ADVERTISEMENT

ಆತಂಕ ಮೂಡಿಸಿದ ಗಣಿಗಾರಿಕೆ ತೂಗುಗತ್ತಿ

ಮಲ್ಲಿಕಾರ್ಜುನ ಕನ್ನಿಹಳ್ಳಿ
Published 8 ನವೆಂಬರ್ 2017, 6:49 IST
Last Updated 8 ನವೆಂಬರ್ 2017, 6:49 IST
ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮದ ಬಳಿ ಗಣಿಗಾರಿಕೆ ನಡೆಯುವ ಬೆಟ್ಟದಲ್ಲಿ ಪ್ರದೇಶ.
ಹರಪನಹಳ್ಳಿ ತಾಲ್ಲೂಕಿನ ವಟ್ಲಹಳ್ಳಿ ಗ್ರಾಮದ ಬಳಿ ಗಣಿಗಾರಿಕೆ ನಡೆಯುವ ಬೆಟ್ಟದಲ್ಲಿ ಪ್ರದೇಶ.   

ಹರಪನಹಳ್ಳಿ: ಕಬ್ಬು, ತೆಂಗು, ಬಾಳೆ, ಅಡಿಕೆ, ಶೇಂಗಾ, ಮೆಕ್ಕೆಜೋಳ ಬೆಳೆದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ ಸಾವಿರಾರು ರೈತ ಕುಟುಂಬಗಳಲ್ಲಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ಆರಂಭಗೊಳ್ಳಲಿರುವ ಗಣಿಗಾರಿಕೆ ಎಂಬ ‘ತೂಗುಗತ್ತಿ’ ಆತಂಕ ಮೂಡಿಸಿದೆ.

ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿ ತಟದ ಕಡತಿ, ವಟ್ಲಹಳ್ಳಿ, ಕಂಡಿಕೇರಿ ತಾಂಡಾ, ಶಾಂತಿನಗರ, ದುಗ್ಗಾವತಿ ಗ್ರಾಮಸ್ಥರು ಗಣಿಕಾರಿಕೆಯಿಂದ ಉಂಟಾಗುವ ಮಾಲಿನ್ಯವನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ವಟ್ಲಹಳ್ಳಿ ಗ್ರಾಮದ ಬಳಿಯ 381/ಎ ಸರ್ವೆ ನಂಬರ್‌ನಲ್ಲಿ 12.56 ಹೆಕ್ಟೇರ್‌ ಪ್ರದೇಶದಲ್ಲಿ ಬಳ್ಳಾರಿಯ ಎರ‍್ರಿತಾತ ಮೈನಿಂಗ್‌ ಕಂಪೆನಿಗೆ ಮ್ಯಾಂಗನೀಸ್‌ ಅದಿರು ಸಾಗಿಸಲು 2031ರವರೆಗೆ ಪರವಾನಗಿ ನೀಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೆಪ್ಟೆಂಬರ್‌ ಸೆ. 27ರಂದು ಆದೇಶ ಹೊರಡಿಸಿದೆ. ದೀಪಾವಳಿ ಹಬ್ಬದಂದು ಭೂಮಿ ಪೂಜೆ ಮಾಡಲು ಕಂಪೆನಿಯವರು ಗ್ರಾಮಕ್ಕೆ ಬಂದಾಗ ಪ್ರತಿಭಟಿಸಿದ ಗ್ರಾಮಸ್ಥರು ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದ್ದರು.

ADVERTISEMENT

ತಪ್ಪದ ಗೋಳು: 25 ವರ್ಷಗಳ ಹಿಂದೆ ಕಡತಿ, ವಟ್ಲಹಳ್ಳಿ ಗ್ರಾಮಗಳಿಗೆ ತುಂಗಭದ್ರಾ ನದಿ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಎರಡು ಗ್ರಾಮಗಳನ್ನು ಸರ್ಕಾರ ಸ್ಥಳಾಂತರಿಸಿತ್ತು. ಸುಮಾರು 500 ಕುಟುಂಬಗಳು ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಗಳಿಗೆ ಸರ್ಕಾರ ಹಕ್ಕುಪತ್ರವನ್ನು ಇನ್ನೂ ವಿತರಿಸಿಲ್ಲ. ಅದಿರು ಸಾಗಿಸುವ ಪ್ರದೇಶ ವಟ್ಲಹಳ್ಳಿ ಗ್ರಾಮದಿಂದ ಕಣ್ಣಳತೆ ದೂರದಲ್ಲಿದೆ.

ಸಂಧಾನ ಸಭೆ ವಿಫಲ: ಗಣಿಗಾರಿಕೆ ಆರಂಭಿಸಲು ಕಂಪೆನಿ ಪರವಾಗಿ ಜಿಲ್ಲಾಧಿಕಾರಿ ಗ್ರಾಮಕ್ಕೆ ತೆರಳಿ ಎರಡು ಬಾರಿ ನಡೆಸಿದ ಸಂಧಾನವೂ ವಿಫಲವಾಗಿದೆ. ಗಣಿಗಾರಿಕೆಯಿಂದ ವಾಯು ಹಾಗೂ ಶಬ್ದ ಮಾಲಿನ್ಯ ಉಂಟಾಗಲಿದೆ. ಸಿಡಿಮದ್ದು ಸ್ಫೋಟಿಸುವುದರಿಂದ ಮನೆ, ಕೊಳವೆಬಾವಿಗಳಿಗೆ ಹಾನಿ ಸಂಭವಿಸುತ್ತದೆ. ದೂಳು ಬೆಳೆಗಳ ಮೇಲೆ ಆವರಿಸಿಕೊಳ್ಳುವುದರಿಂದ ಇಳುವರಿ ಕುಂಠಿತಗೊಳ್ಳಲಿದೆ. ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂಬುದು ಗ್ರಾಮಸ್ಥರ ಅಳಲು.

‘ನೆರೆಹಾವಳಿಗೆ ತತ್ತರಿಸಿ ವಲಸೆ ಬಂದಿದ್ದೇವೆ. ಮನೆಗಳಿಗೆ ಹಕ್ಕು ಪತ್ರ ಇಲ್ಲದಿರುವುದರಿಂದ ನಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎಂಬ ಭಯದಲ್ಲಿ ಬದುಕುತ್ತಿದ್ದೇವೆ. ವಟ್ಲಹಳ್ಳಿ ಗ್ರಾಮವನ್ನು ಮತ್ತೊಂದು ಬಳ್ಳಾರಿಯಾಗಲು ಬಿಡುವುದಿಲ್ಲ. ನಮಗೆ ಗಣಿಗಾರಿಕೆ ಬೇಡ’ ಎಂದು ಗ್ರಾಮದ ಮುಖಂಡ ಕಡತಿ ಮಲ್ಲಪ್ಪ ಸರ್ಕಾರದ ನಿಲುವನ್ನು ವಿರೋಧಿಸಿದರು.
‘1982ರಲ್ಲಿ ಎರ‍್ರಿತಾತ ಕಂಪೆನಿ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿತ್ತು. ಆಗ ಮನೆಗಳು ಇರಲಿಲ್ಲ. ಎಂಟು ವರ್ಷಗಳ ಕಾಲ ಇದೇ ಬೆಟ್ಟದಲ್ಲಿ ನೌಕರನಾಗಿದ್ದೆ. ಅಲ್ಲಿನ ದೂಳಿನಿಂದ ಹಿಂಸೆ ನುಭವಿಸಿದ್ದೇನೆ.


ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಕೆಲಸ ಬಿಟ್ಟೆ. ಈಗ ಮತ್ತೆ ಅದಿರು ಸಾಗಿಸಲು ಸರ್ಕಾರ ಪರವಾನಗಿ ನೀಡಿದೆ’ ಎಂದು ಕೆಂಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರರಿಂದ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಗಣಿಗಾರಿಕೆ ಸಚಿವರು, ಪ್ರಧಾನಿಗೆ ಪತ್ರ ಬರೆದು ಗಣಿಗಾರಿಕೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ‌ನಮಗೆ ಹಕ್ಕುಪತ್ರ ನೀಡಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯರಾದ ಬಸವರಾಜಪ್ಪ, ಮಂಜಪ್ಪ ಒತ್ತಾಯಿಸಿದರು.

ವಟ್ಲಹಳ್ಳಿ, ಕಡತಿ, ಕಂಡಿಕೇರಿ ತಾಂಡಾ, ಶಾಂತಿನಗರದ ಮುಖಂಡರಾದ ಎಂ.ರಾಜಕುಮಾರ್‌, ಜಿ.ಚಿಕ್ಕನಗೌಡ, ಎಂ.ವಾಸಪ್ಪ, ಶಿವಮೂರ್ತೆಪ್ಪ, ಎಂ.ಮಹೇಶಪ್ಪ, ಕೆ.ಸಿದ್ದಲಿಂಗಪ್ಪ, ಮಲ್ಲಿಕಾರ್ಜುನ, ಎಂ.ಶೇಖರಪ್ಪ, ಎಂ.ಬೆಟ್ಟಪ್ಪ, ಎಸ್‌.ಮಲ್ಲಿಕಾರ್ಜುನ, ಭೋಜ್ಯಾ ನಾಯ್ಕ, ಟಿ.ನಾರಾಯಣಪ್ಪ ಅವರೂ ಗಣಿಗಾರಿಕೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.