ADVERTISEMENT

ಎಸ್‌ಡಿಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಿರಿ

ವಿಶೇಷ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿ.ಪಂ. ಸಿಇಒ ಅಶ್ವತಿ ತಾಕೀತು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:00 IST
Last Updated 24 ಮಾರ್ಚ್ 2017, 6:00 IST

ದಾವಣಗೆರೆ: ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ)ಗೆ ಬಿಡುಗಡೆಯಾದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌.ಅಶ್ವತೀ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ಗುರುವಾರ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌ಡಿಪಿ)ಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಎಸ್‌ಡಿಪಿ ಅನುದಾನವನ್ನು ಅತ್ಯಂತ ಹಿಂದುಳಿದ ಹಾಗೂ ಅತಿ ಹಿಂದುಳಿದ ತಾಲ್ಲೂಕುಗಳಾದ ಚನ್ನಗಿರಿ, ಹರಪನಹಳ್ಳಿ, ಹೊನ್ನಾಳಿ ಹಾಗೂ ಜಗಳೂರುಗಳಿಗಷ್ಟೇ ಬಳಕೆ ಮಾಡಬೇಕು. ಅಲ್ಲದೇ, ನಿರ್ದಿಷ್ಟ ಕಾಮಗಾರಿಗಷ್ಟೇ ವೆಚ್ಚ ಮಾಡಬೇಕು ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯಿಂದ ನರೇಗಾ ಅಡಿ ಕೊರೆಸಲಾಗಿರುವ ಬೋರ್‌ವೆಲ್‌ಗಳಿಗೆ ಕೂಲಿ ಪಾವತಿ ಮಾತ್ರ ಆಗಿದೆ ಎಂದು ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ಸಭೆಗೆ ತಿಳಿಸಿದರು.

ಕೆರೆ ಸಂಜೀವಿನಿ ಯೋಜನೆಯಡಿ ಬರುವ 8 ಕೆರೆಗಳಲ್ಲಿ 5 ಪ್ರಗತಿಯಲ್ಲಿದ್ದು, ಮೂರನ್ನು ಆರಂಭಿಸಬೇಕಿದೆ ಎಂದು ನಬಾರ್ಡ್ ಅಧಿಕಾರಿಗಳು ತಿಳಿಸಿದರು. ಸಿಇಒ ಶೀಘ್ರವಾಗಿ ಕೆಲಸ ಪೂರ್ಣ ಗೊಳಿಸಬೇಕೆಂದು ಸೂಚಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಗ್ರಾಮೀಣ ನೀರು ಸರಬರಾಜು ಯೋಜನೆಗೆ ನಾಲ್ಕು ತಾಲ್ಲೂಕುಗಳಿಗೆ ಸೇರಿ ಬಿಡುಗಡೆಯಾದ ₹8.28  ಕೋಟಿಯಲ್ಲಿ ₹2.17 ಕೋಟಿ ಬಳಕೆಯಾಗಿದೆ.

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬಿಡುಗಡೆಯಾದ ₹ 23.6 ಕೋಟಿಯಲ್ಲಿ ಶೇ 100ರಷ್ಟು ಬಳಕೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿ (ನಬಾರ್ಡ್)ಗೆ ಬಿಡುಗಡೆಯಾದ ₹ 3.76 ಕೋಟಿಯಲ್ಲಿ ₹ 3.75 ಕೋಟಿ ಖರ್ಚಾಗಿದೆ ಎಂದರು.

ಕೆಎಸ್‌ಆರ್‌ಟಿಸಿ, ಆರೋಗ್ಯ ಇಲಾಖೆಯ ಕೆಎಚ್‌ಎಸ್‌ಆರ್‌ಡಿಪಿ ಅಡಿ ಕಟ್ಟಡ, ಪ್ರವಾಸೋದ್ಯಮ, ಬೆಸ್ಕಾಂ, ಜಲ ಸಂಪನ್ಮೂಲ, ಶಿಕ್ಷಣ ಇಲಾಖೆ ಕೆಲವು ಕಾರ್ಯಕ್ರಮಗಳು ಸೇರಿದಂತೆ ಹಲವು ಇಲಾಖೆಗಳ ಕಾಮಗಾರಿ ಪ್ರಗತಿ ಹಂತದಲ್ಲಿವೆ. ಕೆಲವು ಈಗಷ್ಟೇ ಟೆಂಡರ್ ಆಗಿವೆ ಎಂದು ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅಧಿಕಾರಿಗಳಿಗೆ ಸಿಇಒ ತರಾಟೆ
ಸಭೆಯಲ್ಲಿ ಪ್ರವಾಸೋದ್ಯಮ, ಕೃಷಿ, ಬೆಸ್ಕಾಂ, ಪಶುಪಾಲನಾ ಇಲಾಖಾ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಸಿಇಒ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಸಭೆಗೆ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಬರಬೇಕು. ನೀವು ಹೇಳುವುದು ಒಂದು, ಪುಸ್ತಕದಲ್ಲಿ ಇರುವ ಮಾಹಿತಿ ಇನ್ನೊಂದು. ಯಾವುದು ಸರಿ? ಅನುದಾನ ಶೇ 100ರಷ್ಟು ಖರ್ಚಾಗಿದೆ ಎಂದು ಹೇಳುತ್ತೀರಿ; ಆದರೆ, ಪುಸ್ತಕದಲ್ಲಿ ಸೊನ್ನೆ ಸಾಧನೆ ಇದೆ’ ಎಂದು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸದಿರುವುದಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಸದಾಶಿವ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಒಣಭೂಮಿ ಪ್ರದೇಶದಲ್ಲಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ’ ಎಂದು ಸದಾಶಿವ ಅವರು ಸಮಜಾಯಿಷಿ ನೀಡಿದರು.

ಉತ್ತರದಿಂದ ತೃಪ್ತರಾದ ಸಿಇಒ, ‘ಕೃಷಿ ಹೊಂಡ ನಿರ್ಮಾಣದಲ್ಲಿ ಇಡೀ ರಾಜ್ಯದಲ್ಲಿ ಜಿಲ್ಲೆ ಅತ್ಯಂತ ಕಳಪೆ ಸಾಧನೆ ಮಾಡಿದೆ. ನೀವು ಮುತುರ್ವಜಿ ವಹಿಸಿದ್ದರೆ ಉತ್ತಮ ಪ್ರಗತಿ ಸಾಧಿಸಬಹುದಾಗಿತ್ತು. ಸದಾ ರೈತರ ಸಂಪರ್ಕದಲ್ಲಿರುವ ನೀವು ರೈತರನ್ನು ಕೃಷಿ ಹೊಂಡ ನಿರ್ಮಾಣದತ್ತ ಪ್ರೇರೇಪಿಸುವಲ್ಲಿ ವಿಫಲವಾಗಿದ್ದೀರಿ’ ಎಂದು ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT