ADVERTISEMENT

ಕೆರೆಗೆ ನೀರುಣಿಸಲು ಬಿಲ್ಲಹಳ್ಳಿ ಭಗೀರಥರ ಪ್ರಯತ್ನ

ಎನ್.ನಾಗರಾಜ್
Published 18 ಮೇ 2017, 9:57 IST
Last Updated 18 ಮೇ 2017, 9:57 IST
ಚನ್ನಗಿರಿ ತಾಲ್ಲೂಕಿನ ಬಿಲ್ಲಹಳ್ಳಿ ಬಳಿ ಹರಿದ್ರಾವತಿ ಹಳ್ಳಕ್ಕೆ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌
ಚನ್ನಗಿರಿ ತಾಲ್ಲೂಕಿನ ಬಿಲ್ಲಹಳ್ಳಿ ಬಳಿ ಹರಿದ್ರಾವತಿ ಹಳ್ಳಕ್ಕೆ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌   

ದಾವಣಗೆರೆ: ‘ಮಳೆರಾಯ ಕಣ್ಣು ಬಿಟ್ಟರೆ ಸಾಕು, ಈ ವರ್ಷವೇ ಹಳ್ಳದ ನೀರು ಹರಿಸಿ ನಮ್ಮೂರ ಕೆರೆಗಳನ್ನು ತುಂಬಿಸಿಬಿಡುತ್ತೇವೆ...’ – ಹೀಗೆ ಆತ್ಮವಿಶ್ವಾಸದಿಂದ ನುಡಿದಿದ್ದು ಚನ್ನಗಿರಿ ತಾಲ್ಲೂಕಿನ ಬಿಲ್ಲಹಳ್ಳಿಯ ಗ್ರಾಮಸ್ಥರು.

ಭಗೀರಥ ಗಂಗೆಯನ್ನೇ ಧರೆಗಿಳಿಸಿದರೆ, ಬಿಲ್ಲಹಳ್ಳಿ ಗ್ರಾಮಸ್ಥರು ಹಳ್ಳದ ನೀರನ್ನು ಕೆರೆಗಳಿಗೆ ಹರಿಸಲು ಹೊರಟಿದ್ದಾರೆ. ತಾವು ಕೈಗೊಂಡ ನೀರ ಕಾಯಕದ ಅನುಭವವನ್ನು ಬಿಲ್ಲಹಳ್ಳಿ ಗ್ರಾಮಸ್ಥರು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ಇಲ್ಲಿಂದ ಸೂಳೆಕೆರೆಗೆ ಕೆಲವೇ ಕಿ.ಮೀ ದೂರ. ಭದ್ರಾ ಬಲದಂಡೆ ನಾಲೆ ಹಾದು ಹೋಗಿರುವುದೂ ಪಕ್ಕದ ಊರಿನಲ್ಲೇ. ಇಷ್ಟಾದರೂ ಊರಿಗೆ ಬರ ತಪ್ಪಿಲ್ಲ. ಕೆರೆಗಳ ಒಡಲು ಖಾಲಿಯಾಗಿ ವರ್ಷಗಳೇ ಉರುಳಿವೆ. ಕೊಳವೆ ಬಾವಿಗಳು ಒಂದೊಂದಾಗಿ ಬತ್ತುತ್ತಿವೆ. ಹೇಗಾದರೂ ಮಾಡಿ ಊರಿನ ಕೆರೆಗಳನ್ನು ತುಂಬಿಸಿ ಎಂದು ಮೊರೆಯಿಟ್ಟರೂ ಜನಪ್ರತಿನಿಧಿಗಳು ಕಿವಿಗೊಟ್ಟಿಲ್ಲ’.

ADVERTISEMENT

‘ಸರ್ಕಾರವನ್ನು ನಂಬಿದರೆ ಆಗಲ್ಲ ಎನಿಸಿತು. ಊರಿನವರೇ ಸೇರಿ ಏನಾದರೂ ಮಾಡೋಣ ಅಂದುಕೊಂಡೆವು. ಒಬ್ಬೊಬ್ಬರು ಒಂದೊಂದು ಸಲಹೆ ಕೊಟ್ಟರು. ಕೊನೆಗೆ ಹೊಳೆದಿದ್ದೇ ಹರಿದ್ರಾವತಿ ಹಳ್ಳದ ನೀರನ್ನು ಕೆರೆಗಳಿಗೆ ತುಂಬಿಸುವ ಉಪಾಯ’.

‘ಆರಂಭದಲ್ಲಿ ಒಂದಿಬ್ಬರು ಉತ್ಸಾಹದಿಂದ ಮುಂದೆ ಬಂದರು. ಅಪಸ್ವರಗಳೂ ಕೇಳಿಬಂದವು. ಯೋಜನೆಯ ಮಹತ್ವ ತಿಳಿದ ಮೇಲೆ ಊರಿಗೆ ಊರೇ ಕೈ ಜೋಡಿಸಿತು. ಜನ ಹಣವನ್ನೂ ಕೊಟ್ಟು, ಶ್ರಮವನ್ನೂ ಹಾಕಿದರು’ ಎಂದು ಯೋಜನೆ ಹಿಂದಿನ ಕಥೆಯನ್ನು ಗ್ರಾಮಸ್ಥರು ಬಿಚ್ಚಿಟ್ಟರು.

‘ಮಾವಿನಹೊಳೆ ಕೆರೆಯಲ್ಲಿ ಹುಟ್ಟುವ ಹರಿದ್ರಾವತಿ ಹಳ್ಳ ಸೂಳೆಕೆರೆ ಸೇರುತ್ತದೆ. ಮಳೆಗಾಲದಲ್ಲಿ ಆರು ತಿಂಗಳು ಹರಿಯುತ್ತದೆ. ಮಳೆ ಹೆಚ್ಚಾದರೆ ಇನ್ನೂ ಹೆಚ್ಚು ಕಾಲ ಹರಿವಿರುತ್ತದೆ. ಈ ನೀರನ್ನು ಕೆರೆಗಳಿಗೆ ಹರಿಸಲು ಗ್ರಾಮಸ್ಥರೇ ₹ 63 ಲಕ್ಷ ಸಂಗ್ರಹಿಸಿ, ಒಟ್ಟು 3.5 ಕಿ.ಮೀ. ಉದ್ದದ ಕೊಳವೆ ಮಾರ್ಗ ಹಾಕಿ
ದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರಾದ ಬಿ.ಎಸ್.ನಾಗರಾಜ.

‘ಕೆಲ ಸ್ಥಿತಿವಂತ ರೈತರು ಭದ್ರಾ ನಾಲೆಯಿಂದ ಮತ್ತು ಸೂಳೆಕೆರೆಯಿಂದ ಅಡಿಕೆ ತೋಟಗಳಿಗೆ ಕೊಳವೆ ಮಾರ್ಗ ಹಾಕಿದ್ದಾರೆ. ಈ ಅನುಭವದ ಜತೆಗೆ ಹಲವು
ಏತ ನೀರಾವರಿ ಯೋಜನೆಗಳನ್ನೂ ನೋಡಿಕೊಂಡು ಬಂದೆವು. ಎಲ್ಲರೂ ಚರ್ಚಿಸಿ, ಮಾರ್ಗವನ್ನು ಗುರುತಿಸಿ ಕೊಳವೆಗಳನ್ನು ಅಳವಡಿಸಿದೆವು’ ಎಂದು ತಿಳಿಸುತ್ತಾರೆ ಎಚ್.ಸಿ.ಗಂಗಾಧರ.

ಜಾತ್ರೆಯಂತೆ ಸಂಭ್ರಮ: ‘ಕೂಲಿಗೆ ಎಂದು ಒಂದು ರೂಪಾಯಿಯನ್ನೂ ಖರ್ಚು ಮಾಡಲಿಲ್ಲ. ಜನ ಕೊಟ್ಟ ಹಣದಲ್ಲಿ ಒಂದು ಪೈಸೆಯೂ ಸೋರಿಕೆ ಆಗಲಿಲ್ಲ. 150 ಜನ ಟ್ರ್ಯಾಕ್ಟರ್‌ಗಳಲ್ಲಿ ಹೋಗುತ್ತಿದ್ದೆವು. ಊಟ, ಕೆಲಸ ಎಲ್ಲರೂ ಒಟ್ಟಿಗೆ ಮಾಡುತ್ತಿದ್ದೆವು. 3.5 ಕಿ.ಮೀ ಉದ್ದದ ಕೊಳವೆಮಾರ್ಗವನ್ನು ಕೇವಲ 15 ದಿನದಲ್ಲಿ ಅಳವಡಿಸಿದೆವು. ಊರಿನಲ್ಲಿ ಜಾತ್ರೆಯ ವಾತಾವರಣ ಕಳೆಗಟ್ಟಿತ್ತು’.

‘30 ಎಚ್‌.ಪಿ. ಸಾಮರ್ಥ್ಯದ ಎರಡು ಮೋಟರ್‌ಗಳನ್ನು ಜೋಡಿಸಿದ್ದೇವೆ. ನಿರಂತರ ವಿದ್ಯುತ್‌ಗಾಗಿ ಎಕ್ಸ್‌ಪ್ರೆಸ್‌ ಲೈನ್‌ ಅಳವಡಿಸಿದ್ದೇವೆ. ಎಲ್ಲವನ್ನೂ ಸರ್ಕಾರದ ಅನುಮತಿ ಪಡೆದು ಅಧಿಕೃತವಾಗಿ ಮಾಡಿದ್ದೇವೆ. ನಿಯಮಗಳನ್ನು ಪಾಲಿಸಿದ್ದೇವೆ.

ಬೀರನಕೆರೆ 30 ಎಕರೆ ಮತ್ತು ಗೌಡನಕಟ್ಟೆ ಕೆರೆ 16 ಎಕರೆ ವಿಸ್ತೀರ್ಣ ಹೊಂದಿವೆ. ಎರಡೂ ಕೆರೆಗಳಿಗೆ ನೀರು ತುಂಬಿಸಿದರೆ ಕನಿಷ್ಠ 900 ಎಕರೆ ಪ್ರದೇಶದ ಅಡಿಕೆ ಬೆಳೆಗೆ ಅನುಕೂಲವಾಗಲಿದೆ. ಅಂತರ್ಜಲ ಹೆಚ್ಚಿ ಈ ಭಾಗದ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಲಿದೆ’ ಎಂಬುದು ಗ್ರಾಮ ಪಂಚಾಯ್ತಿ ಸದಸ್ಯ ಟಿ.ಮಂಜಪ್ಪ ಅವರ ವಿಶ್ವಾಸ.

‘ನಮ್ಮ ಹಳ್ಳಿಯಲ್ಲಿ ಶೇ 80 ಅಡಿಕೆ ಬೆಳೆಯಿದೆ. 10–15 ಎಕರೆ ಅಡಿಕೆ ತೋಟ ಇರುವ ರೈತರು ಸೂಳೆಕೆರೆಯಿಂದ ಕೊಳವೆಮಾರ್ಗ ಹಾಕಿಸಿದ್ದಾರೆ. ಆದರೆ, ಸಣ್ಣ ರೈತರಿಗೆ ಆ ಸಾಮರ್ಥ್ಯವಿಲ್ಲ. ಹೀಗಾಗಿ ಎಲ್ಲರಿಗೂ ಅನುಕೂಲವಾಗಲಿ ಎಂದು ರೈತರೆಲ್ಲರೂ ಕೆರೆಗಳಿಗೆ ನೀರುಣಿಸುವ ಯೋಜನೆಗಾಗಿ ಪ್ರತಿ ಎಕರೆಗೆ ₹ 10ಸಾವಿರದಂತೆ ಹಣ ಕೊಟ್ಟಿದ್ದೇವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿಯ ಮತ್ತೊಬ್ಬ ಸದಸ್ಯ ಜಗದೀಶ್‌.

‘ಇಲ್ಲಿನ ಕೆರೆಗಳು ತುಂಬಿದರೆ ಪಕ್ಕದ ಊರಿನ ಕೆರೆಗಳಿಗೂ ನೀರು ಕೊಡುತ್ತೇವೆ. ಕೆರೆಗೆ ಹೊಂದಿಕೊಂಡಿರುವ ದೋಣಿಹಳ್ಳಿ, ಬೂಸೇನ ಹಳ್ಳಿ, ಹೊಸ ಬನ್ನಿಹಟ್ಟಿ, ಅಣಪೂರು ಗ್ರಾಮಸ್ಥರೂ ವಂತಿಗೆ ಕೊಟ್ಟಿದ್ದಾರೆ. ಅವರಿಗೂ ಈ ಯೋಜನೆಯಿಂದ ಅನುಕೂಲವಾಗಲಿದೆ’ ಎಂದು ವಿವರ ನೀಡುತ್ತಾರೆ ಅವರು.

**
‘ಉಚಿತ ವಿದ್ಯುತ್‌ ಕೊಡಿ’

ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ಪಂಪ್‌ಹೌಸ್‌, ಕೊಳವೆ ಮಾರ್ಗದ ನಿರ್ವಹಣೆ ನಾವೇ ಮಾಡುತ್ತೇವೆ. ಸರ್ಕಾರ ಉಚಿತ ವಿದ್ಯುತ್‌ ಆದರೂ ಕೊಡಬೇಕು ಎಂದು ಒತ್ತಾಯಿಸುತ್ತಾರೆ ಶಿವಬಸವೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ.

‘ಬಿಜೆಪಿ ಸರ್ಕಾರ ಬರಲಿ, ನೀವು ಖರ್ಚು ಮಾಡಿದ ಅಷ್ಟೂ ಹಣವನ್ನು ಕೆರೆ ಬಳಕೆದಾರರ ಸಂಘಕ್ಕೆ ನೀಡುತ್ತೇವೆ ಎಂದು ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಭರವಸೆ ನೀಡಿದ್ದಾರೆ. ಮುಂದೆ ಅವರು ಮಾತು ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸುತ್ತಾರೆ ಬಿಲ್ಲಹಳ್ಳಿ ರೈತರು.

**

ತುಮ್ಕೋಸ್‌ ಸಹಕಾರ
ಅಡಿಕೆಗೆ ಮಾರುಕಟ್ಟೆ ಒದಗಿಸುವ ಚನ್ನಗಿರಿಯ ತುಮ್ಕೋಸ್‌,  ಹರಿದ್ರಾವತಿ ಏತನೀರಾವರಿ ಯೋಜನೆಗೂ ನೆರವು ನೀಡಿತು. ಯೋಜನೆಗಾಗಿ ಪ್ಲಾಸ್ಟಿಕ್‌ ಕೊಳವೆಗಳನ್ನು ಕೊಳ್ಳಲು ತಕ್ಷಣ ಸಾಲ ಮಂಜೂರು ಮಾಡಿತು. ಇದರಿಂದ ಕೆಲಸ ವೇಗವಾಗಿ ಸಾಗಿತು ಎಂದು ಮಂಜಪ್ಪ ತುಮ್ಕೋಸ್‌ ನೆರವು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.