ADVERTISEMENT

ಕಡಿಮೆ ದರದ ಖರೀದಿಗೆ ಇಲ್ಲಿವೆ ಹತ್ತಾರು ಆಯ್ಕೆ!

ಸದಾಶಿವ ಎಂ.ಎಸ್‌.
Published 22 ಮೇ 2017, 5:03 IST
Last Updated 22 ಮೇ 2017, 5:03 IST

ದಾವಣಗೆರೆ: ಆ ರಸ್ತೆಯ ಒಂದು ಬದಿಯಲ್ಲಿದೆ ವಿಶಾಲವಾದ ಹೈಸ್ಕೂಲ್ ಮೈದಾನ. ಅದರ ಬೇಲಿಯ ತುಂಬ ಒಪ್ಪವಾಗಿ ಜೋಡಿಸಿಟ್ಟ ಬಟ್ಟೆಗಳ ಸಾಲು. ಗ್ರಾಹಕರಿಂದ ಗಿಜಿಗಿಡುವ ಫುಟ್‌ಪಾತ್ ಮಳಿಗೆಗಳು.

ಇದು ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ವರ್ಷಪೂರ್ತಿ ಕಂಡುಬರುವ ದೃಶ್ಯಗಳು. ಬಡವರು ಮತ್ತು ಮಧ್ಯಮ ವರ್ಗದ ಗ್ರಾಹಕರ, ವಿಶೇಷವಾಗಿ ಯುವತಿಯರನ್ನೇ ಗಮನದಲ್ಲಿಟ್ಟು ವಿನ್ಯಾಸ ಮಾಡಿದ ಉಡುಪುಗಳು ಇಲ್ಲಿನ ವಿಶೇಷ. ಈ ರಸ್ತೆಯ ಸುತ್ತಮುತ್ತ ಇರುವ ಕಾಲೇಜು ವಿದ್ಯಾರ್ಥಿನಿಯರು, ನಗರದ ಸುತ್ತಮುತ್ತಲ ಹಳ್ಳಿಗಳ ಯುವತಿಯರು ಈ ಅಂಗಡಿಗಳಿಗೆ ಪ್ರಮುಖ ಗ್ರಾಹಕರು.

‘ನಗರದ ಬಟ್ಟೆ ಅಂಗಡಿಗಳಲ್ಲಿ ಸಿಗುವ ರೀತಿಯ ವಿನ್ಯಾಸದ ಬಟ್ಟೆಗಳು ಇಲ್ಲೂ ಸಿಗುತ್ತವೆ. ಉತ್ತಮ ಗುಣಮಟ್ಟ ಹಾಗೂ ದರ ಕಡಿಮೆಯಿದೆ’ ಎನ್ನುತ್ತಾರೆ ನಿಟುವಳ್ಳಿಯ ಸಾರಿಕಾ.
‘ಈ ಮಳಿಗೆಗಳ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ನಮಗೆ ಬೇಕಾದ ವಿನ್ಯಾಸದ ಬಟ್ಟೆಗಳು ಕಾಣಿಸುತ್ತವೆ. ಆ ಬಟ್ಟೆ ತೋರಿಸಿ, ಈ ಬಟ್ಟೆ ತೋರಿಸಿ ಎಂದು ಕೇಳುವ ಅಗತ್ಯವೇ ಇರುವುದಿಲ್ಲ. ಇಷ್ಟವಾದರೆ ಖರೀದಿ, ಇಲ್ಲದಿದ್ದರೆ ಮುಂದಿನ ಅಂಗಡಿಯತ್ತ ಹೆಜ್ಜೆ. ಇದು ತುರ್ತಾಗಿ ಖರೀದಿಸಲು ಬಹಳ ಅನುಕೂಲ’ ಎನ್ನುತ್ತಾರೆ ವಿನಾಯಕನಗರದ ಮಂಜುಳಾ.

ADVERTISEMENT

ವ್ಯಾಪಾರಿಗಳು ತಮ್ಮ ವೃತ್ತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾರೆ. ‘ನಾವು ನಿತ್ಯ ಬೆಳಿಗ್ಗೆ 8ರ ಸುಮಾರಿಗೆ ವ್ಯಾಪಾರ ಶುರು ಮಾಡ್ತೇವೆ. ರಾತ್ರಿ 9ರ ತನಕವೂ ಮುಂದುವರೀತದೆ. ಗ್ರಾಹಕರಿಗೆ ಬೇಕಾದ ಉಡುಪು ಇಲ್ಲೇ ಸಿಗ್ತದೆ’ ಎನ್ನುತ್ತಾ ಚೂಡಿದಾರ್ ಟಾಪ್ ಒಂದನ್ನು ಗೊಂಬೆಗೆ ತೊಡಿಸಿದವರು ರಾಜೇಶ್. ಅವರ ತಂದೆ ದಶಕಗಳ ಹಿಂದೆ ಗುಜರಾತ್‌ನ ಸುರೇಂದ್ರನಗರದಿಂದ ಬಂದು ಇಲ್ಲಿ ವ್ಯಾಪಾರ ಆರಂಭಿಸಿದರಂತೆ.

‘ನಾನು ಕನ್ನಡದವನೇ ಸಾರ್. ನಾನು ಹುಟ್ಟಿ, ಬೆಳೆದಿದ್ದೆಲ್ಲಾ ದಾವಣಗೆರೆಯಲ್ಲೇ. ತಂದೆಯವರು ಮಾಡ್ತಿದ್ದ ಈ ವೃತ್ತಿಯನ್ನು ನಾನು 10 ವರ್ಷಗಳಿಂದ ಮುಂದುವರಿಸಿದ್ದೇನೆ’ ಎನ್ನುತ್ತ ಮುಗುಳ್ನಕ್ಕರು. ಇತರ ವ್ಯಾಪಾರಿಗಳೂ ಇದೇ ರೀತಿ ಬೇರೆಬೇರೆ ಊರುಗಳಿಂದ ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದು ಇಲ್ಲಿನವರೇ ಆಗಿಹೋಗಿದ್ದಾರೆ.

‘ನಮಗೆ ಬೆಂಗಳೂರು ಮತ್ತು ತಮಿಳುನಾಡಿನ ತಿರುಪ್ಪೂರಿನ ಬಟ್ಟೆ ತಯಾರಕರು ಪೂರೈಕೆ ಮಾಡ್ತಾರೆ. ಕಾಯಂ ಗ್ರಾಹಕರು ಕೇಳಿದ ರೀತಿಯ ಬಟ್ಟೆ ಇಲ್ಲದಿದ್ದರೆ ತರಿಸಿಕೊಡ್ತೇವೆ. ಚೂಡಿದಾರ್, ಅವುಗಳ ಟಾಪ್, ಲೆಗಿನ್ಸ್‌್, ಜಾಕೆಟ್, ವೇಲ್‌, ಅಂಗಿ ಹೀಗೆ ಹಲವು ರೀತಿಯ ಉಡುಪನ್ನು ₹ 150 ರಿಂದ ₹ 350ರ ದರದಲ್ಲಿ ಮಾರಾಟ ಮಾಡುತ್ತೇವೆ’ ಎಂದು ಹೆಸರು ಹೇಳಲು ಬಯಸದ ವರ್ತಕಿಯೊಬ್ಬರು ಹೇಳಿದರು.

‘ಮಳೆಗಾಲ ಶುರುವಾದರೆ ನಮಗೆ ಆದಾಯ ಕಡಿಮೆ ಆಗುತ್ತದೆ. ನಮ್ಮ ಅಂಗಡಿಗಳ ಎದುರು ಟಾರ್ಪಾಲ್ ಹಾಕಿದರೂ ಅವು ಗಾಳಿಗೆ ನಿಲ್ಲುವುದಿಲ್ಲ. ಉಳಿದಂತೆ ವರ್ಷವಿಡೀ ತಕ್ಕಮಟ್ಟಿಗೆ ಆದಾಯ ಸಿಗುತ್ತದೆ’ ಎನ್ನುತ್ತಾ ಅವರು ಗ್ರಾಹಕರತ್ತ ಗಮನಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.