ADVERTISEMENT

ಕೆರೆಕಟ್ಟೆ ತುಂಬಿಸಿ ಅಂತರ್ಜಲ ಕಾಪಾಡಿ

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಮಾವೇಶದಲ್ಲಿ ಸಿರಿಗೆರೆಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 4:55 IST
Last Updated 18 ಫೆಬ್ರುವರಿ 2017, 4:55 IST
ಮಲೇಬೆನ್ನೂರು: ಸರ್ಕಾರದ ಬೆಳೆ ವಿಮೆ ಯೋಜನೆ ಅವೈಜ್ಞಾನಿಕವಾಗಿದ್ದು, ರೈತಸ್ನೇಹಿ ಬೆಳೆವಿಮೆ ಯೋಜನೆ ರೂಪಿಸ ಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  ಸಲಹೆ ನೀಡಿದರು.
 
ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಶುಕ್ರವಾರ ಹರಿಹರ ತಾಲ್ಲೂಕು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ  ಆಯೋಜಿಸಿದ್ದ ‘ಬೆಳೆ ನಷ್ಟ ಪರಿಹಾರ ಸಂವಾದ ಕಾರ್ಯಕ್ರಮ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ರೈತರ ಸಮಾವೇಶ’ ಉದ್ದೇಶಿಸಿ ಮಾತನಾಡಿದರು.
 
‘ಕೆಲವು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಸರ್ಕಾರ ಕೆರೆಕಟ್ಟೆ ತುಂಬಿಸಿ ಅಂತರ್ಜಲ ಕಾಪಾಡಿ, ರೈತರ ನೆರವಿಗೆ ಬರಬೇಕು. ವಿಮಾ ಕಂಪೆನಿಗಳು ರೂಪಿಸಿದ ಏಳು ವರ್ಷ ಸರಾಸರಿ ಅಂದಾಜಿನ ಬೆಳೆನಷ್ಟ ಪರಿಹಾರ ನೀತಿ ಅವೈಜ್ಞಾನಿಕವಾಗಿದೆ. ಗ್ರಾಮಲೆಕ್ಕಿಗರ ವರದಿ ಆಧರಿಸಿ ನೀಡುವ ಬೆಳೆ ನಷ್ಟದ ಅಂದಾಜು ಸರಿಯಾಗಿ ಆಗುತ್ತಿಲ್ಲ. ಇದರಿಂದ ರೈತರಿಗೆ ನಷ್ಟ ಆಗುತ್ತಿದೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
 
ಹೊಸದಾಗಿ ರೂಪಿಸಿರುವ ‘ಭೂಮಿ ಆನ್‌ಲೈನ್ ತಂತ್ರಾಂಶ’ದ ಮೂಲಕ ರೈತರ ಖಾತೆಗೆ ಬೆಳೆ ನಷ್ಟದ ಹಣ ಜಮಾ ಆಗುತ್ತದೆ. ಯಾವುದೇ ಲೋಪದೋಷ ಇದ್ದಲ್ಲಿ ರೈತರ ಮೊಬೈಲ್‌ಗೆ ಸಂದೇಶ ಬರುತ್ತದೆ. ಇದು ಆಧುನಿಕ ತಂತ್ರಜ್ಞಾನದ  ಪ್ರಯೋಜನ ಎಂದರು.
 
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ‘ರೈತರಿಗೆ ಸಹಾಯಧನದ ಬದಲು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ. ಬಡ್ಡಿ ಮನ್ನಾ ಬದಲು ಸಂಪೂರ್ಣ ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು’  ಎಂದು ಆಗ್ರಹಿಸಿದರು.ಸಂಸದ ಜಿಎಂ.ಸಿದ್ದೇಶ್ವರ ಮಾತನಾಡಿ, ರೈತರು ಬೆಳೆ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
 
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎ. ಮಂಜಮ್ಮ ಬಸೆಟೆಪ್ಪ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಹಾಳೂರು ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
 
ಶಾಸಕ ಎಚ್‌.ಎಸ್.ಶಿವಶಂಕರ್ ಮಾತನಾಡಿ, ‘ಕಾಡಾ ಸಮಿತಿ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ನಾಲೆಗೆ ನೀರು ಹರಿಸಿ ರೈತರಿಗೆ ಒಳಿತನ್ನು ಮಾಡಿದರು. ಅವರ ಉಪಕಾರ ಸ್ಮರಿಸಿ ಸನ್ಮಾನ ಮಾಡುವುದು ಒಳ್ಳೆಯ ಸಂಪ್ರದಾಯ’ ಎಂದರು.
 
ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ರೈತರ ಹಿತ ಕಾಪಾಡಲು ತುಂಗಭದ್ರಾ ನದಿಗೆ ಭೈರನಪಾದ ಬಳಿ ಬ್ಯಾರೇಜ್ ನಿರ್ಮಿಸುವ ಯೋಜನೆ ಜಾರಿಯಾಗಬೇಕು’ ಎಂದು ಆಗ್ರಹಿಸಿದರು.
 
ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ದ್ಯಾವಪ್ಪ ರೆಡ್ಡಿ, ಎಚ್. ಮಹೇಶ್ವರಪ್ಪ, ಇಇ ಪಟೇಲ್, ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು, ಬೂದಿಹಾಳ್ ಹನುಮಂತಪ್ಪ, ಕೆ.ಪಿ. ಸಿದ್ದಬಸಪ್ಪ, ಕುರುವ ಗಣೇಶ್, ಹೊನ್ನೂರು ಮುನಿಯಪ್ಪ, ಬಿದರಗಟ್ಟೆ ಭರಮಪ್ಪ, ಸುತ್ತಮುತ್ತಲ ಗ್ರಾಮಗಳ ರೈತರು, ಗ್ರಾಮಸ್ಥರು ಇದ್ದರು.
ರೈತ ಸಂಘದ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು, ಬಸವರಾಜಪ್ಪ ಸ್ವಾಗತಿಸಿದರು, ಫಾಲಾಕ್ಷಪ್ಪ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.