ADVERTISEMENT

ಅಂಬೇಡ್ಕರ್ ಆಶೋತ್ತರಗಳ ನಾಶ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 10:29 IST
Last Updated 15 ಏಪ್ರಿಲ್ 2017, 10:29 IST
. ದಾವಣಗೆರೆಯ ಪಾಲಿಕೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪುಷ್ಪನಮನ ಸಲ್ಲಿಸಿದರು..
. ದಾವಣಗೆರೆಯ ಪಾಲಿಕೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪುಷ್ಪನಮನ ಸಲ್ಲಿಸಿದರು..   

ದಾವಣಗೆರೆ: ಅಂಬೇಡ್ಕರ್ ಆಶೋತ್ತರ ಗಳನ್ನು ನಾಶಪಡಿಸುವ ಕೆಲಸ ಸಮಾಜದಲ್ಲಿ ಈಗ ನಿರಂತರವಾಗಿದೆ ಎಂದು ಲೇಖಕ ರಾಜಪ್ಪ ದಳವಾಯಿ ವಿಷಾದಿಸಿದರು.
ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾ ನಗರಪಾಲಿಕೆ ಸಂಯುಕ್ತವಾಗಿ ಶುಕ್ರವಾರ ಹಮ್ಮಿ ಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್  126ನೇ ಜಯಂತಿ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಅಂಬೇಡ್ಕರ್ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರಚಿಸಿದ್ದಾರೆ. ಆದರೆ, ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜಮೀನ್ದಾರಿ, ಅಧಿಕಾರ ಶಾಹಿ ಹಾಗೂ ಬಂಡವಾಳಶಾಹಿ ಮನಸ್ಥಿತಿಗಳು ಈಗಲೂ ಅಡ್ಡಿಪಡಿಸುತ್ತಿವೆ ಎಂದರು.ಅಂಬೇಡ್ಕರ್ ಅವರನ್ನು ಇಂದು ವಿಶೇಷವಾಗಿ ಮಹಿಳೆಯರು, ಹಿಂದುಳಿದ ವರ್ಗದವರು ಹಾಗೂ ದಲಿತರು ಆದರ್ಶವಾಗಿ ತೆಗೆದುಕೊಳ್ಳಬೇಕು. ಈ ಮೂರೂ ವರ್ಗಗಳಿಗಾಗಿ ಅವರು ವಿಶೇಷ ಕಾನೂನುಗಳನ್ನು ರಚಿಸಿದ್ದರು ಎಂದು ಸ್ಮರಿಸಿದರು.

‘ಅಸಂಖ್ಯಾತ ಅಲಕ್ಷಿತ ಸಮುದಾಯ ಗಳಿಗೆ ನಾಗರಿಕತ್ವ ಸೃಜಿಸಿದ್ದು ಅಂಬೇಡ್ಕರ್. ಅವರನ್ನು ಜಾತಿಗೆ ಸೀಮಿತಗೊಳಿಸುವುದು ಅಪಾಯ. ಜಾತಿಯ ಮನಸ್ಸು ಯಾರಲ್ಲಿದ್ದರೂ ಅದು ತಪ್ಪು. ಅಸ್ಪೃಶ್ಯತೆ, ಮನಸ್ಸಿನ ಒಂದು ವಿಕಾರವಷ್ಟೇ’ ಎಂದು ಹೇಳಿದರು.ರಾಜ್ಯ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿದೆ. ಈ ವರದಿಯನ್ನು ಶೀಘ್ರ ಬಹಿರಂಗಪಡಿಸಬೇಕು. ಈ ಅಂಕಿ–ಅಂಶಗಳ ಆಧಾರದ ಮೇಲೆ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೌದ್ಧ ಧರ್ಮದ ಪ್ರೇರಣೆ: ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್ ಮಾತನಾಡಿ, ‘ಅಂಬೇಡ್ಕರ್ ಚಿಂತನೆಗಳು ಬೌದ್ಧ ಧರ್ಮದಿಂದ ಪ್ರೇರಿತಗೊಂಡಿದ್ದವು. ಈ ಹಿನ್ನೆಲೆಯಲ್ಲೇ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಇದೆ ಎಂಬ ಕಾನೂನುಗಳನ್ನು ಅವರು ರಚಿಸಿದ್ದರು’ ಎಂದು ಸ್ಮರಿಸಿದರು.ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. 

ಮೇಯರ್ ಅನಿತಾಬಾಯಿ, ಉಪ ಮೇಯರ್ ಮಂಜಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ತೇಜಸ್ವಿ ಪಟೇಲ್‌, ಕೆ.ಎಸ್.ಬಸವಂತಪ್ಪ, ‘ದೂಡಾ’ ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ದಲಿತ ಮುಖಂಡರಾದ ಬಿ.ಎಚ್‌.ವೀರಭದ್ರಪ್ಪ, ನೀಲಗಿರಿಯಪ್ಪ ಉಪಸ್ಥಿತರಿದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ್ ಹನುಮಂತಪ್ಪ ಸ್ವಾಗತಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ  ಅಂಬೇಡ್ಕರ್ ವೃತ್ತದಿಂದಪ್ರಾರಂಭವಾಗಿ ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ರಾಜನಹಳ್ಳಿ ಹನುಮಂತಪ್ಪ ಛತ್ರದ ಮೂಲಕ ಪಾಲಿಕೆ ಆವರಣ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.