ADVERTISEMENT

ಕೈಗಾರಿಕೆ ಮುಳುಗಲು ರಾಜಕಾರಣಿಗಳು ಕಾರಣ

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ರಾಜ್ಯಮಟ್ಟದ ಸಮಾವೇಶದಲ್ಲಿ ಅಥಣಿ ವೀರಣ್ಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 9:37 IST
Last Updated 10 ಜೂನ್ 2018, 9:37 IST

ದಾವಣಗೆರೆ: ಮ್ಯಾಂಚೆಸ್ಟರ್‌ ಆಫ್‌ ಕರ್ನಾಟಕ ಎಂದು ಒಂದು ಕಾಲದಲ್ಲಿ ಹೆಸರುವಾಸಿಯಾಗಿದ್ದ ದಾವಣಗೆರೆ ಇವತ್ತು ಬರೀ ಬೆಣ್ಣೆದೋಸೆಗಷ್ಟೇ ಸೀಮಿತವಾಗಿದೆ. ಹಾಗಾಗಿರುವುದು ದುರಂತ. ಈ ದುರಂತಕ್ಕೆ ಎಲ್ಲಾ ಪಕ್ಷಗಳ ರಾಜಕಾರಣವೇ ಕಾರಣ ಎಂದು ಚಾರ್ಟೆಡ್‌ ಎಕೌಂಟೆಂಟ್‌ ಅಥಣಿ ವೀರಣ್ಣ ಆರೋಪಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಡಿಸಿಸಿಐ) ಸಹಯೋಗದಲ್ಲಿ ಬಾಪೂಜಿ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ್ದರಿಂದ ಕೈಗಾರಿಕೆಗಳ ಬೆಳವಣಿಗೆಯೇ ನಿಂತಿತು. ಜಿ.ಎಸ್‌.ಟಿ. ಜಾರಿ ಮಾಡಿದ್ದರಿಂದ ಪೂರ್ತಿ ಮುಳುಗುವಂತಾಯಿತು. ಇದರಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹಿಂದಿನ ರಾಜ್ಯ ಸರ್ಕಾರ ಬಡವರಿಗೆ 36 ಕೆ.ಜಿ. ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಯೋಜನೆ ಒಳ್ಳೆಯದಿರಬಹುದು. ಆದರೆ ಕಾರ್ಮಿಕರೇ ಇಲ್ಲದಂತಾಯಿತು. 36 ಕೆ.ಜಿ. ಅಕ್ಕಿಯಲ್ಲಿ 18 ಕೆ.ಜಿ. ಮಾರಿ ಕುಡಿದು ತಿಂದು ಮಲಗಿದರು. ಈಗಿನ ಕುಮಾರಸ್ವಾಮಿ ಸರ್ಕಾರ ಕಾರ್ಮಿಕರ ವೇತನ ಹೆಚ್ಚಿಸಲು ನಿರ್ಧರಿಸಿದ್ದಾರೆ. ಕಾರ್ಮಿಕರ ವೇತನ ಹೆಚ್ಚಿಸುವ ಜತೆಗೆ ಕೆಲಸದ ಸಮಯವನ್ನೂ ನಿಗದಿ ಮಾಡಬೇಕಿತ್ತು. ಓಟಿಗಾಗಿ ಇವರೆಲ್ಲ ಮಾಡುತ್ತಿರುವ ರಾಜಕಾರಣದಿಂದ ಕೈಗಾರಿಕೆಗಳು ಮುಳುಗುತ್ತಿವೆ ಎಂದು ಟೀಕಿಸಿದರು.

ಭದ್ರಾ ನೀರಾವರಿ ಬಂದ ಬಳಿಕ 100ಕ್ಕೂ ಅಧಿಕ ಅಕ್ಕಿ ಗಿರಣಿಗಳು ಬಂದವು. ಈಗ ಅವರೂ ರೋಗಗ್ರಸ್ತವಾಗಿವೆ. ಮೂರು ವರ್ಷ ಮಳೆ ಕೈಕೊಟ್ಟಿದ್ದು ಕೂಡಾ ಇದಕ್ಕೆ ಕಾರಣ. ಜತೆಗೆ ಅಡಿಗಟ್ಟಿ ಇಲ್ಲದ ಕೈಗಾರಿಕಾ ನೀತಿ, ಎಪಿಎಂಸಿ ನೀತಿಗಳೂ ಕಾರಣ ಎಂದು ಹೇಳಿದರು.

ಎಫ್‌ಕೆಸಿಸಿಐ ನಿಯೋಜಿತ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ ಮಾತನಾಡಿ, ‘ರಾಜ್ಯ ಎಂದರೆ ಬೆಂಗಳೂರು ಅಲ್ಲ. ರಾಜ್ಯದ ಅಭಿವೃದ್ಧಿ ಆಗಬೇಕಿದ್ದರೆ ಬೆಂಗಳೂರಿನ ಅಭಿವೃದ್ಧಿಯಾದರೆ ಸಾಕಾಗದು, ಎಲ್ಲ ಜಿಲ್ಲೆಗಳ ಅಭಿವೃದ್ಧಿ ಆಗಬೇಕು. ಜಿಲ್ಲೆಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಅದಕ್ಕೆ ಕೈಗಾರಿಕೆಗಳು ಜಿಲ್ಲೆಗಳಲ್ಲಿ ಆರಂಭವಾಗಬೇಕು. ಎಲ್ಲ ಜಿಲ್ಲೆಗಳಲ್ಲಿ ಕೆಐಸಿಸಿ ಎಸ್ಟೇಟ್‌ ಆಗಬೇಕು. ಆಗ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 11 ಜಿಲ್ಲೆಗಳಿಗೆ ಬಜೆಟಲ್ಲಿ ಅನುದಾನ ಒದಗಿಸಿದ್ದರು. ಈಗಿನ ಸರ್ಕಾರ ಅದನ್ನು ಮುಂದುವರಿಸಬೇಕು. ಉಳಿದ ಜಿಲ್ಲೆಗಳಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಮಂತ್ರಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿ ಎಂದರೆ ಕೈಗಾರಿಕೆಗಳ ಮೂಲಕ ಆಗಬೇಕು. ಅದಕ್ಕಾಗಿಯೇ ಮುದ್ರಾ ಯೋಜನೆ ಇದೆ. ಆದರೆ ಬ್ಯಾಂಕ್‌ಗಳಿಂದಾಗಿ ಮುದ್ರಾ ಯೋಜನೆ ಯಶಸ್ಸು ಕಾಣಲಿಲ್ಲ. ಈ ರೀತಿ ಹಲವು ಯೋಜನೆಗಳಿವೆ. ಎಲ್ಲವೂ ಒಂದು ಕಡೆ ಲಾಕ್‌ ಆಗಿಬಿಟ್ಟಿವೆ ಎಂದರು.

ಎಫ್‌ಡಿಸಿಸಿಐ ಅಧ್ಯಕ್ಷ ಯಜಮಾನ್‌ ಮೋತಿ ವೀರಣ್ಣ ಮಾತನಾಡಿ, ‘ದಾವಣಗೆರೆಗೆ ಬಂದು ಬೆಣ್ಣೆ ದೋಸೆ ಎಲ್ಲಿ ಸಿಗುತ್ತದೆ ಎಂದು ಚರ್ಚೆ ಮಾಡುವ ಬದಲು ಜವಳಿ ಗಿರಣಿಗಳು ಯಾಕೆ ಮುಚ್ಚಿವೆ ಎಂಬ ಬಗ್ಗೆ ಚರ್ಚೆಯಾಗಬೇಕು’ ಎಂದು ಸಲಹೆ ನೀಡಿದರು.

ಮೇಯರ್‌ ಶೋಭಾ ಪಲ್ಲಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬಾಪೂಜಿ ಸಂಸ್ಥೆಯ ಕೋಶಾಧಿಕಾರಿ ಎ.ಸಿ.ಜಯಣ್ಣ, ಎಫ್‌ಕೆಸಿಸಿಐಯ ಅಕ್ಕಿ ಮಲ್ಲಿಕಾರ್ಜುನ, ರಮೇಶ್‌ಚಂದ್ರ ಲಹೋಟಿ, ಸಿ.ಆರ್‌.ಜನಾರ್ದನ್‌, ಲಿಂಗಣ್ಣ, ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ ಸ್ವಾಗತಿಸಿದರು. ಎಫ್‌ಡಿಸಿಸಿಐ ಕಾರ್ಯದರ್ಶಿ ಎ.ಬಿ.ಶಂಭುಲಿಂಗಪ್ಪ ವಂದಿಸಿದರು. ಎಫ್‌ಕೆಸಿಸಿಐ ಡಿಸಿಸಿ ಅಧ್ಯಕ್ಷ ಎನ್‌.ಯಶವಂತರಾಜ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗೋಷ್ಠಿಗಳು ನಡೆದವು.

‘ಬ್ಯಾಂಕ್‌ ಸಾಲ ಸಿಗುತ್ತಿಲ್ಲ’

ಕೈಗಾರಿಕೆ ಆರಂಭಿಸಲು ಸಾಲ ಸಿಗುತ್ತಿಲ್ಲ. ಸಾಲ ತೆಗೆದುಕೊಂಡು ಎಲ್ಲಿ ಓಡಿ ಹೋಗುತ್ತಾರೋ ಎಂಬ ಭಯ ಬ್ಯಾಂಕ್‌ನವರಿಗೆ ಕಾಡುತ್ತಿದೆ. ಓಡಿ ಹೋದ ಪ್ರಕರಣಗಳಿಗೂ ನಮಗೂ ಹೋಲಿಸಬೇಡಿ. ದಯವಿಟ್ಟು ಸಾಲ ಕೊಡಿ ಎಂದು ಬ್ಯಾಂಕ್‌ಗೆ ಸಂಬಂಧಿಸಿದವರ ಬಳಿ ಕೇಳಿಕೊಂಡಿದ್ದೇವೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ ತಿಳಿಸಿದರು.

ರಾಜ್ಯದಲ್ಲಿ ಕಾರ್ಮಿಕರಿಗೆ ಒಂದೇ ರೀತಿ ಕನಿಷ್ಠ ವೇತನ ಜಾರಿ ಮಾಡಬಾರದು. ಆಂಧ್ರಪ್ರದೇಶದಲ್ಲಿ ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಕನಿಷ್ಠ ವೇತನ ನಿರ್ಧರಿಸಲಾಗುತ್ತದೆ. ಕರ್ನಾಟಕದಲ್ಲೂ ಅದೇ ರೀತಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.