ADVERTISEMENT

‘ಕೇಂದ್ರ ಸರ್ಕಾರದ ವಿಮಾ ಯೋಜನೆ ಸದಬಳಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:20 IST
Last Updated 23 ಮಾರ್ಚ್ 2017, 5:20 IST

ಬಸವಾಪಟ್ಟಣ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್‌ ಪೆನ್ಷನ್‌ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ಪಡೆದು ವಿಮಾ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಎನ್‌.ಭಾಸ್ಕರ್‌ ಹೇಳಿದರು.

ಸಮೀಪದ ಮಲೆಕುಂಬ ಳೂರಿನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಬುಧವಾರ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಬಡವರೂ ವಿಮಾ ಕಂತುಗಳನ್ನು ಸುಲಭವಾಗಿ ಪಾವತಿ ಮಾಡಲು ಅನುಕೂಲ ಕಲ್ಪಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಬ್ಯಾಂಕುಗಳು ಇದರ ಸೌಲಭ್ಯವನ್ನು ಬಡಜನರಿಗೆ ಒದಗಿಸಲು ಸದಾ ಸಿದ್ಧರಿದ್ದು,  ಪ್ರತಿಯೊಬ್ಬ ವಯಸ್ಕರು ವಿಮಾ ಪಾಲಿಸಿ ಪಡೆದುಕೊಳ್ಳಬೇಕು’ ಎಂದು ಭಾಸ್ಕರ್‌ ಹೇಳಿದರು.

ಹೊನ್ನಾಳಿ ಸಾಕ್ಷರತಾ ಕೇಂದ್ರದ ಅಧಿಕಾರಿ ತೇಜೇಶ್ವರ್‌ ಮಾತನಾಡಿ, ‘ದೇಶದಲ್ಲಿ ಮಹಿಳೆಯರು ಜನಸಂಖ್ಯೆಯ ಅರ್ಧದಷ್ಟಿದ್ದಾರೆ.  ಆದರೆ ಸಾಕ್ಷರ ರಾಗದೇ ಇರುವುದರಿಂದ ದೇಶದ ಮಾನವಶಕ್ತಿ ಸಂಪನ್ಮೂಲ ನಷ್ಟವಾಗುತ್ತಿದೆ.

ತಮ್ಮ ಕೌಟುಂಬಿಕ ಕ್ಷೇತ್ರದಲ್ಲಿ ಆರ್ಥಿಕ ವ್ಯವಹಾರ ನಡೆಸುವಲ್ಲಿ ಮಹಿಳೆಯರು ಸಫಲರಾಗಬೇಕು. ಇದ ಕ್ಕಾಗಿ ಮಹಿಳೆಯರ ಸಂಪೂರ್ಣ ಸಾಕ್ಷರತೆ ಅಗತ್ಯ. ಮಹಿಳಾ ಸಬಲೀಕರಣ ಸಮಾನತೆ ಮತ್ತು ಉದ್ಯೋಗಗಳ ಹಂಚಿಕೆಯಿಂದ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿಗೊಳ್ಳಲು ಸಾಧ್ಯ’ ಎಂದರು.

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಸುರೇಶ್‌, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚೌಡಮ್ಮ ವಹಿಸಿದ್ದರು. ಬ್ಯಾಂಕಿನ ಪ್ರಬಂಧಕ ಎಸ್‌.ನಾಗರಾಜ್‌ ಸ್ವಾಗತಿಸಿದರು. ಜಿ.ಕೆ.ಶ್ರೀನಿವಾಸ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT