ADVERTISEMENT

‘ಆಚಾರ, ವಿಚಾರ, ಅರಿವು ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:53 IST
Last Updated 20 ಮಾರ್ಚ್ 2017, 5:53 IST

ಚನ್ನಗಿರಿ: ‘ಆಚಾರ, ವಿಚಾರ, ಅರಿವು, ಅನುಭವ ಹೊಂದಿರುವವರು ನಿಜವಾದ ಶರಣರಾಗಿರುತ್ತಾರೆ. ಎಲ್ಲರಲ್ಲೂ ಆಚಾರ, ವಿಚಾರ, ಅರಿವು, ಅನುಭವ ಇರುವುದು ಅವಶ್ಯವಾಗಿದೆ’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಶನಿವಾರ ರಾತ್ರಿ ನಡೆದ 787 ನೇ ಮಾಸಿಕ ಶಿವಾನುಭವ ಹಾಗೂ ದಿವ್ಯಜ್ಞಾನಿ ಅಲ್ಲಮಪ್ರಭುದೇವರ ಸ್ಮರಣೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘12 ನೇ ಶತಮಾನದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲು ಎಲ್ಲಾ ಶರಣರು ತುಂಬಾ ಶ್ರಮಪಟ್ಟರು. ಆದರೆ ಇಂದಿಗೂ ಜಾತಿ ಪದ್ಧತಿ ನಿರ್ಮೂಲನೆ ಯಾಗಿರುವುದಿಲ್ಲ. ಜಾತಿಯ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಜಾತಿ ಪದ್ಧತಿ ನಿರ್ಮೂಲನೆಯಾಗದ ಹೊರತು ದೇಶದ ಸಂಪೂರ್ಣ ಪ್ರಗತಿ ಅಸಾಧ್ಯ’ ಎಂದರು.

‘ಶರಣರ ನಡೆನುಡಿ, ಆಚಾರ, ವಿಚಾರಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಹೃದಯ ಮತ್ತು ಮನಸ್ಸುಗಳಿಂದ ಅರಳಿದ ಪುಷ್ಪಗಳೇ ವಚನ ಕಾಶಿಗಳಾಗಿವೆ. ಕಾಯಕಕ್ಕೆ ಹೆಚ್ಚು ಮಹತ್ವನ್ನು ಕೊಡುವುದು ಅಗತ್ಯವಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ಒತ್ತಡವನ್ನು ಬದಿಗಿಟ್ಟು ಒಂದಿಷ್ಟು ಹೊತ್ತು ಆಧ್ಯಾತ್ಮಿಕ ನುಡಿಗಳನ್ನು ಕೇಳಿದರೆ ನೆಮ್ಮದಿ ಕಾಣಬಹುದಾಗಿದೆ’ ಎಂದರು.

ಹೊಳೆಹೊನ್ನೂರು ಕ್ಷೇತ್ರದ ಮಾಜಿ ಶಾಸಕ ಕರಿಯಣ್ಣ, ಎಪಿಎಂಸಿ ಸದಸ್ಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಟಿ. ನಾಗರಾಜ್, ಶಿವಮೊಗ್ಗದ ಸಮಾಜ ಸೇವಕಿ ಮಾಲತಿ ಶೇಖರ್ ಇದ್ದರು. ಕೆ.ಎಂ. ಮಂಜಪ್ಪ ಸ್ವಾಗತಿಸಿದರು. ಸದಾಶಿವ ವಂದಿಸಿದರು. ಎಂ.ಬಿ. ನಾಗರಾಜ್ ಕಾಕನೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.