ADVERTISEMENT

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ: 34 ದಿನಗಳ ‘ಮಖೆ’ ಜಾತ್ರೆ ಆರಂಭ

ಸಿದ್ದಿಕ್ ನೀರಾಜೆ
Published 18 ಫೆಬ್ರುವರಿ 2023, 5:43 IST
Last Updated 18 ಫೆಬ್ರುವರಿ 2023, 5:43 IST
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಉತ್ತರದಲ್ಲಿ ನೇತ್ರಾವತಿ ನದಿಯಲ್ಲಿರುವ ಶಿವನ ಉದ್ಭವ ಲಿಂಗದ ಸುತ್ತ ಇದ್ದ ಮರಳು ತೆಗೆದು ಶಿವರಾತ್ರಿ ದಿನದ ಪೂಜೆಗೆ ಅಣಿಗೊಳಿಸಿರುವುದು.
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಉತ್ತರದಲ್ಲಿ ನೇತ್ರಾವತಿ ನದಿಯಲ್ಲಿರುವ ಶಿವನ ಉದ್ಭವ ಲಿಂಗದ ಸುತ್ತ ಇದ್ದ ಮರಳು ತೆಗೆದು ಶಿವರಾತ್ರಿ ದಿನದ ಪೂಜೆಗೆ ಅಣಿಗೊಳಿಸಿರುವುದು.   

ಉಪ್ಪಿನಂಗಡಿ: ಕರಾವಳಿ ಕರ್ನಾಟಕದ ಚಿಕ್ಕ, ಚೊಕ್ಕ, ಮೋಹಕ ಪಟ್ಟಣ ‘ಉಪ್ಪಿನಂಗಡಿ’. ಶತಮಾನಗಳ ಹಿಂದೆ ಕರಾವಳಿಯ ಉಪ್ಪು ಘಟ್ಟದ ಮೇಲಿನ ವ್ಯಾಪಾರಸ್ಥರಿಗೆ, ಘಟ್ಟದ ಮೇಲಿನ ಧವಸ ಧಾನ್ಯಗಳನ್ನು ಕರಾವಳಿಗೆ ಕೊಡು– ಕೊಳ್ಳುವ ಪ್ರಮುಖ ಕೇಂದ್ರವಾಗಿದ್ದರಿಂದ ‘ಉಪ್ಪಿನಂಗಡಿ’ ಎಂದು ಹೆಸರು ಬಂತು. ಇದನ್ನು ತುಳುನಾಡ ಮಂದಿ ಉಪ್ಪು ಮತ್ತು ಬಾರ್ (ಭತ್ತ) ಒಂದಾಗಿಸಿ ‘ಉಬಾರ್’ ಎಂದೂ ಕರೆಯುತ್ತಾರೆ.

ಇಲ್ಲಿರುವ ಸಹಸ್ರಲಿಂಗೇಶ್ವರ ದೇವಸ್ಥಾನ ಧಾರ್ಮಿಕತೆಯ ಆಡುಂಬೊಲ. ರಾಜ್ಯದ ಪ್ರಮುಖ ಜೀವನದಿ ನೇತ್ರಾವತಿ ಮತ್ತು ಕುಮಾರಧಾರ ಸಂಗಮ ತಾಣ. ಉತ್ತರದ ಕಾಶಿಯಲ್ಲಿ ಗಂಗೆ-ಯಮುನೆ ಹೆಣ್ಣು ನದಿಗಳ ಸಂಗಮವಾದರೆ, ಇಲ್ಲಿ ಹೆಣ್ಣು- ಗಂಡು ನದಿಗಳ ಸಮ್ಮಿಲನವಾಗುತ್ತದೆ. ಹೀಗಾಗಿ, ಉಪ್ಪಿನಂಗಡಿಯು ದಕ್ಷಿಣಕಾಶಿ, ಗಯಾಪದ ಕ್ಷೇತ್ರ, ಮುಕ್ತಿಧಾಮ ಎಂದೂ ಪ್ರಸಿದ್ಧಿ ಪಡೆದಿದೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ವರ್ಷಕ್ಕೊಮ್ಮೆ ಆಯನ, ರಥೋತ್ಸವ, ಬೆಡಿ ಹೀಗೆ ಹಲವು ಹೆಸರಿನಲ್ಲಿ ಉತ್ಸವ, ಜಾತ್ರೆ ನಡೆಯತ್ತದೆ. ಆದರೆ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ವೈಶಿಷ್ಟಗಳ ಸಂಗಮವಿದೆ. ಇಲ್ಲಿ ನಡೆಯುವುದು ‘ಮಖೆ ಜಾತ್ರೆ’. ಬೇರೆಡೆ ಒಂದೆರಡು ದಿನ ಜಾತ್ರೆ ನಡೆದು, ರಥೋತ್ಸವದೊಂದಿಗೆ ಜಾತ್ರೆ ಸಂಪನ್ನವಾಗುತ್ತದೆ. ಆದರೆ, ಇಲ್ಲಿ ತಿಂಗಳಿಗೂ ಅಧಿಕ ಜಾತ್ರ ಸಂಭ್ರಮವಿದೆ, ಮಾತ್ರವಲ್ಲ ಮೂರು ಬಾರಿ ರಥೋತ್ಸವ ನಡೆಯುತ್ತದೆ.

ADVERTISEMENT

ಮಖೆ ಕೂಟ-ಜಾತ್ರೆ: ‘ಮಖೆ’ ಮಾಘ ಮಾಸದಲ್ಲಿ ನಡೆಯುವ ಜಾತ್ರೆ ಇದಾಗಿದೆ. ಮಾಘ ಮಾಸದಲ್ಲಿ ಪೌರ್ಣಮಿ, ಅಷ್ಟಮಿ, ಶಿವರಾತ್ರಿ ಹೀಗೆ 3 ಬಾರಿ ಜಾತ್ರೆ, ರಥೋತ್ಸವ ನಡೆಯುತ್ತದೆ. ಕೊಡಿ ಏರಿ ಜಾತ್ರೆ ನಡೆಯುವುದು ಮತ್ತು ಹಗಲು ರಥೋತ್ಸವ ನಡೆಯುವುದು ಇಲ್ಲಿಯ ವಿಶೇಷತೆ. ಮಘೆ ಜಾತ್ರೆ ರೂಪಾಂತರಗೊಂಡು ಮಖೆ ಜಾತ್ರೆ ಆಗಿದೆ. ಕೆಲವೊಂದು ವರ್ಷಗಳಲ್ಲಿ ಶಿವರಾತ್ರಿ ಮೊದಲು ಆಗುತ್ತದೆ. ಹಾಗೆ ಬಂದಾಗ ಅಷ್ಟಮಿ ಮಖೆ ತನಕ ದೇವರಿಗೆ 22 ದಿವಸ ಉತ್ಸವ ನಡೆಯುತ್ತದೆ. ಹುಣ್ಣಿಮೆ ಮಖೆ ಮೊದಲ್ಗೊಂಡರೆ 15 ದಿವಸ ಉತ್ಸವ ನಡೆಯುತ್ತದೆ. ಇದು ಇಲ್ಲಿಯ ಇನ್ನೊಂದು ವೈಶಿಷ್ಟ್ಯತೆ. ಈ ವರ್ಷ ಇದೇ 17ರಂದು 1ನೇ ಮಹಾಶಿವರಾತ್ರಿ ಮಖೆ ಕೂಟ, ಮಾರ್ಚ್‌ 6ರಂದು 2ನೇ ಹುಣ್ಣಿಮೆ ಮಖೆ ಕೂಟ, ಮಾರ್ಚ್‌ 14ರಂದು
3ನೇ ಅಷ್ಟಮಿ ಮಖೆಕೂಟ ಜರಗಲಿದೆ.

‌3 ಮಖೆ ಕೂಟದಂದು ರಾತ್ರಿ ಊರೂ, ಹಳ್ಳಿಗಳಿಂದ ಬರುವ ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ. ಬಳಿಕ ನದಿ ದಡದಲ್ಲಿ ಎಲ್ಲರೂ ಒಂದಾಗಿ ಸೇರುತ್ತಾರೆ. ಮರುದಿನ ಬೆಳಿಗ್ಗೆ ನದಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದು, ಬಲಿ ಉತ್ಸವದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸುತ್ತಾರೆ.

ನದಿಯಲ್ಲಿ ಉದ್ಭವಲಿಂಗ-ಅಭಿಷೇಕ: ದೇವಸ್ಥಾನದ ಉತ್ತರದಲ್ಲಿ ನೇತ್ರಾವತಿ ನದಿಯಲ್ಲಿ ಶಿವನ ಉದ್ಭವ ಲಿಂಗವಿದೆ. ಮಹಾಶಿವರಾತ್ರಿ ಮಖೆಯಂದು ಉದ್ಭವ ಲಿಂಗದ ಬಳಿ ಅಘ್ರ್ಯ, ಶಿವಪೂಜೆ ಸೇವೆಗಳು ನಡೆಯುತ್ತದೆ. ಸ್ವಯಂಭೂ ಲಿಂಗವನ್ನು ಯಾರೂ ಮುಟ್ಟಿ ಪೂಜಿಸಬಹುದಾಗಿದೆ. ಭಕ್ತರು ತಾವಾಗಿಯೇ ಹಾಲು, ಎಳನೀರು, ಕಬ್ಬಿನ ಹಾಲಿನ ಅಭಿಷೇಕ ಮಾಡುವುದಕ್ಕೆ ಅವಕಾಶವಿದೆ.

ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಮರಳಿನಿಂದ ಮುಚ್ಚಿ ಇಡುವ ಉದ್ಭವಲಿಂಗವನ್ನು ಮಖೆ ಜಾತ್ರೆಗೆ ಮೊದಲು ಮರಳು ಎತ್ತಿ ಸಾರ್ವಜನಿಕರ ದರ್ಶನಕ್ಕೆ ಮುಕ್ತಿಗೊಳಿಸಲಾಗುತ್ತದೆ. ಉತ್ತರದ ಪ್ರಯಾಗಕ್ಕೆ ಸಮಾನವಾದ ದಕ್ಷಿಣದ ಈ ಗಯಾಪದದಲ್ಲಿ ಸರಸ್ವತಿ ನದಿ ಗುಪ್ತಗಾಮಿನಿಯಾಗಿ ಹರಿಯುವಳೆಂಬ ಅಚಲ ನಂಬಿಕೆ ಹಿಂದಿನಿಂದಲೂ ಇದೆ.

ಸಾಮೂಹಿಕ ಶಿವ ನಮಸ್ಕಾರ ನಾಳೆ

ಮಹಾಶಿವರಾತ್ರಿಯಂದು ರಾತ್ರಿ ಶಿವಾಷ್ಟೋತ್ತರ ಶತನಾಮಾನಿ ಪಠಣ ಹಾಗೂ ಪುಷ್ಪಾರ್ಚನೆ, ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಬಿಲ್ವಾರ್ಚನೆ ನಡೆಯಲಿದೆ. ಫೆ.19ರಂದು ಬೆಳಿಗ್ಗೆ ವಿಶೇಷವಾಗಿ ಸಾಮೂಹಿಕವಾಗಿ ಶಿವ ನಮಸ್ಕಾರ ನಡೆಯಲಿದ್ದು, ರಾಜ್ಯದಾದ್ಯಂತದಿಂದ ಸುಮಾರು 3 ಸಾವಿರ ಮಂದಿ ಯೋಗಪಟುಗಳು ಹೆಸರು ನೋಂದಾಯಿಸಿಕೊಂಡಿದ್ದು, ಅವರು ಏಕ ಕಾಲದಲ್ಲಿ ಶಿವ ನಮಸ್ಕಾರ ಮಾಡಲಿದ್ದಾರೆ ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಕರುಣಾಕರ ಸುವರ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.