ADVERTISEMENT

ಚನ್ನಗಿರಿಯಲ್ಲಿ ಉತ್ತಮ ಮಳೆ: ನಿಟ್ಟುಸಿರು ಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 8:15 IST
Last Updated 20 ಆಗಸ್ಟ್ 2017, 8:15 IST

ಚನ್ನಗಿರಿ: ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ಉತ್ತಮವಾಗಿ ಜಡಿಮಳೆ ಬಿದ್ದಿದ್ದು, ‘ಬದುಕಿದೆಯಾ ಬಡ ಜೀವವೇ’ ಎನ್ನುವಂತೆ ರೈತರು ತುಂಬಾ ಸಂತಸಗೊಂಡಿದ್ದಾರೆ.

ಈ ಬಾರಿ ಅನಿಶ್ಚಿತತೆಯ ಮುಂಗಾರು ಮಳೆಯಿಂದಾಗಿ ರೈತರು ಮಳೆಗಾಗಿ ಸದಾ ಮೊರೆಯಿಡುವಂತಾಗಿತ್ತು. ಒಂದು ಗ್ರಾಮದಲ್ಲಿ ಮಳೆ ಬಿದ್ದರೆ, ಇನ್ನೊಂದು ಗ್ರಾಮದಲ್ಲಿ ಒಂದು ಹನಿ ಮಳೆ ಬೀಳುತ್ತಿರಲಿಲ್ಲ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಕೆರೆಕಟ್ಟೆಗಳು ಹಾಗೂ ಹಳ್ಳಕೊಳ್ಳಗಳಲ್ಲಿ ನೀರು ಹರಿದು ಹೋಗುವಷ್ಟು ಪ್ರಮಾಣದಲ್ಲಿ ಮಳೆ ಬಿದ್ದಿರುವುದಿಲ್ಲ. ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡಿ ಹೋಗಲು ಆರಂಭಿಸಿದ್ದವು.

ಶನಿವಾರ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಮಳೆ ಉತ್ತಮವಾಗಿ ಬಿದ್ದಿದೆ. ಇದರಿಂದ ಬೆಳೆಗಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ. ಒಂದು ರೀತಿಯಲ್ಲಿ ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಈ ಮಳೆ ‘ದುಡ್ಡಿನ ಮಳೆ’ಯಾಗಿದೆ.

ADVERTISEMENT

ಇದೇ ರೀತಿ ಈ ಇನ್ನು ಎರಡು ಮೂರು ದಿನ ಮಳೆ ಬಿದ್ದರೆ ಈಗಾಗಲೇ ಸೂಲಂಗಿ ಬಿಟ್ಟು ಕಾಳುಗಟ್ಟುತ್ತಿರುವ ಮೆಕ್ಕೆಜೋಳ ಬೆಳೆ ರೈತರ ಕೈಗೆ ಸಿಗಲಿದೆ. ತಾಲ್ಲೂಕಿನಾದ್ಯಂತ ಈ ಬಾರಿ 24,850 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳಯನ್ನಾಗಿ ಬಿತ್ತನೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.