ADVERTISEMENT

6.72 ಲಕ್ಷ ಮೌಲ್ಯದ ಸ್ವತ್ತು ಲೂಟಿ

ಗೋಳಿತೊಟ್ಟು: ರಾತ್ರಿ ಮನೆಗೆ ನುಗ್ಗಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2015, 5:04 IST
Last Updated 5 ಡಿಸೆಂಬರ್ 2015, 5:04 IST

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗೋಳಿತೊಟ್ಟು ಎಂಬಲ್ಲಿ ಗುರುವಾರ ರಾತ್ರಿ ಮನೆಗೆ ಕಳ್ಳರು ನುಗ್ಗಿ 25 ಪವನ್ ಚಿನ್ನಾಭರಣ ಮತ್ತು ₹1.80 ಲಕ್ಷ ನಗದು ಸೇರಿದಂತೆ ₹6.72 ಲಕ್ಷ ಮೌಲ್ಯದ  ಸ್ವತ್ತುಗಳನ್ನು ಲೂಟಿ ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ, ಗೋಳಿತೊಟ್ಟು ಸರ್ಕಾರಿ ಶಾಲೆಯ ಎದುರಿನಲ್ಲಿರುವ ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ದುಲ್ ನಾಸೀರ್ ಹೊಸಮನೆ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಹಿಂಬಾಗಿಲಿನ ಚಿಲಕ ಮುರಿದು ಒಳನುಗ್ಗಿರುವ ಕಳ್ಳರು, ಯಾವುದೋ ಆಯುಧ ಬಳಸಿ ಕಪಾಟು ಬಾಗಿಲು ಮುರಿದು ಕೃತ್ಯ ಎಸಗಿದ್ದಾರೆ.

ನಾಸಿರ್ ಅವರ ಮಲಗುವ ಕೊಠಡಿಯ ಕಪಾಟು ಒಳಗಿನಿಂದ ಪೆಂಡೆಂಟ್ ಇರುವ ಮುತ್ತಿನ ಹಾರ, ನೆಕ್ಲೇಸ್ ಸೆಟ್, ಬಂಗಾರದ ಚೈನ್ ಇರುವ ಟೈಟಾನ್ ವಾಚ್, 3 ಚಿನ್ನದ ಬಲೆ, 3 ಉಂಗುರ, 3 ಮೊಬೈಲ್ ಸೆಟ್, 1 ಮೊಬೈಲ್, 40 ಸಾವಿರ ರೂಪಾಯಿ ಬೆಲೆಯ ವಾಚ್‌ ಹಾಗೂ ₹1.80 ಲಕ್ಷ ನಗದು ದೋಚಲಾಗಿದೆ. ಕಳವು ಆಗಿರುವ ಸೊತ್ತುಗಳ ಒಟ್ಟು ಮೊತ್ತ ₹6.72 ಲಕ್ಷ ಎಂದು ಅಂದಾಜು ಮಾಡಲಾಗಿದೆ.

ಅಬ್ದುಲ್ ನಾಸೀರ್‌ ಅವರು ಗುರುವಾರ ಸಂಜೆ ತಮ್ಮ ಸಂಬಂಧಿಕರೂ ಆಗಿರುವ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರ ಚಿಕ್ಕಮ್ಮನ ಮಗಳ ಮದುವೆಗೆಂದು ಮಂಗಳೂರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 11 ಗಂಟೆ ವೇಳೆಗೆ ಅವರು ಹಿಂತಿರುಗಿ ಬಂದಿದ್ದು ಈ ವೇಳೆ ಕಳ್ಳತನ ಕೃತ್ಯ ನಡೆದಿದೆ.

ಮನೆ ದೋಚಿದ ಕಳ್ಳರು ಹಿಂದಿನ ಬಾಗಿಲಿನಿಂದ ಒಳನುಗ್ಗಿ ನೇರವಾಗಿ ಮನೆ ಯಜಮಾನ ನಾಸಿರ್ ಅವರ ಕೊಠಡಿಗೆ ತೆರಳಿ ಸಲೀಸಾಗಿ ಕೃತ್ಯ ಎಸಗಿದ್ದಾರೆ. ಮೇಲು ನೋಟಕ್ಕೆ ಇದು ಈ ಮನೆಯ ಬಗ್ಗೆ ತಿಳಿದಿರುವ ಪರಿಚಿತ ವ್ಯಕ್ತಿಗಳಿಂದಲೇ ನಡೆದಿರುವ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಪುತ್ತೂರು ಎಎಸ್‍ಪಿ ರಿಷ್ಯಂತ್, ಎಸ್.ಐ. ತಿಮ್ಮಪ್ಪ ನಾಯ್ಕ್, ಎಎಸ್‍ಐ. ರತನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.