ADVERTISEMENT

‘ಉದ್ಯೋಗ ಖಾತ್ರಿ’ ಅನುಷ್ಠಾನ ತೃಪ್ತಿ ನೀಡಿಲ್ಲ

ಜಿಲ್ಲಾ ಪಂಚಾಯ್ತಿ ಸಿಇಒ ಮೇಲೆ ಸಚಿವ ಎಚ್‌.ಕೆ.ಪಾಟೀಲ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 3:34 IST
Last Updated 18 ಏಪ್ರಿಲ್ 2017, 3:34 IST
ದಾವಣಗೆರೆ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದರು.
 
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ರೈತರು ಹಾಗೂ ಗ್ರಾಮೀಣ ಭಾಗದ ಜನರು ಸಂಕಷ್ಟದಲ್ಲಿದ್ದಾರೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರದ ಯೋಜನೆಗಳು, ಬರ ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು. ಆದರೆ, ಜಿಲ್ಲೆಯಲ್ಲಿ ‘ಖಾತ್ರಿ’ ಯೋಜನೆ ನಿಗದಿತ ಗುರಿ ತಲುಪದಿರುವುದಕ್ಕೆ ಬೇಸರವಿದೆ ಎಂದರು.
 
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌.ಅಶ್ವತಿ, ‘ಜಿಲ್ಲೆಯಲ್ಲಿ ಖಾತ್ರಿ ಯೋಜನೆಯಡಿ ಶೇ 93.56ರಷ್ಟು ಗುರಿ ಸಾಧಿಸಲಾಗಿದೆ. ಹರಪನಹಳ್ಳಿ ಹಾಗೂ ಜಗಳೂರು ತಾಲ್ಲೂಕುಗಳಲ್ಲಿ ಗುರಿ ಮೀರಿ ಸಾಧನೆ ಯಾಗಿದೆ.

ಆದರೆ, ಉಳಿದ ತಾಲ್ಲೂಕು ಗಳಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಜತೆಗೆ ಮಾರ್ಚ್‌ 20ರಿಂದ ಏ.10ರವರೆಗೂ ಕೂಲಿ ಪಾವತಿಗೆ ಸರ್ಕಾರದಿಂದ ಹಣ ಬಿಡುಗಡೆ ಯಾಗಿರಲಿಲ್ಲ’ ಎಂದರು.
 
‘ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗದ ಪರಿಣಾಮ ಮಾರ್ಚ್‌ 20ರಿಂದ ಏ.10ರವರೆಗೆ ಸಮಸ್ಯೆಯಾಗಿತ್ತು. ಸದ್ಯ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಹಣದ ಕೊರತೆ ಇಲ್ಲ ಎಂದರು.
 
‘ನರೇಗಾ’ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು. 21 ಅಂಶಗಳ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿ ಯಾಗಬೇಕು. ಆಟದ ಮೈದಾನ, ಕುರಿಗಳ ದೊಡ್ಡಿ, ಕಣಗಳ ನಿರ್ಮಾಣ ಹೀಗೆ ಯೋಜನೆಯಲ್ಲಿ ಸಾಧ್ಯವಿರುವ ಕಾಮಗಾರಿ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸೂಚಿಸಿದರು.
 
‘ರಾಜ್ಯದಲ್ಲಿ 9,000ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 1.5 ಕೋಟಿ ಜನರಿಗೆ ನೀರು ಲಭ್ಯ ವಾಗುತ್ತಿದೆ. ಜಿಲ್ಲೆಯಲ್ಲಿರುವ ಘಟಕಗಳು ಕೆಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ನೀರು ಬೀಳುವ ಖಾತರಿ ಇದ್ದರೆ ಮಾತ್ರ ಕೊಳವೆಬಾವಿ ಕೊರೆಸಿ, ಇಲ್ಲವಾದರೆ, ಲಭ್ಯವಿರುವ ನೀರಿನ ಮೂಲಗಳನ್ನು ಬಳಸಿಕೊಳ್ಳಿ’ ಎಂದು ಸಚಿವರು ಸಲಹೆ ನೀಡಿದರು.
 
ಅನುದಾನ ದುರುಪಯೋಗ ಪಡಿಸಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈಗಾಗಲೇ ತಪ್ಪೆಸಗಿದ ಜನಪ್ರತಿನಿಧಿಗಳು, ಪಿಡಿಒಗಳು ಅಧಿಕಾರ ಕಳೆದುಕೊಂಡು ಪ್ರಕರಣ ಎದುರಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.
 
ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್‌ ಮಾತನಾಡಿ, ‘ನರೇಗಾ’ ಅಡಿ ಶಾಂತಿಸಾಗರ (ಸೂಳೆಕೆರೆ) ನಾಲೆಗಳ ಹೂಳೆತ್ತಲು ಅವಕಾಶ ನೀಡಬೇಕು. ಅಂಗವಿಕಲರಿಗೆ ಕಡ್ಡಾಯವಾಗಿ ‘ಖಾತ್ರಿ’ ಯೋಜನೆಯಡಿ ಕೆಲಸ ನೀಡಬೇಕು.
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ರಮೇಶ್, ಉಪಾಧ್ಯಕ್ಷ ಡಿ.ಸಿದ್ದಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆ ಆಯುಕ್ತ ಪ್ರಕಾಶ್ ಕುಮಾರ್, ನರೇಗಾ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
****
‘ಟ್ಯಾಂಕರ್‌  ನೀರು ಪೂರೈಕೆ’
ಜಿಲ್ಲೆಯಲ್ಲಿ 22 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗಳು ಪೂರ್ಣಗೊಂಡಿದ್ದು 22 ಪ್ರಗತಿಯಲ್ಲಿವೆ. ಯೋಜನೆಯಡಿ 260ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ನೀಡಲಾಗುತ್ತಿದೆ. ಜಗಳೂರು ಹರಪನಹಳ್ಳಿ ಹಾಗೂ ದಾವಣಗೆರೆಯ ಕೆಲವೆಡೆ ಸಮಸ್ಯೆ ಹೆಚ್ಚಾಗಿದ್ದು, 30 ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ.

ಸಮಸ್ಯೆ ಉಲ್ಬಣ ಗೊಳ್ಳದಂತೆ ಟಾಸ್ಕ್‌ಫೋರ್ಸ್‌ ರಚಿಸಲಾಗಿದ್ದು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಾನುವಾರಿಗೆ 15 ವಾರಕ್ಕೆ ಆಗುವಷ್ಟು ಮೇವು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಸಚಿವರಿಗೆ ಮಾಹಿತಿ ನೀಡಿದರು.
***
ಜಿ.ಪಂ ಸದಸ್ಯರ ಪ್ರಶ್ನೆಗೆ ಸಚಿವರ ಉತ್ತರ
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಕಟ್ಟಡಗಳು ಶಿಥಿಲಗೊಂಡಿವೆ. ‘ನರೇಗಾ’ ಅಡಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ  ಅನುಮತಿ ನೀಡಿ.
ಪಿ.ವಾಗೀಶ್‌, ಜಿ.ಪಂ ಸದಸ್ಯ

ಹಿಂದೆ, ‘ನರೇಗಾ’ ಅಡಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿತ್ತು. ಸರ್ವ ಶಿಕ್ಷಣ ಅಭಿಯಾನ ಬಳಿಕ ನಿಷೇಧಿಸಲಾಗಿದೆ. ಅವಕಾಶ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಎಚ್‌.ಕೆ.ಪಾಟೀಲ್‌ ಸಚಿವ
 
‘ಖಾತ್ರಿ’ ಅಡಿ ಬೋರ್‌ವೆಲ್‌ಗಳಿಗೆ ಪೈಪ್‌ಲೈನ್ ಅಳವಡಿಸಲು ಅವಕಾಶ ನೀಡಿ. ಜಿಲ್ಲಾ ಪಂಚಾಯ್ತಿ ಸದಸ್ಯರ ವಿವೇಚನಾ ನಿಧಿ ಸಾಲುತ್ತಿಲ್ಲ. ಅನುದಾನ ಹೆಚ್ಚಿಸಿ.
–ಶೈಲಜಾ ಬಸವರಾಜ್‌, ಜಿ.ಪಂ ಸದಸ್ಯೆ

ಜಿಲ್ಲಾಧಿಕಾರಿ ಖಾತೆಯಲ್ಲಿ ₹ 4 ಕೋಟಿ, ಎನ್‌ಆರ್‌ಡಿಡಬ್ಲ್ಯುಪಿ ಯೋಜನೆಯಲ್ಲಿ ₹ 20 ಕೋಟಿ ಲಭ್ಯವಿದೆ. ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಅಧ್ಯಕ್ಷರ ವಿವೇಚನಾ ನಿಧಿಯನ್ನೂ ಬಳಸಬಹದು. ಅಧಿಕಾರ ಇಲ್ಲ, ಅನುದಾನ ಇಲ್ಲ ಎಂದು ಸಬೂಬು ಹೇಳಬೇಡಿ. ಸದಸ್ಯರೆಲ್ಲ ಸೇರಿ ಕ್ರಿಯಾಯೋಜನೆ ರೂಪಿಸಿ.
–ಎಚ್‌.ಕೆ.ಪಾಟೀಲ್‌ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.