ADVERTISEMENT

ಅಭಿಮನ್ಯುವಿಗೆ ಆರೈಕೆ; ಸಿಬ್ಬಂದಿಗೂ ವಿಶ್ರಾಂತಿ

ತಪ್ಪಿಸಿಕೊಂಡ ಕಾಡಾನೆ ಸೆರೆಗೆ ಕಾರ್ಯತಂತ್ರ; ಇಂದು ಮತ್ತೆ ಮುಂಡುವರಿಯಲಿದೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 6:33 IST
Last Updated 21 ಡಿಸೆಂಬರ್ 2017, 6:33 IST
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಆನೆಗಳ ಆರೈಕೆಯಲ್ಲಿ ತೊಡಗಿರುವ ಸಿಬ್ಬಂದಿ.
ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಆನೆಗಳ ಆರೈಕೆಯಲ್ಲಿ ತೊಡಗಿರುವ ಸಿಬ್ಬಂದಿ.   

ದಾವಣಗೆರೆ/ ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ– ಕುಕ್ಕವಾಡೇಶ್ವರಿ–ಮನ್ನಾಜಂಗಲ್‌ನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕಾಡಾನೆ ಸೆರೆ ಕಾರ್ಯಾಚರಣೆಗೆ ಬುಧವಾರ ವಿರಾಮ ನೀಡಲಾಗಿತ್ತು.

ಮಂಗಳವಾರ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ನಡೆದ ಅವಘಡದಿಂದಾಗಿ ಆನೆಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸುಸ್ತಾಗಿದ್ದ ಕಾರಣ ವಿಶ್ರಾಂತಿಯ ಮೊರೆ ಹೋಗಲಾಯಿತು ಎಂದು ಭದ್ರಾವತಿ ವಲಯ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಭಿಮನ್ಯುವಿಗೆ ವಿಶೇಷ ಆರೈಕೆ: ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಭಿಮನ್ಯುವಿಗೆ ಬಿಡಾರದಲ್ಲಿ ವಿಶೇಷವಾಗಿ ಆರೈಕೆ ಮಾಡಲಾಯಿತು. ಮಾವುತರು ಅಭಿಮನ್ಯುವಿಗೆ ಸ್ನಾನ ಮಾಡಿಸಿ ಮಾಲೀಷ್ ಮಾಡಿ, ವಿಶೇಷ ಆಹಾರ ನೀಡಿದರು. ಉಳಿದ ಆನೆಗಳಿಗೂ ಆರೈಕೆ ಮಾಡಲಾಯಿತು ಎಂದು ಅವರು ತಿಳಿಸಿದರು.

ADVERTISEMENT

ಗಾಯಗಳಾಗಿಲ್ಲ: ಕಾಡಾನೆ ಜತೆಗಿನ ಕಾದಾಟದಲ್ಲಿ ಅಭಿಮನ್ಯುವಿಗಾಗಲೀ ಜತೆಯಲ್ಲಿದ್ದ ಆನೆಗಳಿಗಾಗಲೀ ಯಾವುದೇ ಗಾಯಗಳಾಗಿಲ್ಲ. ಎಲ್ಲ ಆನೆಗಳೂ ಆರೋಗ್ಯವಾಗಿವೆ. ಹೆಚ್ಚುವರಿ ಆನೆಗಳನ್ನು ಕರೆಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಕಾಡಾನೆ ಮತ್ತೆ ಪತ್ತೆ: ಬುಧವಾರ ಬೆಳಿಗ್ಗೆ ಕೆಲವೇ ಸಿಬ್ಬಂದಿ ಒಳಗೊಂಡ ತಂಡ ಅರಣ್ಯದೊಳಗೆ ಪ್ರವೇಶಿಸಿದಾಗ ಮತ್ತೆ ಕಾಡಾನೆ ಕಾಣಿಸಿಕೊಂಡಿತು. ಆದರೆ, ಸೆರೆಗೆ ಪ್ರಯತ್ನಿಸಲಿಲ್ಲ. ಅದರ ಚಲನವಲನಗಳ ಮೇಲೆ ನಿಗಾ ಇಡಲಾಗಿದ್ದು, ಗುರುವಾರ ಸೆರೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಬಾಲಚಂದ್ರ ತಿಳಿಸಿದರು.

ದಂತ ಮುರಿದುಕೊಂಡಿದ್ದ ಆನೆ ನಾಪತ್ತೆ: ಅರಣ್ಯದೊಳಗೆ ಅಭಿಮನ್ಯುವಿನ ಮೇಲೆ ದಾಳಿಗೆ ಮುಂದಾಗಿ ದಂತ ಮುರಿದುಕೊಂಡು ಪರಾರಿಯಾಗಿರುವ ಆನೆ ಇದುವರೆಗೂ ಪತ್ತೆಯಾಗಿಲ್ಲ. ಬಹುಶಃ ಅಭಿಮನ್ಯುವಿನ ಪ್ರತಾಪಕ್ಕೆ ಹೆದರಿ ದೂರಕ್ಕೆ ಪಲಾಯನ ಮಾಡಿರುವ ಸಾಧ್ಯತೆಗಳು ಇವೆ ಎಂದರು.

ಕಾರ್ಯಾಚರಣೆ ಬದಲು: ಗುರುವಾರ ಬೆಳಿಗ್ಗೆ 6ಕ್ಕೆ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಈ ಬಾರಿ ಹೊಸ ಕಾರ್ಯತಂತ್ರಗಳನ್ನು ಹೆಣೆಯಲಾಗಿದೆ. ಸಿಬ್ಬಂದಿ ಒಟ್ಟಾಗಿ ಕಾಡು ಪ್ರವೇಶಿಸುವ ಬದಲು ತಂಡಗಳಾಗಿ ಎಲ್ಲ ದಿಕ್ಕುಗಳಿಂದಲೂ ನುಗ್ಗುವ ಯೋಚನೆ ಇದೆ. ಇದರಿಂದ, ಕಾಡಾನೆಗಳು ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಕಾರ್ಯಾಚರಣೆ ಶೀಘ್ರ ಅಂತ್ಯವಾಗಲಿದೆ ಎಂದರು.

‘ಹೆಸರಿಗೆ ತಕ್ಕಂತೆ ಅಭಿಮನ್ಯು’
ಕಾಡಾನೆ ಸೆರೆ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಅವಘಡ ನಡೆಯುವ ಮುನ್ಸೂಚನೆಯೇ ಇರಲಿಲ್ಲ. ಇನ್ನೇನೂ ಕಾಡಾನೆಯನ್ನು ಹಿಡಿದೇಬಿಟ್ಟೆವು ಎಂಬ ಸಮಯದಲ್ಲಿ ಮತ್ತೊಂದು ಆನೆ ದಾಳಿ ಮಾಡಿತು. ಇಡೀ ತಂಡವೇ ಆತಂಕಕ್ಕೆ ಒಳಗಾದಾಗ ಅಭಿಮನ್ಯು ನೆರವಿಗೆ ಬಂದ. ಹೆಸರಿಗೆ ತಕ್ಕಂತೆ ಅಭಿಮನ್ಯು ಕಾದಾಡಿ ಕಾಡಾನೆಯ ದಂತಭಗ್ನಗೊಳಿಸಿದೆ. ಸಿಬ್ಬಂದಿಯ ಜೀವ ಉಳಿಸಿದ. ಆ ಸನ್ನಿವೇಶವನ್ನು ಮರೆಯಲು ಸಾಧ್ಯವಿಲ್ಲ ಎಂದು ಬಾಲಚಂದ್ರ ಸ್ಮರಿಸಿದರು.

‘ಅಣ್ಣ–ತಮ್ಮ ಇರಬಹುದು’
ಬಸವಾಪಟ್ಟಣ, ಚನ್ನಗಿರಿ ಭಾಗದಲ್ಲಿ ಮೂವರನ್ನು ಬಲಿ ತೆಗೆದುಕೊಂಡ ಕಾಡಾನೆ ಹಾಗೂ ಮಂಗಳವಾರ ಕಾರ್ಯಾಚರಣೆ ತಂಡದ ಮೇಲೆ ದಾಳಿ ನಡೆಸಿದ ಆನೆ ಮೇಲ್ನೋಟಕ್ಕೆ ಸಹೋದರರಂತೆ ಕಾಣುತ್ತಿವೆ. ಒಂದು ಆನೆ ಸೆರೆಗೆ ಮುಂದಾದರೆ ಮತ್ತೊಂದು ಆನೆ ಅಡ್ಡಿಪಡಿಸುತ್ತಿರುವದನ್ನು ನೋಡಿದರೆ ಚಿತ್ರದುರ್ಗ ಹಾಗೂ ದಾವಣಗೆರೆ ಭಾಗದಲ್ಲಿ ಜತೆಯಾಗಿ ಅಡ್ಡಾಡಿದ ಆನೆಗಳೇ ಇವು ಎಂಬ ಅನುಮಾನ ಕಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.