ADVERTISEMENT

ಕೊಳವೆಬಾವಿ ಕೊರೆದು 3 ತಿಂಗಳಾದರೂ ನೀರಿಲ್ಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 9:16 IST
Last Updated 22 ಸೆಪ್ಟೆಂಬರ್ 2017, 9:16 IST

ಮಾಯಕೊಂಡ: ನೀರಿನ ಬವಣೆ ನೀಗಲು ಸರ್ಕಾರ ಕೊರೆಯಿಸಿದ ಕೊಳವೆಬಾವಿ ಎರಡು ತಿಂಗಳು ಕಳೆದರೂ ಜನರಿಗೆ ಜೀವಜಲ ಸಿಗುತ್ತಿಲ್ಲ. ಗ್ರಾಮಿಣ ನೀರು ಪೂರೈಕೆ ವಿಭಾಗದವರು ಮತ್ತು ಗ್ರಾಮ ಪಂಚಾಯ್ತಿ ಜನರಿಗೆ ತಲುಪಿಸಲು ನಿರ್ಲಕ್ಷ್ಯೆ ತೋರುತ್ತಿರುವ ಕಾರಣ ಜನ ನೀರಿಲ್ಲದೇ ಪರದಾಡುವಂತಾಗಿದೆ. ಪಂಚಾಯ್ತಿಯವರು 10-12 ದಿನಕ್ಕೊಮ್ಮೆ ಪೂರೈಸುವ ನಾಲ್ಕಾರು ಕೊಡ ನೀರಿಗೆ ಕಾಯುವಂತಾಗಿದೆ ಎಂಬುದು ಜನರ ಆರೋಪ.

ಸರ್ಕಾರ ಮಾಯಕೊಂಡದ ಕುಡಿಯುವ ನೀರಿನ ಬವಣೆ ನೀಗಲು 10ಕ್ಕೂ ಹೆಚ್ಚು ಕಡೆ ಕೊಳವೆಬಾವಿ ಕೊರೆಯಿಸಿದ್ದರೂ ನೀರು ದೊರಕಿರಲಿಲ್ಲ. ಗ್ರಾಮದಲ್ಲಿ ನೀರಿಗೆ ಹಾಹಾಕಾರವೆದ್ದ ಕಾರಣ ಜನಪ್ರತಿನಿಧಿಗಳ ಒತ್ತಡದ ಮೇರೆಗೆ 2 ಹೆಚ್ಚುವರಿಯಾಗಿ ಕೊಳವೆಬಾವಿ ಕೊರೆಯಿಸಲಾಗಿತ್ತು. ಗ್ರಾಮದ ಎಪಿಎಂಸಿ ಯಾರ್ಡ್‌ನಲ್ಲಿ 2 ಕೊಳವೆಬಾವಿ ಕೊರೆಯಿಸಿದಾಗ ಉತ್ತಮ ಪ್ರಮಾಣದ ನೀರು ಸಿಕ್ಕಿತ್ತು. ಗ್ರಾಮಸ್ಥರಲ್ಲಿ ಸಂತಸ ಮೂಡಿತ್ತು.

ಕೊಳವೆಬಾವಿ ಕೊರೆದು 3 ತಿಂಗಳು ಕಳೆಯುತ್ತಾ ಬಂದರೂ ಗ್ರಾಮ ಪಂಚಾಯ್ತಿ ಅಗತ್ಯ ಕ್ರಮಕೈಗೊಂಡು ನೀರೊದಗಿಸಲು ಮುಂದಾಗಿಲ್ಲ. ಪಂಚಾಯ್ತಿಯವರು ಇದೇ ಕೊಳವೆಬಾವಿಗಳಿಂದ ನೀರನ್ನು ಟ್ಯಾಂಕರ್ ಮೂಲಕ ಜನಕ್ಕೆ ಒದಗಿಸುತ್ತಿದ್ದಾರೆ. ನೀರಿಗಾಗಿ ಪರದಾಟ ತಪ್ಪಿಸಿಲ್ಲ ಎಂದು ಗ್ರಾಮಸ್ಥರು ನೊಂದಿದ್ದಾರೆ.

ADVERTISEMENT

‘ಗ್ರಾಮ ಪಂಚಾಯ್ತಿಯವರು 12 ದಿನಕ್ಕೊಮ್ಮೆ ಎರಡು ಡ್ರಂ ನೀರು ಪೂರೈಸುತ್ತಾರೆ. ನೀರು 3–4 ದಿನಕ್ಕೂ ಸಾಕಾಗುವುದಿಲ್ಲ. ಗ್ರಾಮದ ಕೆಲವೆಡೆ ಪಂಚಾಯ್ತಿ ಸಿಬ್ಬಂದಿ ನಿರ್ಲಕ್ಷದಿಂದ ನೀರು ಪೋಲಾಗುತ್ತದೆ. ಜನ ಖಾಸಗಿ ಕೊಳವೆಬಾವಿ, ಕೊಳವೆಬಾವಿಯಿಂದ ನೀರು ತರುವುದು ತಪ್ಪಿಲ್ಲ. ಪಂಚಾಯ್ತಿಯವರಿಗೆ ಜನರ ಪರದಾಟ ಕಾಣುತ್ತಿಲ್ಲ ಎಂದು ಜಯಪ್ಪ, ಜಗದೀಶ್, ಕಾಡಪ್ಪ, ಫಕ್ಕೀರಪ್ಪ, ನಾಗೇಂದ್ರಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಕೊಳವೆಬಾವಿ ಕೊರೆಯಿಸಿ 3 ತಿಂಗಳಾಗಿದ್ದರೂ ಪಂಚಾಯ್ತಿಯವರು ಕೊಳವೆಬಾವಿಗೆ ಹಣವಿಲ್ಲ. ಶಾಸಕರ ದಾವಣಗೆರೆ ಕಚೇರಿಗೆ ಹೋಗುತ್ತೇವೆ ಎಂದು ಸಬೂಬು ಹೇಳಿ ಕಾಲತಳ್ಳುತ್ತಿದ್ದಾರೆ. ಭೂಸೇನಾ ನಿಗಮದವರೇ ಕೆಲಸ ಮಾಡಿಸಲಿ. ಪಂಚಾಯ್ತಿಯವರು ನಿರ್ಲಕ್ಷ್ಯ ಮತ್ತು ಕಚ್ಚಾಟ ಮುಂದವರಿಸಿ ನೀರು ಕೊಡುವುದು ವಿಳಂಬವಾದರೆ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎನ್.ಜಯಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.