ADVERTISEMENT

ಕೆಲಸದಿಂದ ವಜಾ: ಕಸ ಹರಡಿ ಪೌರಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 7:46 IST
Last Updated 21 ನವೆಂಬರ್ 2017, 7:46 IST

ದಾವಣಗೆರೆ: ಕಾರಣ ನೀಡದೇ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದರಿಂದ ಆಕ್ರೋಶಗೊಂಡ ಪೌರ ಕಾರ್ಮಿಕರು ನಗರದಲ್ಲಿ ಸೋಮವಾರ ಕಸ ಹರಡುವ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಲ್ಲಿ  ಹೊರಗುತ್ತಿಗೆ ಪೌರಕಾರ್ಮಿಕರು ಬೆಳಿಗ್ಗೆ 5 ಗಂಟೆಯಿಂದಲೇ ಕಸ ಹರಡಿ ಪ್ರತಿಭಟನೆ ನಡೆಸಿದರು. ಇಲ್ಲಿನ ಕೆಬಿ ಬಡಾವಣೆಯ 22ನೇ ವಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ 10 ಜನ ಗುತ್ತಿಗೆ ಪೌರ ಕಾರ್ಮಿಕರನ್ನು  ಪಾಲಿಕೆ ಆಯುಕ್ತರು ಏಕಾಏಕಿ ಕೆಲಸದಿಂದ ವಜಾಗೊಳಿಸಿದ್ದಾರೆ. ಈ ಕ್ರಮ ಖಂಡನೀಯ ಎಂದರು.

‘ಆಯುಕ್ತರ ಕ್ರಮದಿಂದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿರುವ ನಮಗೆ ದಿಕ್ಕು ತೋಚದಂತಾಗಿದೆ. ಇರುವ ಕೆಲಸ ಕಳೆದುಕೊಂಡರೆ ಬಡವರಾದ ನಾವು ಜೀವನ ನಡೆಸುವುದು ಕಷ್ಟವಾಗುತ್ತದೆ. ಕೂಡಲೇ ನಮಗೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಆಮಿಷಕ್ಕೆ ಒಳಗಾಗಿರುವ ಅಧಿಕಾರಿಗಳು ನಿರಂತರ ಕೆಲಸ ಮಾಡುತ್ತಿದ್ದವರ ಬದಲಿಗೆ ಬೇರೆಯವರನ್ನು ನಿಯೋಜಿಸಲು ಹೊರಟಿದ್ದಾರೆ. ಪಾಲಿಕೆ ಆಯುಕ್ತರು ಕೂಡಲೇ ತಮ್ಮ ಆದೇಶ ಹಿಂಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಯುಜಿಡಿ ಕಾಮಗಾರಿಯಲ್ಲಿ ಕೆಲಸ ಮಾಡುವ 15 ಮಂದಿ ಪೌರಕಾರ್ಮಿಕರನ್ನು ಟೆಂಡರ್ ಮುಗಿದ ಕೂಡಲೇ ಕೆಲಸದಿಂದ ವಜಾಗೊಳಿಸಲಾಗಿದೆ. ಇದೀಗ ಅವರು ಸಹ ಕೆಲಸವಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಹೊಸ ಟೆಂಡರ್ ಕರೆದು ಅವರನ್ನು ಸಹ ಕೆಲಸದಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಪಾಲಿಕೆಯ ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ‘ಪೌರಕಾರ್ಮಿಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ವಜಾ ಮಾಡಿರುವ ಪೌರಕಾರ್ಮಿಕರನ್ನು ಪುನಃ ಕೆಲಸದಲ್ಲಿ ಮುಂದುವರೆಸುವಂತೆ ಆಯುಕ್ತರಲ್ಲಿ ಮನವಿ ಮಾಡಲಾಗಿದೆ’ ಎಂದರು. ಪ್ರತಿಭಟನೆಯಲ್ಲಿ ಉದಯ್, ಕುಮಾರ್, ಪ್ರಕಾಶ್, ಪರಶುರಾಮ, ರತ್ನಮ್ಮ, ರೇಣುಕಮ್ಮ, ಏಕಾಂತಪ್ಪ, ಸಾವಿತ್ರಮ್ಮ ಇತರರು ಹಾಜರಿದ್ದರು.

ಸಮಿತಿ ರಚನೆಗೆ ತೀರ್ಮಾನ
ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ 10 ಜನ ಹೊರಗುತ್ತಿಗೆ ಪೌರಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕೈಬಿಟ್ಟಿರುವ ಬಗ್ಗೆ ಪರಿಶೀಲನೆ ನಡೆಸಲು 5 ಜನರ ಸಮಿತಿಯೊಂದನ್ನು ರಚಿಸುವುದಾಗಿ ಸೋಮವಾರ ಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಿದ್ದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಮೇಯರ್‌ ಅನಿತಾಬಾಯಿ ಮಾಲತೇಶ್‌, ಪಾಲಿಕೆ ಸ್ಥಾಯಿ ಸಮಿತಿ ಸದಸ್ಯ ಎಂ.ಹಾಲೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಿ.ಬಿ.ಲಿಂಗರಾಜ್‌, ದಿಲ್‌ಶಾದ್‌, ಬಸಪ್ಪ, ಶ್ರೀನಿವಾಸ್‌, ಆಯುಕ್ತ ನಾರಾಯಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.