ADVERTISEMENT

ಐತಿಹಾಸಿಕ ಪುಷ್ಕರಣಿಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:07 IST
Last Updated 24 ಮೇ 2017, 5:07 IST

ದಾವಣಗೆರೆ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ 5ನೇ ವಾರ್ಡ್‌ ವ್ಯಾಪ್ತಿಯ ಬೇತೂರು ರಸ್ತೆ ಪೆಟ್ರೋಲ್‌ ಬಂಕ್‌ ಬಳಿಯಿರುವ ಪುರಾತನ ಪುಷ್ಕರಣಿಯ ಹೂಳೆತ್ತುವ ಕಾರ್ಯ ಮಾಡಿದರು.

ಈ ಸಂಬಂಧ ‘ಪ್ರಜಾವಾಣಿ’ ಜತೆ ಮಾತನಾಡಿದ ಮುಖಂಡ ರಾಜನಹಳ್ಳಿ ಶಿವಕುಮಾರ್, ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛಭಾರತ ಆಶಯದಂತೆ ಕಳೆದ ಎರಡು ವಾರಗಳಿಂದ ಪುಷ್ಕರಣಿಗೆ ಕಾಯಕಲ್ಪ ನೀಡುವ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಬಾವಿ ಸಂಪೂರ್ಣ ಸ್ವಚ್ಛವಾಗಲಿದೆ’ ಎಂದು ಹೇಳಿದರು.

‘ರಾಜ್ಯದೆಲ್ಲೆಡೆ ಬರ ಆವರಿಸಿದ್ದು, ಕೆರೆ–ಕಟ್ಟೆ, ಬಾವಿಗಳಲ್ಲಿ ಹೂಳು ತುಂಬಿಕೊಂಡಿದೆ. ಮಳೆಗಾಲ ಆರಂಭಕ್ಕೂ ಮುನ್ನ ಹೂಳು ತೆಗೆದರೆ ಮುಂದೆ ಜನರಿಗೆ ಅನುಕೂಲವಾಗಿದೆ. ಜತೆಗೆ ಅಂತರ್ಜಲ ಮಟ್ಟ ಹೆಚ್ಚಿ ಸುತ್ತಮತ್ತಲಿನ ಕೊಳವೆಬಾವಿಗಳು ಮರುಪೂರಣಗೊಳ್ಳಲಿವೆ’ ಎಂದರು.

ADVERTISEMENT

‘ಪುರಾತನ ಕೆರೆ, ಬಾವಿ, ಪುಷ್ಕರಣಿಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದ್ದು, ಬಿಜೆಪಿಯಿಂದ ಇಂತಹ ಕಾರ್ಯಗಳು ನಿರಂತರವಾಗಿ ನಡೆಯಲಿವೆ’ ಎಂದು ಮುಖಂಡ ಶಿವನಗೌಡ ತಿಳಿಸಿದರು.

ಮುಖಂಡರಾದ ಶ್ರೀನಿವಾಸ್, ತಿಪ್ಪೇಶ್. ಶ್ರೀಕಾಂತ ನೀಲಗುಂದ. ದೊಡ್ಡ ದುಗ್ಗೇಶ್‌, ರಾಜು ನೀಲಗುಂದ. ಟಿಂಕರ್‌ ಮಂಜಣ್ಣ. ವಿನಯ್, ಜಗದೀಶ್‌ ಹಾಗೂ ಕಾರ್ಯಕರ್ತರು ಶ್ರಮದಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.