ADVERTISEMENT

ಬಂಟ್ವಾಳ: ಪಾಳುಬಿದ್ದ ಸರ್ಕಾರಿ ಕಟ್ಟಡ

ಬಿ.ಸಿ.ರೋಡು: ಪರಿಹಾರ ಕಾಣದ ವಾಹನ ನಿಲುಗಡೆ ಸಮಸ್ಯೆ

ಮೋಹನ್ ಕೆ.ಶ್ರೀಯಾನ್
Published 26 ನವೆಂಬರ್ 2023, 8:33 IST
Last Updated 26 ನವೆಂಬರ್ 2023, 8:33 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಉಪ ನೋಂದಣಾಧಿಕಾರಿ ಕಚೇರಿ ಹಳೆ ಕಟ್ಟಡ ಪಾಳು ಬಿದ್ದಿರುವುದು
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಉಪ ನೋಂದಣಾಧಿಕಾರಿ ಕಚೇರಿ ಹಳೆ ಕಟ್ಟಡ ಪಾಳು ಬಿದ್ದಿರುವುದು   

ಬಂಟ್ವಾಳ: ತಾಲ್ಲೂಕಿನ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡ ಬಿ.ಸಿ.ರೋಡು ಪೇಟೆಯಲ್ಲಿ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿ ವಾಹನ ಸವಾರರನ್ನು ಕಾಡುತ್ತಿದೆ.

ಈ ನಡುವೆ ಬಿ.ಸಿ.ರೋಡಿನ ಹೃದಯ ಭಾಗದಲ್ಲೇ ಕಂದಾಯ ಇಲಾಖೆಗೆ ಸಂಬಂಧಿಸಿದ ಸುಮಾರು 70 ಸೆಂಟ್ಸ್ ಸರ್ಕಾರಿ ಜಮೀನು ಮತ್ತು ಹಳೆ ಕಟ್ಟಡ ಪಾಳು ಬಿದ್ದುಕೊಂಡಿದೆ. ಇಲ್ಲಿನ ಆಡಳಿತ ಸೌಧದ ಪಕ್ಕದಲ್ಲೇ ಇರುವ ಹಳೆ ತಾಲ್ಲೂಕು ಕಚೇರಿ, ಹಳೆ ಉಪನೋಂದಣಾಧಿಕಾರಿ ಕಚೇರಿಯ ವ್ಯವಹಾರಗಳು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡು ಆರೇಳು ವರ್ಷಗಳು ಸಂದಿವೆ. ಈಗ ಹಳೆ ಕಟ್ಟಡ ಬಳಕೆಯಾಗದೆ, ಸುತ್ತಲೂ ಪೊದೆ ಆವರಿಸಿಕೊಂಡಿದ್ದು, ಕಸ–ಕಡ್ಡಿಗಳು, ಪ್ಲಾಸ್ಟಿಕ್ ಮತ್ತು ಮದ್ಯದ ಬಾಟಲು ಅಲ್ಲಿ ಬಿದ್ದುಕೊಂಡಿವೆ.

ಮೂರು ವರ್ಷಗಳ ಹಿಂದೆ ಬಿ.ಸಿ.ರೋಡು ಆಡಳಿತಸೌಧದ ಗೇಟ್‌ ಬಳಿ ಪುರಸಭೆ ವತಿಯಿಂದ ಅಮೃತ ನಗರ ಯೋಜನೆಯಡಿ ನಿರ್ಮಾಣಗೊಂಡ ‘ಪಿಂಕ್ ಶೌಚಾಲಯ’ ವಿವಾದಕ್ಕೆ ಕಾರಣವಾದ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಬಂದಿದ್ದ ಅಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇಲ್ಲಿಯೂ ಸ್ಥಳ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಪಾಳು ಬಿದ್ದ ಸ್ಥಳ ಶುಚಿಗೊಳಿಸಿ ವಾಹನ ನಿಲುಗಡೆ ಅಥವಾ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸ್ಥಳೀಯರು ಆಗ್ರಹಿಸಿದ್ದರು. ಆದರೆ, ಈಗಲೂ ಯಥಾಸ್ಥಿತಿಯಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಆರು ವರ್ಷಗಳ ಹಿಂದೆ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ಬಳಿ ಉದ್ಯಾನ ನಿರ್ಮಿಸಿದ್ದ ಅಂದಿನ ಸಚಿವ ಬಿ.ರಮಾನಾಥ ರೈ ಅವರು ಬಿ.ಸಿ.ರೋಡು ಪೇಟೆಯನ್ನು ‘ನಿರ್ಮಲ ಬಂಟ್ವಾಳ’ ಆಗಿ ಪರಿವರ್ತನೆಗೊಳಿಸುವುದಾಗಿ ಹೇಳಿಕೊಂಡಿದ್ದರು. ಆ ಬಳಿಕ ಶಾಸಕರಾಗಿ ಆಯ್ಕೆಗೊಂಡ ಹಾಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ‘ಸುಂದರ ಬಂಟ್ವಾಳ’ ನಿರ್ಮಿಸುವುದಾಗಿ ಘೋಷಿಸಿದ್ದರು. ನಂತರ ಮಂಗಳೂರಿನ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿ ಮೂಲಕ ಬಿ.ಸಿ.ರೋಡು ಮೇಲ್ಸೇತುವೆಯಡಿ ಇಂಟರ್ ಲಾಕ್ ಅಳವಡಿಸಿದ್ದರೂ, ಅಲ್ಲಿ ಬೈಕ್ ಮತ್ತು ರಿಕ್ಷಾ ನಿಲುಗಡೆಗೆ ಮಾತ್ರ ಅವಕಾಶ ಒದಗಿಸಲಾಗಿದೆ.

ಹೆದ್ದಾರಿ ಬದಿ ವಾಹನ ನಿಲ್ಲಿಸಿದರೆ ಸಂಚಾರಿ ಠಾಣೆ ಪೊಲೀಸರು ವಾಹನಗಳ ಚಕ್ರಕ್ಕೆ ಲಾಕ್ ಅಳವಡಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರ ಭಟ್.

ಬಿ.ಸಿ.ರೋಡು ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಂಡು ಬಳಿಕ ಬಂಟ್ವಾಳ, ಪೊಳಲಿ, ಪಾಣೆಮಂಗಳೂರು ಮತ್ತಿತರ ಕಡೆಗಳಿಗೆ ತೆರಳುವ ಬಸ್‌ಗಳು ಹೆದ್ದಾರಿ ಬದಿ ಅಂಗಡಿಗಳ ಎದುರು ನಿಲ್ಲಿಸಿ, ಪಾದಚಾರಿಗಳು ಮತ್ತು ವಾಹನ ನಿಲುಗಡೆಗೆ ಅಡ್ಡಿ ಮಾಡುತ್ತಿದ್ದರೂ, ಸಂಚಾರಿ ಠಾಣೆ ಪೊಲೀಸರು ಮೌನವಹಿಸಿದ್ದಾರೆ ಎಂಬುದು ಇಲ್ಲಿ ವರ್ತಕರ ಆರೋಪ.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಉಪ ನೋಂದಣಾಧಿಕಾರಿ ಕಚೇರಿ ಹಳೆ ಕಟ್ಟಡ ಬಳಿ ಸುತ್ತಲೂ ಪೊದೆ ಆವರಿಸಿಕೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.