ADVERTISEMENT

ಜನರಿಗೆ ತಲುಪದ ಕೇಂದ್ರದ ಯೋಜನೆಗಳು

ಜಗಳೂರಿನಲ್ಲಿ ಕೇಂದ್ರ ಸಚಿವ ನರೇಂದ್ರಸಿಂಗ್ ತೋಮಾರ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:18 IST
Last Updated 23 ಮಾರ್ಚ್ 2018, 10:18 IST

ಜಗಳೂರು: ಜನ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ₹ 21 ಸಾವಿರ ಕೋಟಿ ಅನುದಾನ ನೀಡಿದ್ದರೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಕೇಂದ್ರ ಗಣಿ ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಖಾತೆ ಸಚಿವ ನರೇಂದ್ರಸಿಂಗ್ ತೋಮಾರ್ ಆರೋಪಿಸಿದರು.

ಪಟ್ಟಣದ ಶಾದಿಮಹಾಲ್‌ನಲ್ಲಿ ಗರುವಾರ ಹಮ್ಮಿಕೊಂಡಿದ್ದ ಜಗಳೂರು ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಸಮಿತಿ ಅಧ್ಯಕ್ಷರ ಸಭೆ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸರ್ಕಾರದ ಅಸಹಕಾರವಿದ್ದರೂ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸುತ್ತೇವೆ’ ಎಂದ ಅವರು, ‘ಜನರ ಆಶೀರ್ವಾದ ಬಿಜೆಪಿ ಮೇಲಿದೆ. ಹೀಗಾಗಿ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಜಗಳೂರು ಕ್ಷೇತ್ರದಲ್ಲಿ ಎಸ್.ವಿ.ರಾಮಚಂದ್ರ ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. ವಿರೋಧ ಪಕ್ಷದವರು ಇಲ್ಲಸಲ್ಲದ ವಿವಾದ ಸೃಷ್ಟಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರ್ಯಕರ್ತರು, ನಾಗರಿಕರು ಕಿವಿಗೊಡಬಾರದು. ಕೇತ್ರದ ಜನರ, ಕಾರ್ಯಕರ್ತರ ಒಲವಿನಿಂದ 20 ಸಾವಿರಕ್ಕೂ ಅಧಿಕ ಮತಗಳಿಂದ ರಾಮಚಂದ್ರ ಗೆಲುವು ಸಾಧಿಸಲಿದ್ದಾರೆ’ ಎಂದು ಹೇಳಿದರು.

ಮಾಜಿ ಶಾಸಕ ರಾಮಚಂದ್ರ ಮಾತನಾಡಿ, ‘ಸೋಲುವ ಭೀತಿಯಿಂದ ವಿರೋಧ ಪಕ್ಷದವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನೂ ನಾಯಕ ಜನಾಂಗದವನೇ. ವಿವಾದ ಸೃಷ್ಟಿಸುವವರಿಗೆ ಕ್ಷೇತ್ರದ ಜನ ಪಾಠ ಕಲಿಸಲಿದ್ದಾರೆ. ನಿಮ್ಮ ಮನೆಯ ಮಗನಾದ ನಾನು, ನಿಮ್ಮ ಆಶೀರ್ವಾದದಿಂದಲೇ ಶಾಸಕನಾಗುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ದಾವಣಗೆರೆ, ತುಮಕೂರು, ಚಿತ್ರದುರ್ಗ ವಿಭಾಗದ ಸಹ ಪ್ರಮುಖರಾದ ಜಿ.ಎಂ.ಸುರೇಶ್ ಮಾತನಾಡಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಅರಸೀಕೆರೆ ಬ್ಲಾಕ್ ಅಧ್ಯಕ್ಷ ದ್ಯಾಮೇಗೌಡ, ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್.ಕೆ.ಮಂಜುನಾಥ್, ಯರಬಳ್ಳಿ ಸಿದ್ದಪ್ಪ, ಶಾಂತಕುಮಾರಿ,
ಮುಖಂಡರಾದ ನಿಜಲಿಂಗಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಎಚ್.ನಾಗರಾಜು, ಚಟ್ನಹಳ್ಳಿ ರಾಜಪ್ಪ, ಕೃಷ್ಣಮೂರ್ತಿ, ಶ್ರೀನಿವಾಸ್, ಬಿ.ಆರ್.ಅಂಜಿನಪ್ಪ, ಜೆ.ವಿ.ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.