ADVERTISEMENT

ಕರ್ನಾಟಕದಲ್ಲಿ ಜೆಡಿಯುನ ಎರಡನೇ ಇನ್ನಿಂಗ್ಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 10:02 IST
Last Updated 13 ಡಿಸೆಂಬರ್ 2017, 10:02 IST
ಚನ್ನಗಿರಿಯ ಚೆನ್ನಮ್ಮಾಜಿ ಸಮುದಾಯ ಭವನದಲ್ಲಿ ಜೆಡಿಯು ತಾಲ್ಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಬಿಹಾರ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಮಹೇಶ್ವರ ಹಜಾರಿ ಉದ್ಘಾಟಿಸಿದರು.
ಚನ್ನಗಿರಿಯ ಚೆನ್ನಮ್ಮಾಜಿ ಸಮುದಾಯ ಭವನದಲ್ಲಿ ಜೆಡಿಯು ತಾಲ್ಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಬಿಹಾರ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಮಹೇಶ್ವರ ಹಜಾರಿ ಉದ್ಘಾಟಿಸಿದರು.   

ಚನ್ನಗಿರಿ: ಜೆ.ಎಚ್.ಪಟೇಲ್‌ ಆಡಳಿತದ ನಂತರ ಕರ್ನಾಟಕದಲ್ಲಿ ಮತ್ತೊಮ್ಮೆ ಜೆಡಿಯು ತನ್ನ ಎರಡನೇ ಇನ್ನಿಂಗ್ಸ್‌್ ಆರಂಭಿಸಲಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ನಿತೀಶ್‌ ಕುಮಾರ್‌ ಆಗಮಿಸಲಿದ್ದಾರೆ ಎಂದು ಬಿಹಾರದ ಲೋಕೋಪಯೋಗಿ ಇಲಾಖೆ ಸಚಿವ ಮಹೇಶ್ವರ ಹಜಾರಿ ತಿಳಿಸಿದರು.

ಪಟ್ಟಣದ ಚೆನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ಜೆಡಿಯು ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಂಯುಕ್ತ ಜನತಾದಳವನ್ನು ಸ್ಥಾಪಿಸಿದ ದಿಟ್ಟ ವ್ಯಕ್ತಿತ್ವದ ರಾಜಕಾರಣಿ ಜೆ.ಎಚ್. ಪಟೇಲ್‌ ಆಗಿದ್ದು, ಮುಂದಿನ ದಿನಗಳಲ್ಲಿ ಅವರ ಪುತ್ರ ಮಹಿಮ ಪಟೇಲ್ ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾರ್ಗದರ್ಶನದಲ್ಲಿ ಜೆಡಿಯು ಅನ್ನು ಪ್ರಬಲ ಪಕ್ಷವಾಗಿಸಲಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಆಸೆಯನ್ನು ನಿತೀಶ್‌ಕುಮಾರ್‌ ಹೊಂದಿದ್ದು ಅವರ ಪ್ರತಿನಿಧಿಯಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ADVERTISEMENT

ಬಿಹಾರ ಹಿಂದುಳಿದ ರಾಜ್ಯವಾಗಿದ್ದು, ನಿತೀಶ್‌ಕುಮಾರ್‌ ಅವರು ಮುಖ್ಯಮಂತ್ರಿಯಾದ ಮೇಲೆ ಇಡೀ ರಾಜ್ಯದ ಚಿತ್ರಣವೇ ಬದಲಾಗಿದೆ. ಬಿಹಾರ ರಾಜ್ಯದಲ್ಲಿ ಮಧ್ಯಪಾನ ನಿಷೇಧಿಸಿ ಅಭಿವೃದ್ಧಿಯ ಕಡೆಗೆ ಮುನ್ನಡೆಯುವಂತೆ ಮಾಡಿದ್ದಾರೆ. ಸಂಪನ್ಮೂಲಗಳಿಲ್ಲದ ರಾಜ್ಯದಲ್ಲಿ ಅಭಿವೃದ್ಧಿಯ ಹೊಣೆಗಾರಿಕೆಯನ್ನು ಹೊತ್ತ ನಿತೀಶ್‌ ಬಿಹಾರ ರಾಜ್ಯವನ್ನು ದೇಶಾದ್ಯಂತ ಜನರು ಗುರುತಿಸುವಂತಹ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಜೆ.ಎಚ್. ಪಟೇಲ್ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಗಳಿಸಿದ್ದವರು. ಈ ರಾಜ್ಯದಿಂದ 1962ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ನನ್ನ ತಂದೆ ಕೂಡಾ ಸಮಾಜವಾದಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು, ಪಟೇಲ್ ಅವರ ಒಡನಾಡಿಯಾಗಿದ್ದರು. ಈಗ ನಾನು ಅವರ ಸ್ಮರಣೋತ್ಸವದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ ಎಂದರು.

ರಾಷ್ಟ್ರೀಯ ಯುವ ಸಂಯುಕ್ತ ಜನತಾದಳದ ಅಧ್ಯಕ್ಷ ಸಂಜಯಕುಮಾರ್ ಮಾತನಾಡಿ, ‘ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಕುಖ್ಯಾತಿಗೆ ಒಳಗಾಗಿದೆ. ರಾಜ್ಯದ ನಿರುದ್ಯೋಗವನ್ನು ತೊಡೆದು ಹಾಕುವಲ್ಲಿ ಈ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ರಾಜ್ಯದಲ್ಲಿ 95 ಲಕ್ಷ ಯುವ ನಿರುದ್ಯೋಗಿಗಳಿದ್ದು, ಜೆಡಿಯು ಅಧಿಕಾರಕ್ಕೆ ಬಂದರೆ ಉದ್ಯೋಗ ಅವಕಾಶ ಸೃಷ್ಟಿಸಲಾಗುವುದು’ ಎಂದು ಹೇಳಿದರು.

ಜೆ.ಎಚ್.ಪಟೇಲ್ ಕನಸುಗಳನ್ನು ನನಸು ಮಾಡುವ ಸಲುವಾಗಿ ಅವರ ಪುತ್ರ ಮಹಿಮ ಪಟೇಲ್ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ರಾಜ್ಯವನ್ನು ಪ್ರಗತಿಯ ಕಡೆಗೆ ಕೊಂಡೊಯ್ಯುವ ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪಕ್ಕೆ ಈ ಕ್ಷೇತ್ರದ ಜನರು ಅವರನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಗೆ ಈಗಾಗಲೇ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಚುನಾವಣೆಯೊಳಗೆ 100 ಕ್ಷೇತ್ರಗಳಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮೈತ್ರಿಗೆ ಒಂದಿಷ್ಟು ಸ್ಥಳೀಯ ಪಕ್ಷಗಳು ಮುಂದೆ ಬಂದಿದ್ದು ಚುನಾವಣೆ ಸಮಯದಲ್ಲಿ ನಿರ್ಧಾರ ಮಾಡಲಾಗುವುದು ಎಂದರು.

ತಂತ್ರಗಾರಿಕೆಯನ್ನು ಸಿದ್ಧಾಂತವಾಗಿಸಿಕೊಳ್ಳುವ ಬದಲು ಸಿದ್ಧಾಂತವನ್ನೇ ತಂತ್ರಗಾರಿಕೆಯಾಗಿಸಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುವ ಮೂಲಕ ಪಕ್ಷವನ್ನು ಸಂಘಟಿಸುವ ಕಡೆಗೆ ಆದ್ಯತೆ ಕೊಡಲಾಗುವುದು. ಪರಿಸರ ನಾಶದಿಂದ ಬರ ಉಂಟಾಗುತ್ತಿದೆ. ಕರ್ನಾಟಕದದಲ್ಲಿ ಶೇ 21ರಷ್ಟು ಇರುವ ಕಾಡನ್ನು ಶೇ33ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಸಾವಯವ ಕೃಷಿಗೆ ಸೇರಿದಂತೆ ಜನಗಳ ಮೂಲಭೂತ ಅವಶ್ಯಕತೆಗಳ ಅಭಿವೃದ್ಧಿಗೆ ಮೂಲಭೂತ ಹೆಚ್ಚು ಒತ್ತು ಕೊಡಲಾಗುವುದು ಎಂದು ಹೇಳಿದರು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್, ಸಂಯುಕ್ತ ಜನತಾದಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲೋಕಪಾಲ್ ಜೈನ್, ಯುವ ಸಂಯುಕ್ತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಶಿವರಾಮ್, ಶಿವರಾಮ ರೆಡ್ಡಿ, ಚಂದನ್ ಮಿಶ್ರಾ, ತೇಜಸ್ವಿ ಪಟೇಲ್, ತ್ರಿಶೂಲ್ ಪಾಣಿ ಪಟೇಲ್ ಉಪಸ್ಥಿತರಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಂ. ರವಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.