ADVERTISEMENT

ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

16 ಎಕರೆ 6 ಗುಂಟೆ ಕೃಷಿ ಭೂಮಿ, 4 ಮನೆ, 5 ನಿವೇಶನದ ದಾಖಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 4:44 IST
Last Updated 24 ಜೂನ್ 2017, 4:44 IST

ದಾವಣಗೆರೆ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಎಚ್‌.ಎಸ್‌.ಜಯಪ್ರಕಾಶ ನಾರಾಯಣ ಅವರಿಗೆ ಸೇರಿದ ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಇದೇ ವೇಳೆ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆಯಲ್ಲಿರುವ ತೋಟದ ಮನೆ, ಹೊದಿಗೆರೆಯಲ್ಲಿರುವ ಅವರ ತಂದೆಯ ಮನೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ದಾವಣಗೆರೆ ಕಚೇರಿ ಸೇರಿ ನಾಲ್ಕು ಕಡೆ ದಾಳಿ ನಡೆದಿವೆ.

ಈ ಹಿಂದೆ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಜಯಪ್ರಕಾಶ, ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ ಎಂದು ಎಸಿಬಿ ಪೊಲೀಸ್‌ ಠಾಣೆಗೆ ದೂರು ಬಂದಿತ್ತು.

ADVERTISEMENT

ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆ 2ನೇ ಹಂತದಲ್ಲಿ ₹ 50 ಲಕ್ಷ ಮೌಲ್ಯದ ಡುಪ್ಲೆಕ್ಸ್ ಮನೆ, ವಿವೇಕಾಂದ ಬಡಾವಣೆಯಲ್ಲಿ ₹ 50 ಲಕ್ಷ ಮೌಲ್ಯದ ಮನೆಯಿದೆ. ಜಯಪ್ರಕಾಶ ಅವರ ಹೆಂಡತಿ ಮತ್ತು ಮಗಳ ಹೆಸರಿನಲ್ಲಿ ದಾವಣಗೆರೆಯ ಪ್ರಮುಖ ಬಡಾವಣೆಗಳಲ್ಲಿ ₹ 11.74 ಲಕ್ಷ ಮೌಲ್ಯದ 5 ನಿವೇಶನಗಳಿವೆ.

ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆಯಲ್ಲಿ ₹ 50 ಲಕ್ಷ ಮೌಲ್ಯದ ಫಾರ್ಮ್‌ಹೌಸ್‌ ಇದೆ. ಹಾಗೆಯೇ ಬೆಂಗಳೂರು ದಕ್ಷಿಣ ತಾಲ್ಲೂಕು ಮೈಲಸಂದ್ರದಲ್ಲಿ ₹ 1 ಕೋಟಿ ಮೌಲ್ಯದ 3 ಅಂತಸ್ತಿನ ಮನೆಯ ದಾಖಲೆಗಳು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿವೆ.

ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅವರ ತಂದೆ, ಮಾವ ಹಾಗೂ ಪತ್ನಿಯ ಹೆಸರಿನಲ್ಲಿ 16ಎಕರೆ 6 ಗುಂಟೆ ಜಮೀನು ಹೊಂದಿರುವುದೂ ಪತ್ತೆಯಾಗಿದೆ.

ಇಷ್ಟಲ್ಲದೇ ₹ 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ಮತ್ತು ₹ 80,000 ಬೆಲೆಬಾಳುವ 2 ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ₹ 1.35 ಲಕ್ಷ ನಗದು ಸಿಕ್ಕಿದೆ.
₹ 9 ಲಕ್ಷ ಬೆಲೆ ಬಾಳುವ ಸ್ವಿಫ್ಟ್‌ ಕಾರು, ಮೂರು ಮೋಟರ್‌ ಬೈಕ್‌ಗಳು ಇರುವುದು ಗೊತ್ತಾಗಿದೆ. ಆಸ್ತಿ ಸಂಪಾದನೆಯ ಮಾರ್ಗದ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಎಸಿಬಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿಯ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.