ADVERTISEMENT

ಅಧಿಕಾರಿಗಳಿಂದ ಪ್ರಜಾತಂತ್ರದ ಕಗ್ಗೊಲೆ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:09 IST
Last Updated 16 ಜನವರಿ 2017, 4:09 IST

ಜಗಳೂರು: ಜಗಳೂರಿನಲ್ಲಿ ಎಪಿಎಂಸಿ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ತಹಶೀಲ್ದಾರ್‌ ಮತ್ತು ಪೊಲೀಸ್‌ ಅಧಿಕಾರಿಗಳು ದೌರ್ಜನ್ಯ ನಡೆಸಿ ಫಲಿತಾಂಶವನ್ನು ತಿರುಚಿದ್ದು, ಪ್ರಜಾತಂತ್ರವನ್ನು ಕಗ್ಗೊಲೆ ಮಾಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಗಂಭೀರವಾಗಿ ಆರೋಪಿಸಿದರು.

ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಹಾಗೂ ಎಸ್‌ವಿಆರ್‌ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಹಾರ, ಉತ್ತರಪ್ರದೇಶದಲ್ಲಿ ಗೂಂಡಾಗಿರಿ ಆಗುತ್ತದೆ ಎಂದು ಕೇಳಿದ್ದೆವು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ  ಬಂದ ಮೇಲೆ ಜಗಳೂರು ತಾಲ್ಲೂಕು ಸೇರಿದಂತೆ ಎಲ್ಲೆಡೆ ಗೂಂಡಾಗಿರಿ ಹಾಗೂ ದೌರ್ಜನ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಹಿರೇಮಲ್ಲನ ಹೊಳೆ ಕ್ಷೇತ್ರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಯ ಮತಗಳನ್ನು ಸೋತ ಅಭ್ಯರ್ಥಿಗೆ ಲೆಕ್ಕ ಹಾಕಿ ತಹಶೀಲ್ದಾರ್‌ ಅವರು ಅಕ್ರಮವಾಗಿ ಫಲಿತಾಂಶ ತಿರುಚಿ ರುವುದು ಪ್ರಜಾಪ್ರಭುತ್ವಕ್ಕೆ ಮಾರಕ ವಾಗಿದೆ ಎಂದು ಅವರು ದೂರಿದರು.

ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ. ಭ್ರಷ್ಟಾಚಾರ ತಾರಕಕ್ಕೇರಿದೆ. ಎಲ್ಲೆಡೆ ಬಿಜೆಪಿ ಅಲೆ ಇದ್ದು, ಮುಂದಿನ ಬಾರಿ ಬಿಜೆಪಿ ಸರ್ಕಾರ ರಚನೆಯಾಗುವ ನಿಶ್ಚಿತ ವಾಗಿದೆ. ಬರಪೀಡಿತ ತಾಲ್ಲೂಕಿನಲ್ಲಿ ಹುಟ್ಟುಹಬ್ಬವನ್ನು ಉಚಿತ ಆರೋಗ್ಯ ಮೇಳವನ್ನಾಗಿ ಸಂಘಟಿಸಿರುವುದು ಮಾದರಿಯಾಗಿದೆ ಎಂದು ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ ಮಾತನಾಡಿ, ಪಟ್ಟಣದಲ್ಲಿ ಆರೋಗ್ಯ ಮೇಳದ ಬಗ್ಗೆ ಹಾಕಿದ್ದ  ಫ್ಲೆಕ್ಸ್‌ಗಳನ್ನು ದುರುದ್ದೇಶದಿಂದ ತೆರವುಗೊಳಿಸಿರಬಹುದು. ಆದರೆ, ಜನರ ಹೃದಯಲ್ಲಿರುವ ಅಭಿಮಾನವನ್ನು ತೆರವುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ವೈದ್ಯರು ಹೃದಯ, ಮೂತ್ರಪಿಂಡ, ಕ್ಯಾನ್ಸರ್‌ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಿ ಉಚಿತ ಔಷಧಿಯನ್ನು ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯರಾದ ಎಸ್‌.ಕೆ. ಮಂಜುನಾಥ್‌, ಸವಿತಾ, ಶಾಂತಕುಮಾರಿ, ಮಾಜಿ ಸದಸ್ಯ ಎಚ್‌. ನಾಗರಾಜ್‌, ಬಿಜೆಪಿ ಅಧ್ಯಕ್ಷ ಡಿ.ವಿ. ನಾಗಪ್ಪ, ಅರಸಿಕೆರೆ ಕೊಟ್ರೇಶ್‌, ಚಟ್ನಳ್ಳಿ ರಾಜಪ್ಪ, ಮರೇನಹಳ್ಳಿ ಬಸವರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.