರಸಿದ್ಧ ಕಲಾವಿದರಿಂದ ‘ಏಸುಕ್ರಿಸ್ತ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.