ADVERTISEMENT

ಆಧುನಿಕತೆಯಿಂದ ಬಯಲಾಟ ಕಣ್ಮರೆ

ವಿಚಾರ ಸಂಕಿರಣ, ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ರಾಮಚಂದ್ರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 5:51 IST
Last Updated 15 ಫೆಬ್ರುವರಿ 2017, 5:51 IST
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ನಡೆದ ‘ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮವನ್ನು ನೀಲಗುಂದ ಜಂಗಮ ಪೀಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.
ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ನಡೆದ ‘ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮವನ್ನು ನೀಲಗುಂದ ಜಂಗಮ ಪೀಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಅವರು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು.   
ದಾವಣಗೆರೆ: ‘ದೃಶ್ಯ ಮಾಧ್ಯಮ, ಸಿನಿಮಾ ಹಾಗೂ ಆಧುನಿಕ ಜೀವನ ಶೈಲಿಯಿಂದಾಗಿ ಬಯಲಾಟ ಕಲಾ ಪ್ರದರ್ಶನವು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ’ ಎಂದು ಉಪನ್ಯಾಸಕ ಡಾ.ಎ.ಬಿ.ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
 
ಇಲ್ಲಿನ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಹವ್ಯಾಸಿ ಗ್ರಾಮೀಣ ರಂಗಭೂಮಿ, ಜಾನಪದ ಮತ್ತು ಯಕ್ಷಗಾನ ಬಯಲಾಟ ಕಲಾವಿದರ ಸಂಘ ಹಮ್ಮಿಕೊಂಡಿದ್ದ ‘ವಿಚಾರ ಸಂಕಿರಣ ಮತ್ತು ಬಯಲಾಟ ಪ್ರದರ್ಶನ ಕಾರ್ಯಕ್ರಮದಲ್ಲಿ ‘ಬಯಲಾಟ ಅಂದು–ಇಂದು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
 
‘ರಾಮಾಯಣ ಮತ್ತು ಮಹಾ ಭಾರತದಂತಹ ಮಹಾಕಾವ್ಯಗಳಲ್ಲಿ ಬರುವ ಪಾತ್ರಗಳನ್ನು ಯಥಾವತ್ತಾಗಿ ಬಯಲಾಟದ ಮೂಲಕ ಕಲಾವಿದರು ಪ್ರದರ್ಶಿಸುತ್ತಿದ್ದರು. ಈ ಪ್ರದರ್ಶನವನ್ನು ಜನರು ಪಂಜು ಹಚ್ಚಿಕೊಂಡು ರಾತ್ರಿ ಇಡೀ ನೋಡುತ್ತಿದ್ದರು. ಆದರೆ, ಇಂದಿನ ಆಧುನಿಕತೆಯ ಭರಾಟೆಯಲ್ಲಿ ಇಂತಹ ಕಲೆಯು ಕಣ್ಮರೆಯಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 
 
‘ದೇವತಾರಾಧನೆಯ ಉದ್ದೇಶ ದಿಂದ ಹುಟ್ಟಿಕೊಂಡ ಬಯಲಾಟ ಪ್ರದರ್ಶನ ಕಲೆಯು ಪ್ರಸ್ತುತ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ತನ್ನ ಉಸಿರಾಟ ಉಳಿಸಿಕೊಂಡಿದ್ದು, ಉಳಿದೆಡೆ ತೊಗಲುಗೊಂಬೆ/ ಬಯಲಾಟವು ಸೊರಗಿದೆ’ ಎಂದು  ಅಭಿಪ್ರಾಯಪಟ್ಟರು.
 
‘ಬಯಲಾಟ ಪ್ರದರ್ಶನವು ನಾಡಿನ ಸಮೃದ್ಧಿಯನ್ನು ಪ್ರತಿಬಿಂಬಿಸುವ ರೂಪಕ ವಾಗಿದೆ. ಯಕ್ಷಗಾನಕ್ಕೆ ಇರುವಂತಹ ಪ್ರಾಧಾನ್ಯ ಬಯಲಾಟದ ಕಲೆಗಿಲ್ಲ. ಆಧುನಿಕತೆಯಿಂದ ಬಯಲಾಟದಂತಹ ಜಾನಪದ ಕಲೆಗಳು ಕಾಣೆಯಾಗಿವೆ. ಇದರ ನಡುವೆಯೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಾನಪದ ಕಲಾ ಪ್ರದರ್ಶನದಲ್ಲಿ ಪೌರಾಣಿಕ ಕಥಾ ಪ್ರಸಂಗದ ಬಯಲಾಟವೂ ಸೇರಿತ್ತು’ ಎಂದು ಹೇಳಿದರು. 
 
‘ಜನಪದ ಕಲೆಯು ನಾಡಿನ ಸಂಸ್ಕೃತಿಯ ಮೂಲ ಬೇರು. ದೃಶ್ಯ ಮಾಧ್ಯಮ ಹಾಗೂ ಸಿನಿಮಾದ ವೇಗದಿಂದಾಗಿ ಜನಪದ ಕಲೆ ಹಾಗೂ ರಂಗಭೂಮಿಗೆ ದೊಡ್ಡ ಹೊಡೆತವೇ ಬಿದ್ದಿದೆ’ ಎಂದು ಅವರು ಅಭಿಪ್ರಾಯಪಟ್ಟರು.
 
ಸಹಕಾರ, ಪೋಷಣೆ ಇರಲಿ: ‘ಬಯಲಾಟದಂತಹ ಜಾನಪದ ಕಲೆಗಳನ್ನು ಉಳಿಸಿಕೊಳ್ಳಲು ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ. ಶಿಕ್ಷಿತರೂ ಬಯಲಾಟದ ಕಲಾ ಪ್ರದರ್ಶನ ದಲ್ಲಿ ಭಾಗಿಯಾಗುವ ಅಗತ್ಯವಿದೆ. ಪೌರಾಣಿಕ ಪರಿಕರಗಳಿಗೆ ಆಧುನಿಕತೆಯ ಸ್ಪರ್ಶ ಮೂಡಿಸುವಂತಾಗಬೇಕು. ಬಯಲಾಟದ ಕಲಾವಿದರಿಗೆ ಸಹಕಾರ/ ಪ್ರೋತ್ಸಾಹ ನೀಡಬೇಕು. ಇವುಗಳು ಪಾಲನೆಯಾದಲ್ಲಿ ನಶಿಸುತ್ತಿರುವ ಜಾನಪದ ಕಲೆಗಳನ್ನು ಅಲ್ಪಮಟ್ಟಿಗಾ ದರೂ ಉಳಿಸಿಕೊಳ್ಳಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
 
ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ವಿನೋದ ಆಜಗಣ್ಣನವರ್‌ ಮಾತನಾಡಿ, ‘ಜಾನಪದ ಕಲಾವಿದರು ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿದ್ದು, ಅವರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯವಾಗಬೇಕಿದೆ’ ಎಂದರು. ಇದೇ ಸಮಯದಲ್ಲಿ ‘ಕರಿಬಂಟನ ಕಾಳಗ’ ಬಯಲಾಟವನ್ನು ಪ್ರದರ್ಶಿಸಲಾಯಿತು. 
 
ನೀಲಗುಂದ ಜಂಗಮಪೀಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಎಸ್‌.ಟಿ.ಶಾಂತಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲ್ಲೂಕಿನ ಕಸಾಪ ಕೋಶಾಧ್ಯಕ್ಷ ಕೆ.ಎನ್‌.ಹನುಮಂತಪ್ಪ ಮಾತನಾಡಿದರು. ಪಿ.ಜಿ.ಪರಮೇಶ್ವರಪ್ಪ, ಎನ್‌.ಎಸ್‌. ರಾಜು, ಬಿ.ದಿಳ್ಳೆಪ್ಪ ಉಪಸ್ಥಿತರಿದ್ದರು. ಬೆಂಗಳೂರಿನ ಯಕ್ಷಗಾನ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.