ADVERTISEMENT

ಅಲ್ಪ ಮಳೆಯಲ್ಲೇ ಬಂತು ಭರ್ಜರಿ ಫಸಲು

ನಾಗರಾಜ ಹುಲಿಮನೆ
Published 10 ನವೆಂಬರ್ 2017, 6:46 IST
Last Updated 10 ನವೆಂಬರ್ 2017, 6:46 IST
ತ್ಯಾವಣಿಗೆಯ ರೈತ ಅಜಯ್‌ ಅವರ ಭತ್ತದ ಗದ್ದೆಯಲ್ಲಿನ ಭರಪೂರ ಫಸಲು
ತ್ಯಾವಣಿಗೆಯ ರೈತ ಅಜಯ್‌ ಅವರ ಭತ್ತದ ಗದ್ದೆಯಲ್ಲಿನ ಭರಪೂರ ಫಸಲು   

ದಾವಣಗೆರೆ: ತಲೆದೂಗುವ ತೆನೆ, ಹೊಂಬಣ್ಣಕ್ಕೆ ತಿರುಗುತ್ತಿರುವ ಭತ್ತ... ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಳೆ ಕೊರತೆಯಿಂದ ಮೂರು ಹಂಗಾಮಿನ ಬೆಳೆ ಕಳೆದುಕೊಂಡಿದ್ದ ಕೆಲ ಅನ್ನದಾತರಿಗೆ ಕೂರಿಗೆ ಬೇಸಾಯ ಪದ್ಧತಿ ಕೈ ಹಿಡಿದಿದೆ.

ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಹೋಬಳಿಯಲ್ಲಿ ಶೇ 90ರಷ್ಟು ರೈತರು ಭತ್ತ ಬೆಳೆಯುತ್ತಾರೆ. ಮಳೆ ಕೊರತೆ, ನೀರಿನ ಅಲಭ್ಯತೆಯಿಂದ ಹೆಚ್ಚಿನ ರೈತರು ಭತ್ತ ನಾಟಿ ಮಾಡಿಲ್ಲ. ಒಂದಷ್ಟು ರೈತರು ರಾಗಿ, ಮೆಕ್ಕೆಜೋಳ, ಬಿಳಿಜೋಳ ಬಿತ್ತಿದ್ದಾರೆ. ಆದರೆ, ಕೆಲವರು ಕೂರಿಗೆ ಬಿತ್ತನೆ ಮಾಡಿ ಭತ್ತ ಬೆಳೆದು ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ.

ತ್ಯಾವಣಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ವಿ.ಶ್ರೀನಿವಾಸಲು ಅವರ ಪ್ರೋತ್ಸಾಹದಿಂದ ಹೋಬಳಿ ವ್ಯಾಪ್ತಿಯಲ್ಲಿ 625 ಎಕರೆ ಪ್ರದೇಶದಲ್ಲಿ ಕೂರಿಗೆ ಪದ್ಧತಿಯಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಮಳೆ ಅಭಾವದ ನಡುವೆಯೂ 400 ಎಕರೆಯಲ್ಲಿ ಫಸಲು ಹಸನಾಗಿ ಬೆಳೆದು ನಿಂತಿದೆ.

ADVERTISEMENT

ತ್ಯಾವಣಿಗೆಯ ಅಜಯ್‌, ಕರಿಬಸಪ್ಪ, ಶೇಖರಪ್ಪ, ಜಿ.ಜೆ.ವೀರಪ್ಪ, ಸುಧಾಕರ್‌, ನಲ್ಕುದರೆಯ ಬಾಬಣ್ಣ, ಶೇಷಪ್ಪ ಕ್ಯಾಂಪ್‌, ಕಾರಿಗನೂರಿನ ಸುಂದರೇಶ್‌ ಪಟೇಲ್‌ ಕೂರಿಗೆ ಪದ್ಧತಿಯಲ್ಲಿ ಭತ್ತ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಮಳೆ ಕೊರತೆಯಿಂದ ಎರಡು ವರ್ಷದಲ್ಲಿ ಮೂರು ಫಸಲು ಕೈಬಿಟ್ಟವು. ಈ ಬಾರಿಯೂ ಗದ್ದೆ ಬೀಳು ಬಿಡಬೇಕಾದ ಆತಂಕ ಆವರಿಸಿತ್ತು. ಆದರೆ, ರೈತ ಸೇವಾ ಕೇಂದ್ರದ ಸಲಹೆಯಂತೆ ಕೂರಿಗೆ ಪದ್ಧತಿಯಲ್ಲಿ ಭತ್ತ ಬಿತ್ತನೆ ಮಾಡಿದ್ದರಿಂದ 25 ಎಕರೆಯಲ್ಲಿ ಭರ್ಜರಿ ಫಸಲು ಬಂದಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ತ್ಯಾವಣಿಗೆಯ ರೈತ ಅಜಯ್‌. ‘ಕೂರಿಗೆ ಪದ್ಧತಿಯಲ್ಲಿ ಕಳೆ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಕಳೆ ನಿಯಂತ್ರಿಸಿದಷ್ಟೂ ಭತ್ತ ಭರಪೂರವಾಗಿ ಬೆಳೆಯುತ್ತದೆ. ಹಳ್ಳದಿಂದ ಗದ್ದೆಗೆ ಎರಡು ಬಾರಿ ನೀರು ಹಾಯಿಸಿದೆವು. ಹೀಗಾಗಿ ಬೆಳೆ ಚೆನ್ನಾಗಿ ಬಂತು. ಇನ್ನು ಮುಂದೆ ಕೂರಿಗೆ ಪದ್ಧತಿಯಲ್ಲೇ ಭತ್ತ ಬೆಳೆಯುತ್ತೇವೆ’ ಎಂಬುದು ಅವರ ಮಾತು.

ಕೂರಿಗೆ ಪದ್ಧತಿಯೇ ಉತ್ತಮ: ‘ನಾಟಿಗೆ ಹೋಲಿಸಿದರೆ ಕೂರಿಗೆ ಪದ್ಧತಿಯಲ್ಲಿ ಭತ್ತ ಬಿತ್ತನೆ ಮಾಡುವುದಕ್ಕೆ ಎಕರೆಗೆ ಅಂದಾಜು ₹ 8,000 ಉಳಿತಾಯವಾಗುತ್ತದೆ. ನಾಟಿ ಮಾಡಿದ ಭತ್ತಕ್ಕೆ ಕನಿಷ್ಠ ನಾಲ್ಕು ಬಾರಿ ಔಷಧ ಸಿಂಪಡಿಸಬೇಕು. ಬಿತ್ತನೆ ಮಾಡಿದ ಭತ್ತಕ್ಕಾದರೆ ಎರಡು ಸಾರಿ ಕಳೆನಾಶಕ ಹೊಡೆದರೆ ಸಾಕು. ಸಾಂಪ್ರದಾಯಿಕ ಪದ್ಧತಿಗಿಂತ ಐದು ಚೀಲ ಇಳುವರಿಯೂ ಹೆಚ್ಚು ಬರುತ್ತದೆ’ ಎನ್ನುತ್ತಾರೆ ಅವರು.

‘ನಾಟಿ ಮಾಡಿದ ಭತ್ತಕ್ಕೆ ದಿನವೂ ನೀರು ಕೊಡಬೇಕು. ಆದರೆ, ಬಿತ್ತನೆ ಮಾಡಿದ ಭತ್ತಕ್ಕೆ 10 ದಿನಕ್ಕೊಮ್ಮೆ ನೀರು ನೀಡಿದರೆ ಸಾಕು. ಕಡಿಮೆ ನೀರಿನಲ್ಲೂ ಉತ್ತಮ ಬೆಳೆ ತೆಗೆಯಲು ಸಾಧ್ಯವಿದೆ. ತ್ಯಾವಣಿಗೆ ಹೋಬಳಿಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಕೂರಿಗೆ ಪದ್ಧತಿ ಅಳವಡಿಸಿಕೊಂಡರೆ ಭದ್ರಾ ಜಲಾಶಯದ ಮೇಲಿನ ನೀರಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ಎಲ್ಲಾ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ರೈತ ಚಾಮರಾಜ್.

‘ಭದ್ರಾ ಜಲಾಶಯ ನಿರ್ಮಾಣ ಆದಾಗಿನಿಂದಲೂ ಈ ಭಾಗದಲ್ಲಿ ಎರಡೂ ಹಂಗಾಮಿನಲ್ಲಿ ಭತ್ತವನ್ನೇ ಬೆಳೆಯಲಾಗುತ್ತಿದೆ. ನಿರಂತರವಾಗಿ ನೀರು ಹರಿಸುತ್ತಿರುವುದರಿಂದ ಮಣ್ಣು ಕ್ಷಾರವಾಗುತ್ತಿದೆ. ಕಸುವು ಕ್ಷೀಣಿಸಿ, ಜಮೀನು ಬಂಜರಾಗುತ್ತಿದೆ. ನಾಟಿ ವೇಳೆ,   ಗದ್ದೆ ತುಂಬ ಮೊಣಕಾಲುದ್ದ ನೀರು ನಿಲ್ಲಿಸಿ, ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಲಾಗುತ್ತದೆ. ಇದರಿಂದ ನೀರಿನಲ್ಲಿ ಮೇಲ್ಮಣ್ಣು ಕೊಚ್ಚಿ ಹೋಗುತ್ತದೆ. ಕೂರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರಿಂದ ರೋಗಬಾಧೆ ಕಡಿಮೆಯಾಗಿ, ಇಳುವರಿ ಹೆಚ್ಚುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಬಿ.ವಿ.ಶ್ರೀನಿವಾಸಲು.

ರಾಯಚೂರು ಭಾಗದಲ್ಲಿ ಕೂರಿಗೆ ಪದ್ಧತಿಯನ್ನು ಸಮಗ್ರವಾಗಿ ಅಳವಡಿಸಿಕೊಳ್ಳಲಾಗಿದೆ. ಈ ಬಗ್ಗೆ 2012ರಲ್ಲಿ ಪತ್ರಿಕೆಯೊಂದರಲ್ಲಿ ಬಂದಿದ್ದ ವರದಿ ಆಧರಿಸಿ, ಬಸವಾಪಟ್ಟಣ ಭಾಗದ ರೈತರು ರಾಯಚೂರಿಗೆ ಭೇಟಿ ನೀಡಿ, ಕೃಷಿ ಪದ್ಧತಿಯನ್ನು ನೋಡಿಕೊಂಡು ಬಂದಿದ್ದರು. ಹೀಗಾಗಿ ಕೂರಿಗೆ ಭತ್ತದ ಪರಿಚಯ ರೈತರಿಗೆ ಇತ್ತು. ರೈತ ಸಂಪರ್ಕ ಕೇಂದ್ರದ ಪ್ರಯತ್ನದಿಂದ 625 ಎಕರೆಯಲ್ಲಿ ಈ ಬಾರಿ ಕೂರಿಗೆ ಪದ್ಧತಿಯಲ್ಲಿ ಬಿತ್ತನೆ ಆಗಿದೆ. ಆರಂಭದಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಕೆಲ ಪ್ರದೇಶದಲ್ಲಿ ಬೆಳೆ ಬರಲಿಲ್ಲ. ಮುಂದಿನ ಹಂಗಾಮಿನಲ್ಲಿ ಕೂರಿಗೆ ಪದ್ಧತಿ ಅಳವಡಿಸಿಕೊಳ್ಳುವಂತೆ ಇನ್ನಷ್ಟು ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.